ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವು, ವಿದ್ಯುತ್ ಪೂರೈಕೆ ಅಸ್ತವ್ಯಸ್ತ

ಅಮೆರಿಕ- ಕೆನಡಾಗಳಲ್ಲಿ ಭಾರಿ ಹಿಮಪಾತ, ಹಿಮಗಾಳಿ
Last Updated 10 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ/ಐಎಎನ್‌ಎಸ್): ಅಮೆರಿಕದ ಈಶಾನ್ಯ ಭಾಗ ಮತ್ತು ಕೆನಡಾದಲ್ಲಿ  ಭಾರಿ ಹಿಮಪಾತ ಮತ್ತು ಹಿಮಗಾಳಿ ಕಾರಣ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.

ಅಮೆರಿಕದಲ್ಲಿ 11 ವರ್ಷದ ಬಾಲಕ ಸೇರಿದಂತೆ  ಏಳು ಮಂದಿ ಸಾವನ್ನಪ್ಪಿದ್ದಾರೆ. ಕೆನಡಾದಲ್ಲಿ ಮೂವರು ಮೃತರಾಗಿದ್ದಾರೆ.
ರಸ್ತೆಯಲ್ಲಿ ಮೂರು ಅಡಿಗಳಷ್ಟು ಹಿಮ ಶೇಖರಣೆ ಗೊಂಡಿದ್ದು, ಏಳು ಲಕ್ಷ ಮನೆಗಳಿಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಿದೆ. ಇದರಿಂದ ಈ ಬಾರಿಯ ಚಳಿಗಾಲ ಈ ಭಾಗದ ಜನರಿಗೆ ಬಹಳ ದುರ್ಬರ ಎನಿಸಿದೆ.

ಇಂತಹ ಪ್ರಕೃತಿ ವಿಪ್ಲವದ ಮಧ್ಯೆಯೇ ವೊರ್ಸೆಸ್ಟರ್ ವೆರ್ನಾನ್ ಹಿಲ್‌ನಲ್ಲಿ ಗರ್ಭಿಣಿಯೊಬ್ಬರು ಮುಂಜಾನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ರಾಷ್ಟ್ರೀಯ ಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು `ಹೆರಾಲ್ಡ್' ವರದಿ ಮಾಡಿದೆ.  ರಭಸದಿಂದ ಕೂಡಿದ ಹಿಮಗಾಳಿ, ದೈತ್ಯಾಕಾರದ ಹಿಮಪಾತದಿಂದಾಗಿ ರಸ್ತೆ, ಮನೆಗಳು ಹಿಮಾವೃತಗೊಂಡಿವೆ. ಇದರಿಂದ ಜನರು ದಿಗ್ಭ್ರಾಂತರಾಗಿದ್ದಾರೆ. ಜೊತೆಗೆ ಆರೋಗ್ಯದಲ್ಲೂ ಏರುಪೇರು ಉಂಟಾಗಿದೆ ಎಂದು `ನ್ಯೂಯಾರ್ಕ್ ಟೈಮ್ಸ' ವರದಿ ಮಾಡಿದೆ.

ಪೋರ್ಟ್‌ಲೆಂಡ್, ಮೈನ್‌ಗಳಲ್ಲಿ ದಾಖಲೆ ಮಟ್ಟದಲ್ಲಿ (32 ಅಂಗುಲ) ಹಿಮಪಾತ ಆಗಿದೆ. ನ್ಯೂ ಹೆವನ್ ಕೌಂಟಿಯಲ್ಲಿ 36.2 ಅಂಗುಲ, ಮಿಲ್‌ಫೊರ್ಡ್‌ನಲ್ಲಿ 38 ಅಂಗುಲದಷ್ಟು ಹಿಮ ಶೇಖರಣೆ ಆಗಿದ್ದು, ಇಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.  `ಈ ಸಾರಿಯ ಹಿಮಪಾತ, ಹಿಮಗಾಳಿಯು ಹಿಂದಿನ ಎಲ್ಲಾ ದಾಖಲೆಯನ್ನು ಅಳಿಸಿಹಾಕಿದೆ' ಎಂದು ಕನೆಕ್ಟಿಕಟ್‌ನ ರಾಜ್ಯಪಾಲ ಡೇನಿಲ್ ಪಿ. ಮಲೊಯ್ ಹೇಳಿದ್ದಾರೆ.

`ವಿದ್ಯುತ್ ಇಲ್ಲದ ಸ್ಥಳಗಳಲ್ಲಿ ಬೆಚ್ಚನೆಯ (ಹೀಟಿಂಗ್) ಕೇಂದ್ರಗಳನ್ನು ತೆರೆಯಲಾಗುವುದು' ಎಂದೂ ಅವರು ತಿಳಿಸಿದ್ದಾರೆ. ಹಿಮಪಾತ, ಹಿಮಗಾಳಿಯ ಕಾರಣ ಕಳೆದ ಎರಡು ದಿನಗಳಿಂದ 5800 ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮತ್ತಷ್ಟು ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣಗಳ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT