10 ಪೈಸೆ ಬಡ್ಡಿ ದರದಲ್ಲಿ ಸಾಲ

7

10 ಪೈಸೆ ಬಡ್ಡಿ ದರದಲ್ಲಿ ಸಾಲ

Published:
Updated:

ಹಿರಿಯೂರು: ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾರ್ಗ ತುಳಿಯುವುದು ಬೇಡ. ಸರ್ಕಾರ ಇತ್ತಿಚೆಗೆ ಜಾರಿಗೊಳಿಸಿರುವ 10 ಪೈಸೆ ಬಡ್ಡಿ ದರದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಲ ವಿತರಿಸಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಕರೆ ನೀಡಿದರು.ತಾಲ್ಲೂಕಿನ ಆರನಕಟ್ಟೆ ಗ್ರಾಮದಲ್ಲಿ ಬುಧವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಹಮ್ಮಿಕೊಂಡಿದ್ದ ಕೆಸಿಸಿ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸತತ ಬರಗಾಲದಿಂದ ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.

 

ಖಾಸಗಿಯವರಲ್ಲಿ ಹೆಚ್ಚು ಬಡ್ಡಿಯ ಹಣ ತಂದು ತೀರಿಸಲಾಗದೆ ಆತ್ಮಹತ್ಯೆ ಮಾರ್ಗ ಹಿಡಿದವರುಂಟು. ಕೆಲವೊಮ್ಮೆ ಸಕಾಲಕ್ಕೆ ಮಳೆಯಾಗದಿದ್ದರೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ತೀರಿಸುವುದು ಕಷ್ಟ. ಹೀಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ರೈತರು ಕೃಷಿ ಜತೆ ಹೈನುಗಾರಿಕೆ ನಡೆಸಲು, ಟ್ರ್ಯಾಕ್ಟರ್ ಕೊಳ್ಳಲು, ಮಕ್ಕಳ ಉನ್ನತ ವ್ಯಾಸಂಗಕ್ಕೆ ಸಾಲ ನೀಡುತ್ತೇವೆ ಎಂದರು.ಮಹಿಳಾ ಸ್ವಹಾಯ ಸಂಘಗಳು ನಡೆಸುವ ಗುಡಿ ಕೈಗಾರಿಕೆಗಳಿಗೆ ಆರ್ಥಿಕ ನೆರವು ನೀಡಲಾಗುವುದು. ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲೂ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಬೇಕು. ಸಂಘಗಳ ಮೂಲಕ ರಸಗೊಬ್ಬರ, ಆಹಾರ ಸಾಮಗ್ರಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕಿನಿಂದ ಪಡೆದ ಸಾಲವನ್ನು ಇತರ ಉದ್ದೇಶಗಳಿಗೆ ಬಳಸದೆ, ಸಕಾಲದಲ್ಲಿ ಮರುಪಾವತಿಸಿದರೆ ಹೊಸಬರಿಗೆ ಸಾಲ ನೀಡಲು ಸಹಾಯ ಆಗುತ್ತದೆ ಎಂದರು.ರೈತ ಮುಖಂಡರಾದ ಎಸ್.ಬಿ. ಶಿವಕುಮಾರ್, ಲೋಲಾಕ್ಷಮ್ಮ ಮಾತನಾಡಿದರು. ಸಹಕಾರ ಸಂಘದಲ್ಲಿ ಮೂವತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ತಿಮ್ಮದಾಸಪ್ಪ ಮತ್ತು ಸದಾಶಿವನ್ ಅವರನ್ನು ಲಕ್ಷ್ಮೀಕಾಂತ್ ಸನ್ಮಾನಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ನಿಧನಕ್ಕೆ ಸಂತಾಪ ಸೂಚಿಸಲಾಯಿತು.ಎನ್. ಕರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆ. ಸುಬ್ರಹ್ಮಣ್ಯಂ ಉಪಸ್ಥಿತರಿದ್ದರು. ಪಿ.ಕೆ. ಅಶೋಕ್‌ಕುಮಾರ್ ಸ್ವಾಗತಿಸಿದರು. ಶಿವಣ್ಣ ವಂದಿಸಿದರು. ವಿ.ಎಲ್. ಗೌಡ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry