ಸೋಮವಾರ, ಮೇ 23, 2022
20 °C

10 ಗ್ರಾಮಗಳಲ್ಲಿ ಕಲುಷಿತ ನೀರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಯುಪಿಸಿಎಲ್‌ನಿಂದ 10 ಗ್ರಾಮಗಳಲ್ಲಿ ಕುಡಿಯಲು ಯೋಗ್ಯವಾದ ನೀರು ದೊರಕುತ್ತಿಲ್ಲ.  ಸ್ಥಾವರದಿಂದ ಉಪ್ಪು ನೀರನ್ನು ಕೃಷಿ ಭೂಮಿಗಳಿಗೆ ಬಿಡಲಾಗುತ್ತಿದೆ. ಇದರಿಂದ ಬೇಸಾಯ ಮಾಡಲು ಆಗುತ್ತಿಲ್ಲ.-ಇದು ಸೋಮವಾರ ಉಡುಪಿಗೆ ಭೇಟಿ ನೀಡಿದ್ದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್. ನಾಯಕ್ ಅವರಿಗೆ ಎಲ್ಲೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶಶಿಧರ್ ಶೆಟ್ಟಿ ನೀಡಿರುವ ದೂರು.ಮಕ್ಕಳು ಹಾಗೂ ಸ್ಥಳೀಯರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಯೋಜನಾ ಪ್ರದೇಶದ ಜನರ ಬದುಕುವ ಹಕ್ಕನ್ನೆ ಸ್ಥಾವರ ಕಸಿದುಕೊಂಡಿದೆ ಎಂದು ಅವರು ದೂರು ನೀಡಿದರು. ತ್ಯಾಜ್ಯ ನೀರನ್ನು ನೇರವಾಗಿ ಸಮುದ್ರಕ್ಕೆ ಬಿಡುವುದರಿಂದ ಮೀನುಗಳ ಸಂತತಿ ನಾಶವಾಗುತ್ತಿದೆ. ಇದರಿಂದ ಕಿರು ಮೀನುಗಾರಿಕೆಗೆ ತೊಂದರೆಯಾಗುತ್ತಿದೆ ಮೀನುಗಾರರು ಕಷ್ಟ ಅನುಭವಿಸುತ್ತ್ದ್ದಿದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇವೆ. 2010ರಲ್ಲಿ ಜಿಲ್ಲಾಧಿಕಾರಿಗಳು 302 ಕುಟುಂಬಗಳಿಗೆ ಪರಿಹಾರ ನೀಡಲು ಕಂಪೆನಿಯವರಿಗೆ ಸೂಚಿಸಿದರೂ ಕಂಪೆನಿಯಿಂದ ಯಾವುದೇ ಪರಿಹಾರ ದೊರಕಿಲ್ಲ ಎಂದು ಎರ್ಮಾಳು ಭರತ್ ಕುಮಾರ್ ಆಯೋಗಕ್ಕೆ ದೂರು ನೀಡಿದರು.ಮಕ್ಕಳಿಗೆ ವಂಚನೆ

ಮಲ್ಪೆ ಬಂದರಿನಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ವಂಚನೆ ಆಗುತ್ತಿದೆ. ಶಾಲೆಗಳಿಗೆ ಸೇರಿಸಲು ಹೋದರೆ ಅಧಿಕಾರಿಗಳು ದಾಖಲೆ ಪತ್ರ ಕೇಳುತ್ತಾರೆ ಎಂದು ಫ್ರೆಂಡ್ಸ್ ಕ್ಲಬ್‌ನ ಗುರುರಾಜ್ ಸಾಲಿಯಾನ್ ದೂರು ನೀಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಶರ್ಮಾ ಅವರಿಗೆ ಈ ಬಗ್ಗೆ ಗಮನಹರಿಸುವಂತೆ ನಾಯಕ್ ಸೂಚಿಸಿದರು. ಅತಿಕ್ರಮಣ: ಕೆಮ್ಮಣ್ಣು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುತೋನ್ಸೆಯಲ್ಲಿ ರಸ್ತೆ ನಿರ್ಮಿಸಲು ಗ್ರಾಮ ಪಂಚಾಯಿತಿಗೆ ಜಾಗ ನೀಡಿದೆ. ಆದರೆ ಆ ಜಾಗವನ್ನು ಈಗ ಅತಿಕ್ರಮಣ ಮಾಡುತ್ತಿದ್ದಾರೆ ಎಂದು ರಿಚರ್ಡ್ ಲೂಯಿಸ್ ದೂರು ನೀಡಿದರು.ಹೊಸ ಮನೆ ಕಟ್ಟಿ ಮನೆಗೆ ವಿದ್ಯುತ್ ಸಂಪರ್ಕಕ್ಕಾಗಿ ನಿರಾಕ್ಷೇಪಣಾ ಪತ್ರ ನೀಡಲು ಐರೋಡಿ ಗ್ರಾಮ ಪಂಚಾಯ್ತಿ ಆಡಳಿತ ಹಾಗೂ ಪಿಡಿಒ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಹಂಗಾರಕಟ್ಟೆಯ ರಫೀಕ್ ದೂರು ನೀಡಿದರು.`ಸೇವಾ ಹಿರಿತನದ ಮೇಲೆ 2007ರಲ್ಲಿ ಗೃಹರಕ್ಷಕ ದಳದ ಕಮಾಂಡೆಂಟ್ ಆಗಿ ನೇಮಕ ಆಗಬೇಕಿದ್ದ ನನಗೆ ಅನ್ಯಾಯವಾಗಿದೆ~ ಎಂದು ವಕೀಲ ಸದಾಶಿವ ಕೆ.ಅಮೀನ್ ದೂರಿನಲ್ಲಿ ತಿಳಿಸಿದ್ದಾರೆ.ಮೀನು ಲಾರಿಗಳಿಂದ ತಾಜ್ಯ ನೀರನ್ನು ರಸ್ತೆಗೆ ಹರಿಯ ಬಿಟ್ಟ ಕಾರಣ ಅಪಘಾತದಿಂದ ಅನೇಕ ಸಾವು ನೋವುಗಳು ಸಂಭವಿಸಿದೆ. ಈ ಕುರಿತು ಪತ್ರಿಕೆಗಳಲ್ಲಿ ವರದಿ ಬಂದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ.  ರಾಜ್ಯಕ್ಕೆ ಮಾದರಿ ಎನಿಸಿಕೊಂಡ ಉಡುಪಿ ಜಿಲ್ಲಾ ಸಂಕೀರ್ಣವಾಗಿ 6 ತಿಂಗಳಾದರೂ ಸರಿಯಾದ ಬಸ್ಸಿನ ವ್ಯವಸ್ಥೆ ಮಾಡಲಾಗಿಲ್ಲ ಎಂದು ಪತ್ರಕರ್ತರು ಆಯೋಗದ ಅಧ್ಯಕ್ಷರಿಗೆ ದೂರಿದರು. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.ಉಡುಪಿಗೆ ಬಂದ ಸಂದರ್ಭದಲ್ಲಿ ನೀರಿನ ಸಮಸ್ಯೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಮಳೆ ನೀರು ಇಂಗಿಸುವ ಘಟಕ ಸ್ಥಾಪಿಸಿ ಅಂತರ್ಜಲ ಮಟ್ಟ ಏರಿಸಲು ಕ್ರಮ ಕೈಗೊಳ್ಳುವಂತೆ ಪೌರಾಯುಕ್ತ ಗೋಕುಲ್‌ದಾಸ್ ನಾಯಕ್‌ಗೆ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಸೂಚಿಸಿದರು. ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಸದಾಶಿವ ಪ್ರಭು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ವಿ.ವೆಂಕಟೇಶಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.