ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಗ್ರಾಮಗಳಿಗೆ ಸೌರವಿದ್ಯುತ್‌ ದೀಪ

Last Updated 14 ಸೆಪ್ಟೆಂಬರ್ 2013, 10:33 IST
ಅಕ್ಷರ ಗಾತ್ರ

ಶಿರಸಿ: ಹತ್ತು ಗ್ರಾಮಗಳಲ್ಲಿ ಸೌರವಿದ್ಯುತ್ ದೀಪಗಳನ್ನು ಅಳವಡಿಸಲು ವಿಶೇಷ ಪ್ರಯತ್ನ ನಡೆಸಲು ಹಾಗೂ ಅದಕ್ಕಾಗಿ ನಾಲ್ಕು ಸ್ಥಳಗಳಲ್ಲಿ ಸಮಾಲೋಚನಾ ಸಭೆ ನಡೆಸಲು ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ಸ್ವ ಸಹಾಯ ಸಂಘಗಳ ಸಮಾವೇಶ ನಿರ್ಧರಿಸಿದೆ.

ಶುಕ್ರವಾರ ಮಠದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ 100ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ನೆರವಿನೊಂದಿಗೆ ಗೊಬ್ಬರ ತಯಾರಿ ಪ್ರಾತ್ಯಕ್ಷಿಕೆ, ಗ್ರಾಮಾಭ್ಯುದಯ ಸಂಸ್ಥೆ ಮೂಲಕ ಭಜನಾ ತರಬೇತಿ ಶಿಬಿರ, ಸ್ವ ಸಹಾಯ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ವಿಶೇಷ  ಅಭ್ಯಾಸವರ್ಗ ನಡೆಸಲು ಸಮಾವೇಶ ನಿರ್ಣಯಿಸಿದೆ.

ಕಸಿತರಬೇತಿ, ಗೃಹ ಕೈಗಾರಿಕಾ ತರಬೇತಿ, ವನವಾಸಿಗಳ ಸಮಾವೇಶವನ್ನು ತಾಲ್ಲೂಕು ಮಟ್ಟದಲ್ಲಿ ಆಯೋಜನೆ, ಅಂಗವಿಕಲರ ಸೇವಾ ಶಿಬಿರ ಆರೋಗ್ಯ ತಪಾಸಣಾ ಶಿಬಿರಗಳ ಆಯೋ­ಜಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮ­ದಲ್ಲಿ ಪಾಲ್ಗೊಂಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿ, ’ಸ್ವ ಸಹಾಯ ಸಂಘದ ಮಹಿಳೆಯರಿಗೆ ಬರುವಷ್ಟು ಸ್ಪಷ್ಟ ಬಡ್ಡಿ ಲೆಕ್ಕ ಬ್ಯಾಂಕ್‌ನವರಿಗೆ ಬರುವುದಿಲ್ಲ. ಸ್ವ ಸಹಾಯ ಸಂಘಗಳ ಕಲ್ಪನೆ ಹುಟ್ಟಿಕೊಂಡ ಮೇಲೆ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಮಹಿಳೆಯರ ಬುದ್ಧವಂತಿಕೆ, ಆರ್ಥಿಕ ನಿರ್ವಹಣೆ ಅರ್ಥವಾಗಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕುಮಟಾ, ಅಂಕೋಲಾ, ಯಲ್ಲಾಪುರ ತಾಲ್ಲೂಕುಗಳನ್ನು ಕರ್ನಾಟಕ ರೂರಲ್ ಲೈವ್ಲಿಹುಡ್ ಮಿಷನ್ (ಕೆಆರ್ಎಲ್ಎಂ) ಸಂಜೀವಿನಿ ಕಾರ್ಯಕ್ರಮದ ಅಡಿಯಲ್ಲಿ ಸೇರಿಸುವ ಮೂಲಕ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಶಕ್ತಿ ತುಂಬಲು ರಾಜ್ಯ ಸರ್ಕಾರ ಮುಂದಾಗಿದೆ. ಸಂಘದಿಂದ ಪಡೆದ ಸಾಲವನ್ನು ಸಮಯ ಮಿತಿಯೊಳಗೆ ಮರುಪಾವತಿ ಮಾಡಿದರೆ ಶೇ 4ರ ಬಡ್ಡಿ ಯೋಜನೆಯ ಲಾಭ ಪಡೆಯಲು ಸಾಧ್ಯವಿದೆ. ಶೇ 4ಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಭರಿಸುತ್ತದೆ ಎಂದರು.

ಬಯೋಗ್ಯಾಸ್‌ ನಿರ್ಮಾಣ ಕುರಿತಂತೆ ರಚಿಸಿರುವ 10 ಕೋಟಿ ರೂಪಾಯಿ ಪ್ರಸ್ತಾವನೆ ಸರ್ಕಾರದಲ್ಲಿರುವುದನ್ನು ಅನಂತ ಅಶೀಸರ ತಿಳಿಸಿದ್ದಾರೆ. ಯಾವುದೇ ಅಡೆತಡೆ ಇಲ್ಲದೆ ಪ್ರಸ್ತಾವನೆ ಸ್ಪಷ್ಟವಾಗಿದ್ದಲ್ಲಿ ಕೆಲವೇ ತಾಸುಗಳಲ್ಲಿ ಅದನ್ನು ಮಂಜೂರಿಗೊಳಿಲಾಗುವುದು ಎಂದರು. ಸ್ವರ್ಣವಲ್ಲಿ ಮಠದ ಆವರಣದಲ್ಲಿರುವ ಸೋದೆ ಅರಸರ ಕಾಲದ ಪುರಾತನ ಕೆರೆಯನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಗೊಳಿಸುವಂತೆ ಜಿ.ಪಂ. ಮುಖ್ಯ ಸಿಇಒಗೆ ಸಚಿವರು ಸೂಚಿಸಿದರು.

ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ  ಮುಖ್ಯ ಕಾರ್ಯನಿರ್ವಹಣಾಧಿ­ಕಾರಿ ಸುಬ್ರಾಯ ಕಾಮತ್ ಅವರು ರಘುನಂದನ ಭಟ್ಟ, ಶೈಲಜಾ ಗೊರ್ನಮನೆ ಬರೆದ ’ಸ್ವ ಸಹಾಯ ಸಂಘಗಳ ಯಶೋಗಾಥೆ’ ಕೈಪಿಡಿ ಅನಾವರಣ ಗೊಳಿಸಿದರು. ವೃಕ್ಷಲಕ್ಷ ಆಂದೋಲನದ ಅನಂತ ಅಶೀಸರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗುರುಪಾದ ಹೆಗಡೆ, ಮಠದ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಎನ್.ಹೆಗಡೆ, ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಶ್ರೀಪಾದ ಹೆಗಡೆ, ಹಳಿಯಾಳ ರುಡ್‌ಸೆಟ್‌ ಯೋಜನಾಧಿ­ಕಾರಿ ಮಹಾಬಲೇಶ್ವರ ನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT