ಭಾನುವಾರ, ಅಕ್ಟೋಬರ್ 20, 2019
24 °C

10 ರೂ.ಗೆ ಮಹತ್ವದ ಪುಸ್ತಕ !

Published:
Updated:

ಬೆಂಗಳೂರು: `ಕನ್ನಡ ಪುಸ್ತಕದ ಅನುವಾದ ಸೇರಿದಂತೆ ಹಲವು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಈ ಬಾರಿಯು 2 ಕೋಟಿ ರೂಪಾಯಿ ಅನುದಾನ ದೊರೆತಿದ್ದು, ಶ್ರೇಷ್ಠ ಪುಸ್ತಕಗಳನ್ನು ಜನ ಸಾಮಾನ್ಯರೆಡೆಗೆ ಕೊಂಡೊಯ್ಯುವತ್ತ ಚಿಂತನೆ ನಡೆಸಲಾಗಿದೆ~ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ ತಿಳಿಸಿದರು.ಭಾರತೀಯ ವಿದ್ಯಾಭವನವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನುವಾದಿತ ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.`ವಿದ್ಯಾಭವನದ ಸಹಯೋಗದಲ್ಲಿ ಈವರೆಗೆ ಒಟ್ಟು 25 ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದ್ದು, ವರ್ಷದ ಅಂತ್ಯದೊಳಗೆ 75 ಪುಸ್ತಕಗಳನ್ನು ಬಿಡುಗಡೆ ಮಾಡುವ ಯೋಜನೆಯಿದೆ. ಈ ಎಲ್ಲಾ ಕೃತಿಗಳನ್ನು ಕೇವಲ 10 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗುವುದು~ ಎಂದು ಹೇಳಿದರು.`ಸುಮಾರು 40 ವರ್ಷಗಳ ಕಾಲ ವಿದ್ಯಾಭವನದೊಂದಿಗೆ ಸಂಬಂಧ ಹೊಂದಿದ್ದೇನೆ. ಬಿಡುಗಡೆಯಾಗಿರುವ ಎಲ್ಲಾ ಪುಸ್ತಕಗಳು ಮಹತ್ತರ ಕೃತಿಗಳಾಗಿದ್ದು, ಜನಸಾಮಾನ್ಯರಿಗೆ ಉತ್ತಮ ಮಾಹಿತಿ ದೊರೆಯುತ್ತದೆ~ ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, `ಕಡಿಮೆ ದರದಲ್ಲಿ ಉತ್ತಮ ಪುಸ್ತಕಗಳನ್ನು ಬಿಡುಗಡೆ ಮಾಡಬೇಕೆಂಬ ಯೋಜನೆಯ ಹಿಂದಿನ ಪ್ರೇರಕ ಶಕ್ತಿ ದಿವಂಗತ ಮತ್ತೂರು ಕೃಷ್ಣಮೂರ್ತಿ. ಅವರ ಅನುಪಸ್ಥಿತಿಯಲ್ಲಿ ಈ ಯೋಜನೆಯು ಯಶಸ್ವಿಯಾಗಿದೆ~ ಎಂದರು.`ವಿದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಪಸರಿಸುತ್ತಿರುವ ಲಂಡನ್ನಿನ ವಿದ್ಯಾಭವನದ ಶಾಖೆಯ ಕಾರ್ಯವೈಖರಿ ಸ್ತುತ್ಯರ್ಹ. ಈ ಶಾಖೆಯಲ್ಲಿ ಒಟ್ಟು 925 ವಿದ್ಯಾರ್ಥಿಗಳು ವೇದಾಧ್ಯಯನ, ಕನ್ನಾಡಾಧ್ಯಯನ, ಹಿಂದೂಸ್ತಾನಿ ಸಂಗೀತ, ದಾಸರ ಪದಗಳು ಸೇರಿದಂತೆ ದೇಸಿ ಸಂಸ್ಕೃತಿಯನ್ನು ಆಳವಾಗಿ ಅಭ್ಯಸಿಸುತ್ತಿರುವುದು ನಿಜಕ್ಕೂ ಕನ್ನಡ ಕಟ್ಟುವ ಕೆಲಸ~ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಲಂಡನ್ನಿನ ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ.ಎನ್.ನಂದಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ, ನಿರ್ದೇಶಕ ಎಚ್.ಎನ್.ಸುರೇಶ್, ವಿದ್ಯಾಭವನದ ಮೈಸೂರು ಶಾಖೆಯ ಅಧ್ಯಕ್ಷ ಡಾ.ಎ.ವಿ.ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.

Post Comments (+)