100 ಕೋಟಿಗೂ ಹೆಚ್ಚು ಹಣ ಅನರ್ಹರ ಪಾಲು

7

100 ಕೋಟಿಗೂ ಹೆಚ್ಚು ಹಣ ಅನರ್ಹರ ಪಾಲು

Published:
Updated:

ಬೆಳಗಾವಿ: ಮಧ್ಯವರ್ತಿಗಳ ಹಾವಳಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ  ಸಾಮಾಜಿಕ ಭದ್ರತೆ ಯೋಜನೆಯಡಿ ರಾಜ್ಯ ಸರ್ಕಾರದ ರೂ 100 ಕೋಟಿಗೂ ಹೆಚ್ಚು ಹಣ ಜಿಲ್ಲೆಯ 1.33 ಲಕ್ಷ ಅನರ್ಹ ಫಲಾನುಭವಿಗಳ ಪಾಲಾಗಿದೆ.ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯಡಿ ಸರ್ಕಾರ ನಗದು ರೂಪದಲ್ಲಿ ನೆರವು ನೀಡುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಮಧ್ಯವರ್ತಿಗಳು ಹಾಗೂ ಕೆಳ ಹಂತದ ಅಧಿಕಾರಿಗಳು ಅನರ್ಹ ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡುವ ಮೂಲಕ ಸರ್ಕಾರವನ್ನು ವಂಚಿಸಿದ್ದಾರೆ.ಜಿಲ್ಲೆಯಲ್ಲಿ ಈ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಮೂರು ವರ್ಷದ ಹಿಂದೆ ಎರಡು ಲಕ್ಷದಷ್ಟಿತ್ತು. ಈಗ ಈ ಸಂಖ್ಯೆ 4,29,429 ಆಗಿದೆ. ಫಲಾನುಭವಿಗಳು ಸಲ್ಲಿಸಿರುವ ದಾಖಲೆಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ 1,33,592 ಮಂದಿ ಅನರ್ಹರಿರುವುದು ಪತ್ತೆಯಾಗಿದೆ ಎನ್ನುತ್ತಾರೆ ಸಾಮಾಜಿಕ ಭದ್ರತೆ ಯೋಜನಾಧಿಕಾರಿ ಎಸ್. ಸವಿತಾ.ರಾಜ್ಯ ಸರ್ಕಾರಿ ನೌಕರರಾದ ಐದು ಮಂದಿ ಕೂಡ ಈ ಯೋಜನೆಗಳ ಮೂಲಕ ಪಿಂಚಣಿ ಪಡೆಯುತ್ತಿರುವುದು ಬೈಲಹೊಂಗಲ ತಾಲ್ಲೂಕಿನಲ್ಲಿ ಪತ್ತೆಯಾಗಿದೆ. ಈಗಾಗಲೇ ಆ ನೌಕರರನ್ನು ಅಮಾನತುಗೊಳಿಸಿ, ಅವರಿಂದ ಇಲ್ಲಿವರೆಗೆ ಪಡೆದಿದ್ದ ಪಿಂಚಣಿ ಹಣವನ್ನು ವಸೂಲು ಮಾಡಲಾಗಿದೆ ಎನ್ನುತ್ತಾರೆ ಬೈಲಹೊಂಗಲ ತಹಶೀಲ್ದಾರ ಪಿ.ಎನ್.ಲೋಕೇಶಸಂಧ್ಯಾ ಸುರಕ್ಷಾ ಯೋಜನೆಯಡಿ ನೆರವು ಪಡೆಯಲು 60 ವರ್ಷವಾಗಿರಬೇಕು. ಆದರೆ  40 ವರ್ಷಕ್ಕೆ ಫಲಾನುಭವಿಗಳಾಗಿದ್ದಾರೆ. ಸತ್ತವರ ಹೆಸರಿನಲ್ಲಿ ಪಿಂಚಣಿ ವಿತರಣೆಯಾಗಿರುವುದು ಬೆಳಕಿಗೆ ಬಂದಿದೆ. ಅಂಗವಿಕಲರಲ್ಲದವರಿಗೆ ಅಂಗವಿಕಲರು ಎಂದು ಸರ್ಕಾರಿ ವೈದ್ಯರೇ ಶಿಫಾರಸು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಈಗ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಅನರ್ಹರ ಪಿಂಚಣಿಯನ್ನು ಈಗಾಗಲೇ ತಡೆ ಹಿಡಿದಿದ್ದಾರೆ. ಆದರೆ ಸರ್ಕಾರವನ್ನು ವಂಚಿಸಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಇನ್ನೊಂದೆಡೆ ಅನರ್ಹರೆಂದು ಪಿಂಚಣಿ ರದ್ದತಿಗೆ ಒಳಗಾಗಿರುವ ಫಲಾನುಭವಿಗಳು ಈಗಾಗಲೇ ಬೆಳಗಾವಿ, ಸವದತ್ತಿ ಹಾಗೂ ರಾಮದುರ್ಗ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ಆರಂಭಿಸಿದ್ದಾರೆ. ಅರ್ಹರಿದ್ದಾಗಲೂ ಪಿಂಚಣಿ ರದ್ದು ಮಾಡಲಾಗಿದೆ ಎಂದು ಅವರು ದೂರುತ್ತಾರೆ.ಹಣ ಕೊಟ್ಟವರಿಗೆ ಪಿಂಚಣಿ ಮುಂದುವರಿಯುವಂತೆ ಮಾಡಿರುವ ಅಧಿಕಾರಿಗಳು ಹಣ ಕೊಡದವರ ಪಿಂಚಣಿಯನ್ನು ರದ್ದು ಮಾಡಿದ್ದಾರೆ. ಅನರ್ಹ ಫಲಾನುಭವಿಗಳು ಹಾಗೆಯೇ ಉಳಿದಿದ್ದಾರೆ. ಹೀಗಾಗಿ ಅರ್ಹರೇ ತೊಂದರೆ ಎದುರಿಸುವಂತಾಗಿದೆ ಎನ್ನುತ್ತಾರೆ ಫಲಾನುಭವಿ ಕಮಲವ್ವ ಪಾಟೀಲ.

ಯಾವುದರಲ್ಲಿ ಎಷ್ಟು?

ಯೋಜನೆಗಳು            ಫಲಾನುಭವಿಗಳು     ಅನರ್ಹರು

ವೃದ್ಧಾಪ್ಯ ವೇತನ          91,660              35,757

ವಿಧವಾ ವೇತನ         1,03,278              23,696

ಅಂಗವಿಕಲರ ವೇತನ     83,804              26,530

ಸಂಧ್ಯಾ ಸುರಕ್ಷಾ        1,50,687               47,609

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry