10 ವರ್ಷದ ಗೃಹಬಂಧನದಿಂದ ಬಿಡುಗಡೆ

7

10 ವರ್ಷದ ಗೃಹಬಂಧನದಿಂದ ಬಿಡುಗಡೆ

Published:
Updated:
10 ವರ್ಷದ ಗೃಹಬಂಧನದಿಂದ ಬಿಡುಗಡೆ

ಸವದತ್ತಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಕಾಲು ಮತ್ತು ಕೈಗಳಿಗೆ ಕಬ್ಬಿಣದ ಬೇಡಿ ಹಾಕಿ 10 ವರ್ಷಗಳಿಂದ ಗೃಹಬಂಧನದಲ್ಲಿ ಇರಿಸಿದ್ದ ವ್ಯಕ್ತಿಯನ್ನು ತಹಶೀಲ್ದಾರ ಡಿ.ವೈ.ಪಾಟೀಲ ಸಮ್ಮುಖದಲ್ಲಿ ಪೊಲೀಸರು ಬಿಡುಗಡೆ ಮಾಡಿಸಿದರು.ಪ್ರಕಾಶ ಬೆಳವಡಿ (40) ಎಂಬಾತನನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಬೆಳವಡಿ ಕುಟುಂಬ ರಾಜಕೀಯ ರಂಗದಲ್ಲಿ ಹೆಸರು ಮಾಡಿದ್ದ ಶ್ರೀಮಂತ ಮನೆತನ. ಈ ಮನೆತನದ ಪ್ರಕಾಶ ಎಲ್ಲರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ, ಮೈಮೇಲೆ ಬಟ್ಟೆ ಇಲ್ಲದ ಸ್ಥಿತಿಯಲ್ಲಿ ಗಲೀಜಿನಲ್ಲಿ ಮತ್ತು ಕತ್ತಲೆಯ ಕೋಣೆಯಲ್ಲಿ ಗೃಹಬಂಧನದಲ್ಲಿ ಇದ್ದ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುದೇಪ್ಪ ಪೂಜಾರ `ಪ್ರಜಾವಾಣಿ'ಗೆ ತಿಳಿಸಿದರು.`ಪ್ರಕಾಶ ಮೊದಲು ಇತರರಂತೆಯೇ ಇದ್ದ. ಹುಬ್ಬಳ್ಳಿಯ ಬೊಮ್ಮಸಮುದ್ರದ ಮಲ್ಲವ್ವ ಎಂಬಾಕೆಯೊಂದಿಗೆ ಈತನ ಮದುವೆಯಾಗಿದೆ. ಒಬ್ಬಳು ಮಗಳೂ ಇದ್ದಾಳೆ. ಆ ನಂತರ ಈತನನ್ನು ಅವರ ಮನೆಯವರೇ ಗೃಹಬಂಧನದಲ್ಲಿ ಇರಿಸಿದ್ದರು. ಕ್ರಮೇಣ ಜನರ ಸಂಪರ್ಕ ಕಳೆದುಕೊಂಡ ಈತನಿಗೆ ಮಾತು ಮರೆತೇ ಹೋಗಿದೆ' ಎಂದು ವಿವರ ನೀಡಿದರು. `ನನಗ ಊಟ ಕೊಡುತ್ತಿರಲಿಲ್ಲಾರೀ. ಒಮ್ಮೆ ಮೂರು ರೊಟ್ಟಿ, ಖಾರಾ ಕೊಡುತ್ತಿದ್ದರು. ಆಮೇಲೆ ಸ್ವಲ್ಪ ಎಲಿ ಅಡಿಕೆ ಅಷ್ಟ ಕೊಡುತಿದ್ರು..... ಎಂದವನೇ ಮೂರು ಟ್ರ್ಯಾಕ್ಟರ್, ಲಾರಿ, ಟಯರ್ ಎಂದು ಪ್ರಕಾಶ ಬಡಬಡಿಸುತ್ತಿದ್ದ' ಎಂದರು.ಅಲ್ಲಿದ್ದವರು ಸಾಹೇಬ್ರ ಬಂದಾರ್ ನೋಡು ಎಂದಾಗ, `ನನಗ್ ಹೊಲಾ ಮನಿ ಕೊಡಸರ‌್ರಿ ... ಕಾಲಿಗೆ ಹಾಕಿದ್ದನ್ನು ತಗೀಸ್ರಿ ... ಎಂದು ಕೈಮುಗಿದ' ಎಂದು ಪೂಜಾರ ತಿಳಿಸಿದರು. ಆತನ ಪತ್ನಿ, ಮಗಳೊಂದಿಗೆ ತವರು ಮನೆಯಲ್ಲಿ ನೆಲೆಸಿದ್ದಾರೆ. ಪ್ರಕಾಶನ ತಂದೆ-ತಾಯಿ, ಸೋದರ ಹಿರೇಕುಂಬಿಯಲ್ಲಿಯೇ ಇದ್ದಾರೆ. ಮನೆಗೆ ಅಧಿಕಾರಿಗಳು ಹೋದಾಗ ಅಲ್ಲಿ ಅವರಾರೂ ಇರಲಿಲ್ಲ. ಬೀಗ ಹಾಕಿಕೊಂಡು ಹೊರಹೋಗಿದ್ದರು. ಅಧಿಕಾರಿಗಳು ಬೀಗ ತೆಗೆಯಿಸಿ, ಪ್ರಕಾಶನಿಗೆ ಹಾಕಿದ್ದ ಬೇಡಿಯನ್ನೂ ತೆಗೆಯಿಸಿ, ಚಿಕಿತ್ಸೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

-ಸದಾಶಿವ ಮಿರಜಕರ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry