10ರಿಂದ ಅಂಗನವಾಡಿ ಸಿಬ್ಬಂದಿ ಧರಣಿ

7

10ರಿಂದ ಅಂಗನವಾಡಿ ಸಿಬ್ಬಂದಿ ಧರಣಿ

Published:
Updated:

ದಾವಣಗೆರೆ: ಕನಿಷ್ಠ 10 ಸಾವಿರ ರೂ ವೇತನ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟ (ಎಐಟಿಯುಸಿ)ದ ವತಿಯಿಂದ ಅ. 10, 11 ಹಾಗೂ 12ರಂದು ರಾಜ್ಯಾದ್ಯಂತ ಎಲ್ಲ ತಹಶೀಲ್ದಾರರ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ.ಮೂರೂ ದಿನ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ಅಂಗನವಾಡಿ ಕೇಂದ್ರಗಳನ್ನು `ಬಂದ್~ ಮಾಡದೇ ಪ್ರತಿಭಟಿಸಲಾಗುವುದು. 12ರಂದು ಸಂಜೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.2ನೇ ಹಂತದ ಹೋರಾಟ ನ. 9ರಂದು ನಡೆಯಲಿದ್ದು, ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳನ್ನು `ಬಂದ್~ ಮಾಡಿ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟಿಸಲಾಗುವುದು. ಮೆರವಣಿಗೆ ಹಾಗೂ ಬಹಿರಂಗ ಸಭೆ ನಡೆಸಿ, ಮನವಿ ಸಲ್ಲಿಸಲಾಗುವುದು. ಡಿ. 15ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮಾವೇಶಗೊಳ್ಳುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವುದು.

ಡಿ. 23ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಸಮಿತಿ ಸಭೆಯಲ್ಲಿ 4ನೇ ಹಂತದ ಹೋರಾಟದ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಕ್ರಮವಾಗಿ `ಸಿ~ ಮತ್ತು `ಡಿ~ ಗ್ರೂಪ್ ನೌಕರರೆಂದು ಕಾಯಂಗೊಳಿಸಿ ಸರ್ಕಾರದ ಎಲ್ಲ ಸೌಲಭ್ಯ ಕೊಡಬೇಕು.

ಮಾಸಿಕ ರೂ 10 ಸಾವಿರ ವೇತನ ನೀಡಬೇಕು. ಸೇವಾ ಅವಧಿಯ ಆಧಾರದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷಕ್ಕೆ ರೂ 200 ಕೊಡಬೇಕು. ಅಂಗನವಾಡಿ ಕೇಂದ್ರಗಳು ಸಂಜೆ 4ರವರೆಗೆ ನಡೆಯುತ್ತಿರುವುದರಿಂದ ಮಕ್ಕಳಿಗೆ ಕೊಡುವ ಪೌಷ್ಟಿಕ ಆಹಾರದ ಪ್ರಮಾಣ ಹೆಚ್ಚಿಸಬೇಕು (ಪ್ರಸ್ತುತ ಮಧ್ಯಾಹ್ನ 1ರವರೆಗೆ ಅನ್ವಯ ಆಗುವಂತೆ ಆಹಾರ ಕೊಡಲಾಗುತ್ತಿದೆ), ಮಕ್ಕಳಿಗೆ ಸಮವಸ್ತ್ರ ಹಾಗೂ ಮಧ್ಯಾಹ್ನ ಮಲಗಲು ಹಾಸಿಗೆ, ಹೊದಿಕೆ ವಿತರಿಸಬೇಕು.ಇಎಸ್‌ಐ, ಪಿಎಫ್ ಯೋಜನೆಗೆ ಒಳಪಡಿಸಿ ಅವುಗಳಿಂದ ಸಿಗುವ ಎಲ್ಲ ಸೌಲಭ್ಯ ಒದಗಿಸಿಕೊಡಬೇಕು. ಕಿರು ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಸಮಾನ- ಸಂಭಾವನೆ ತಕ್ಷಣದಿಂದ ಕೊಡಬೇಕು. ಸಹಾಯಕಿಯರನ್ನು ನೇಮಿಸಬೇಕು.  ಕೇಂದ್ರಗಳ ಸಂಪೂರ್ಣ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡದೆ ಸರ್ಕಾರವೇ ವಹಿಸಿಕೊಳ್ಳಬೇಕು ಎಂಬುದು ಪ್ರಮುಖ ಬೇಡಿಕೆಗಳು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry