ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ

Last Updated 19 ಫೆಬ್ರುವರಿ 2011, 11:25 IST
ಅಕ್ಷರ ಗಾತ್ರ

ಮಡಿಕೇರಿ: ಹನುಮದ್ ಶಕ್ತಿ ಜಾಗರಣ ಅಭಿಯಾನ ಸಮಿತಿ ವತಿಯಿಂದ ವಿರಾಟ್ ಹಿಂದೂ ಸಮಾಜೋತ್ಸವವನ್ನು ಫೆ.24ರಂದು ನಗರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ವಿವಿಧೆಡೆಗಳಿಂದ ಸುಮಾರು 10 ಸಾವಿರ ಮಂದಿ ಈ ಸಮಾಜೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಿ.ನಾ. ಸೋಮೇಶ್, ಅಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ವಿಶ್ವೇಶತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಸಮಾಜೋತ್ಸವದಲ್ಲಿ ಬಜರಂಗ ದಳದ ರಾಷ್ಟ್ರೀಯ ಸಂಚಾಲಕ ಸುಭಾಷ್ ಚೌಹಾಣ್ ಪ್ರಧಾನ ಭಾಷಣ ಮಾಡಲಿದ್ದು, ವಿಶ್ವ ಹಿಂದೂ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದರು.

24ರಂದು ಮಧ್ಯಾಹ್ನ 2 ಗಂಟೆಗೆ ಗದ್ದುಗೆ ಬಳಿಯಿಂದ ಭವ್ಯ ಶೋಭಾಯಾತ್ರೆ ನಡೆಯಲಿದೆ. ಧಾರ್ಮಿಕ, ಪೌರಾಣಿಕ ಹಿನ್ನೆಲೆಯುಳ್ಳ 15ಕ್ಕೂ ಹೆಚ್ಚು ಕಲಾಮಂಟಪಗಳು ಶೋಭಾಯಾತ್ರೆಗೆ ಮೆರುಗು ನೀಡಲಿವೆ. ಅಲ್ಲದೆ, ಡೊಳ್ಳು ಕುಣಿತ, ಗೊಂಬೆ ಕುಣಿತ, ವೀರಗಾಸೆ, ಕಂಸಾಳೆ ನೃತ್ಯ, ಪೂಜಾ ಕುಣಿತ, ಪಟದ ಕುಣಿತ, ಕೊಡಗಿನ ಮೂಲನಿವಾಸಿಗಳ ಎರವರ ಕುಣಿತ ಸೇರಿದಂತೆ ಒಂಬತ್ತು ಕಲಾ ತಂಡಗಳು ಶೋಭಾಯಾತ್ರೆಯಲ್ಲಿ ಗಮನಸೆಳೆಯಲಿವೆ ಎಂದರು.

ಸಮಾಜೋತ್ಸವದ ಅಂಗವಾಗಿ 21ರಂದು ಮಡಿಕೇರಿ ತಾಲ್ಲೂಕಿನಲ್ಲಿ ದ್ವಿಚಕ್ರ ವಾಹನಗಳ ರ್ಯಾಲಿ ಏರ್ಪಡಿಸಲಾಗಿದೆ. 22ರಂದು 200ಕ್ಕೂ ಅಧಿಕ ಆಟೋ ಚಾಲಕರು ಮಡಿಕೇರಿಯಲ್ಲಿ ಜಾಥಾ ನಡೆಸಿ ಸಮಾಜೋತ್ಸವದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ಹೇಳಿದರು.ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯಬೇಕು. ಸುಪ್ರೀಂಕೋರ್ಟ್ ತೀರ್ಪಿನನ್ವಯ ಶ್ರೀರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಸತ್ತು ಅಂಗೀಕಾರ ನೀಡಬೇಕು. ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಷಡ್ಯಂತ್ರದ ವಿರುದ್ಧ ಈ ಸಮಾಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.ಹನುಮದ್ ಶಕ್ತಿ ಜಾಗರಣ ಅಭಿಯಾನ ಸಮಿತಿಯ ಅಧ್ಯಕ್ಷ ಬಿ.ಜೆ. ಚಿಣ್ಣಪ್ಪ, ಖಜಾಂಚಿ ಶಿವಾಜಿ, ಸಹ ಕಾರ್ಯದರ್ಶಿಗಳಾದ ಚೇತನ್ ಹಾಗೂ ಧನಂಜಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT