ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10-15 ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಮಾನಯಾನ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಯತ್ನವಾಗಿ ಕೇಂದ್ರ ಸರ್ಕಾರವು  ಮುಂದಿನ ಕೆಲವು ವರ್ಷಗಳಲ್ಲಿ 10ರಿಂದ 15 ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ (ಅಭಿವೃದ್ಧಿಯಾಗದ ಅಥವಾ ಬಂಜರು ಭೂಮಿಯಲ್ಲಿ ಹೊಸದಾಗಿ ನಿರ್ಮಿಸುವ ವಿಮಾನ ನಿಲ್ದಾಣ) ನಿರ್ಮಾಣ ಮತ್ತು ಮೆಟ್ರೊ ನಗರಗಳು ಹೊರತಾಗಿ ಇತರ ಕಡೆಗಳಲ್ಲಿರುವ 50 ವಿಮಾನ ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ಯೋಜಿಸುತ್ತಿದೆ.

`ಮುಂದಿನ ಎರಡು ವರ್ಷಗಳಲ್ಲಿ 50 ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುವುದು ಮತ್ತು 10ರಿಂದ 15 ಗ್ರೀನ್‌ಫೀಲ್ಡ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು~ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಹೇಳಿದರು.

ನವದೆಹಲಿಯಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಪ್ರಾಂತ್ಯದ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರ 49ನೇ ಸಮ್ಮೇಳನದಲ್ಲಿ ಭಾವಹಿಸಿದ ಬಳಿಕ ಅಜಿತ್ ಸಿಂಗ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಭಾರತದಲ್ಲಿ ನಾಗರಿಕ ವಿಮಾನಯಾನ ವಲಯವು ವಾರ್ಷಿಕವಾಗಿ ಶೇ 9ರಷ್ಟು ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದ  ಸಚಿವರು, `ಮುಂದಿನ ಕೆಲವು ವರ್ಷಗಳಲ್ಲಿ ವಿಮಾನ ಸಂಚಾರ ದಟ್ಟಣೆ ದುಪ್ಪಟ್ಟಾಗುವ ನಿರೀಕ್ಷೆ ಇದೆ~ ಎಂದರು.

`ದೇಶದ ಮಧ್ಯಮವರ್ಗ ಬೆಳೆಯುತ್ತಿದೆ. ವ್ಯಾಪಾರವೂ ಪ್ರಗತಿ ಹೊಂದುತ್ತಿದೆ.  ದೇಶವು ಕನಿಷ್ಠ ಶೇ 6ರಷ್ಟು ಜಿಡಿಪಿ ಗುರಿ ಸಾಧಿಸಿದೆ. ವಿಮಾನಯಾನ ಕ್ಷೇತ್ರಕ್ಕೆ ಈಗ  ತಾತ್ಕಾಲಿಕವಾಗಿ ಹಿನ್ನಡೆಯಾಗಿರಬಹುದು. ಆದರೆ ಕ್ರಮೇಣ ವಿಮಾನ ಸಂಚಾರ ದಟ್ಟಣೆ ಹೆಚ್ಚಲಿದೆ~ ಎಂದು ಅಜಿತ್ ಸಿಂಗ್ ವಿವರಿಸಿದರು.

ಇದಕ್ಕೂ ಮುನ್ನ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, `ಹೆಚ್ಚುತ್ತಿರುವ ವಾಯು ಸಂಚಾರ ದಟ್ಟಣೆಯನ್ನು ನಿರ್ವಹಿಸುವುದಕ್ಕಾಗಿ ಹಾಲಿ ವಿಮಾನ ನಿಲ್ದಾಣಗಳ ಆಧುನೀಕರಣ ಮತ್ತು ಸರ್ಕಾರಿ ವಲಯ, ಖಾಸಗಿ ವಲಯ ಹಾಗೂ  ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಗ್ರೀನ್‌ಫೀಲ್ಡ್ ವಿಮಾನ  ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT