100 ಪಿಎಚ್.ಡಿ `ಅಕ್ರಮ-ಸಕ್ರಮ' ಪ್ರಸ್ತಾಪ!

7
ಬೆಂಗಳೂರು ವಿಶ್ವವಿದ್ಯಾಲಯ ಆಡಳಿತ ಮಂಡಳಿಯಿಂದ ಸ್ಪಂದನೆ

100 ಪಿಎಚ್.ಡಿ `ಅಕ್ರಮ-ಸಕ್ರಮ' ಪ್ರಸ್ತಾಪ!

Published:
Updated:

ಬೆಂಗಳೂರು: ಸಂಶೋಧನಾ ಪ್ರಬಂಧ ಸಿದ್ಧಪಡಿಸಲು ವಿಫಲರಾಗಿ ಅರ್ಧಕ್ಕೆ ಸಂಶೋಧನೆಯನ್ನು ನಿಲ್ಲಿಸಿದವರು, ಕೃತಿಚೌರ್ಯದ ಕಾರಣ ಪಿಎಚ್.ಡಿ ತಿರಸ್ಕರಿಸಲ್ಪಟ್ಟವರು, ಗರಿಷ್ಠ ಕಾಲಾವಕಾಶದ ಅವಧಿಯಲ್ಲಿ ಪಿಎಚ್.ಡಿಯನ್ನು ಪೂರ್ಣಗೊಳಿಸದ ಸುಮಾರು 100ಕ್ಕೂ ಅಧಿಕ ಮಂದಿ ಪಿಎಚ್.ಡಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಪ್ರಸ್ತಾಪಕ್ಕೆ ವಿವಿ ಆಡಳಿತವೂ ಸಕಾರಾತ್ಮಕವಾಗಿ ಸ್ಪಂದಿಸಿದೆ.ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ನಿಯಮದ ಪ್ರಕಾರ ಮೂರರಿಂದ ಏಳು ವರ್ಷಗಳಲ್ಲಿ ಪಿಎಚ್.ಡಿಯನ್ನು ಪೂರ್ಣಗೊಳಿಸಬೇಕು. ಸಾಮಾನ್ಯವಾಗಿ ಶೇ 50ಕ್ಕೂ ಅಧಿಕ ಅಭ್ಯರ್ಥಿಗಳು ಮೂರು ವರ್ಷಗಳಲ್ಲೇ ಸಂಶೋಧನಾ ಪ್ರಬಂಧವನ್ನು ಮಂಡಿಸುತ್ತಾರೆ. ಅನಾರೋಗ್ಯ, ಹೆರಿಗೆ ರಜೆ ಮತ್ತಿತರ ಕಾರಣಗಳ ಹಿನ್ನೆಲೆಯಲ್ಲಿ ಪಿಎಚ್.ಡಿ ಪೂರ್ಣಗೊಳಿಸಲು ಏಳು ವರ್ಷಗಳ ಗರಿಷ್ಠ ಅವಧಿಯನ್ನು ನೀಡಲಾಗುತ್ತಿದೆ. ಕೆಲವೊಮ್ಮೆ ಅಪರೂಪದ ಪ್ರಕರಣಗಳಲ್ಲಿ ಕುಲಪತಿಯವರು ಮಾನವೀಯ ನೆಲೆಯಲ್ಲಿ ಅವಕಾಶ ಕಲ್ಪಿಸುವ ಉದಾಹರಣೆಗಳು ಇವೆ.`ವಿವಿಯಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ನಿಗದಿತ ಕಾಲಾವಧಿಯಲ್ಲಿ ಪಿಎಚ್.ಡಿ ಪೂರ್ಣಗೊಳಿಸಿಲ್ಲ. 12ಕ್ಕೂ ಅಧಿಕ ವರ್ಷಗಳಿಂದ `ಸಂಶೋಧನೆ' ನಡೆಸಿ ಪ್ರಬಂಧ ಮಂದಿಸಲು ವಿಫಲರಾದವರು ಕೆಲವರು ಇದ್ದಾರೆ. ಅಲ್ಲದೆ, ಗುಣಮಟ್ಟದ ಕೊರತೆ ಹಾಗೂ ಕೃತಿಚೌರ್ಯದಂತಹ ಪ್ರಕರಣಗಳ ಹಿನ್ನೆಲೆಯಲ್ಲಿ ಸಂಶೋಧನಾ ಪ್ರಬಂಧವನ್ನು ತಿರಸ್ಕರಿಸಲ್ಪಟ್ಟವರ ಪಟ್ಟಿ ದೊಡ್ಡದು ಇದೆ' ಎಂದು ಬೆಂಗಳೂರು ವಿವಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.`ಪ್ರಬಂಧ ಮಂಡನೆಗೆ ಮತ್ತೆ ಅವಕಾಶ ಕಲ್ಪಿಸಬೇಕು ಎಂದು ನೂರಕ್ಕೂ ಅಧಿಕ ಮಂದಿ ಮನವಿ ಸಲ್ಲಿಸಿದ್ದಾರೆ. ಗರಿಷ್ಠ ಕಾಲಮಿತಿಯಲ್ಲಿ ಪಿಎಚ್.ಡಿ ಪ್ರಬಂಧ ಪೂರ್ಣಗೊಳಿಸದವರು, ಪಿಎಚ್.ಡಿ ನೋಂದಣಿ ರದ್ದು ಆಗಿರುವವರು ಈ ಪಟ್ಟಿಯಲ್ಲಿ ಸೇರಿದ್ದಾರೆ. ಮಾನವೀಯ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಉದ್ದೇಶಿಸಿ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಈ ಪ್ರಸ್ತಾಪವನ್ನು ಮುಂದಿಡಲಾಗಿದೆ. ಪರಿಷತ್ತಿನ ಸಭೆಯಲ್ಲಿ ಒಪ್ಪಿಗೆ ಸಿಕ್ಕ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ' ಎಂದು ಎಂದು ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ.ಆರ್.ಸೋಮಶೇಖರ್ ತಿಳಿಸಿದರು.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಈ ವಿಚಾರವನ್ನು ಮುಂದಿಟ್ಟಾಗ ಸದಸ್ಯರೆಲ್ಲ ತೀವ್ರ ವಿರೋಧ ವ್ಯಕ್ತಪಡಿಸಿದರು. `ವಿವಿಯಲ್ಲಿ ಅಕ್ರಮ-ಸಕ್ರಮಕ್ಕೆ ಅವಕಾಶ ಕಲ್ಪಿಸುವುದು ಬೇಡ. ಇದರಲ್ಲಿ ಕೃತಿಚೌರ್ಯ ನಡೆಸಿದಂತಹ ಪ್ರಕರಣಗಳು ಇವೆ. ಈಗ ಅವಕಾಶ ಕಲ್ಪಿಸಿದರೆ ಮತ್ತಷ್ಟು ಮನವಿಗಳು ಬರುತ್ತವೆ' ಎಂದು ಸದಸ್ಯರು ಅಭಿಪ್ರಾಯಪಟ್ಟರು.`ಅನರ್ಹ ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತೆ ಸಂಶೋಧನೆಗೆ ಅವಕಾಶ ಕಲ್ಪಿಸಲು ಮುಂದಾಗಿರುವ ವಿಶ್ವವಿದ್ಯಾಲಯದ ನಡೆ ಮೂರ್ಖತನದ್ದು. ಇದರ ಹಿಂದಿರುವ ಹುನ್ನಾರ ಏನು ಎಂಬುದು ಸ್ಪಷ್ಟವಾಗಬೇಕು. ಸಂಶೋಧನೆ ಸಮಾಜಕ್ಕೆ ಉಪಯೋಗ ಆಗುವಂತಿರಬೇಕು. ಕಾಟಾಚಾರಕ್ಕೆ ನಡೆಸುವ ಸಂಶೋಧನೆ ಸ್ವಂತ ಲಾಭಕ್ಕಾಗಿ. ಇಂತಹ ಚಟುವಟಿಕೆಗಳಿಗೆ ಬೆಂಬಲಿಸಿದರೆ ವಿಶ್ವವಿದ್ಯಾಲಯದ ಘನತೆ ಪಾತಾಳಕ್ಕೆ ಇಳಿಯಲಿದೆ. ಇಂತಹ ಚಟುವಟಿಕೆಗಳಿಗೆ ವಿಶ್ವವಿದ್ಯಾಲಯ ಬೆಂಬಲ ನೀಡಲೇಬಾರದು' ಎಂದು ವಿದ್ಯಾವಿಷಯಕ ಪರಿಷತ್ ಸದಸ್ಯ ಎಚ್.ಕರಣ್ ಕುಮಾರ್ ಒತ್ತಾಯಿಸಿದರು. `ಪಿಎಚ್.ಡಿ ಪ್ರಬಂಧ ಮಂಡಿಸುವ ಸಂದರ್ಭದಲ್ಲಿ ವಿವಿಯಿಂದ ವಿಳಂಬ ಹಾಗೂ ತಪ್ಪು ಆಗಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಮಾನವೀಯ ನೆಲೆಯಲ್ಲಿ ಅವಕಾಶ ನೀಡಬಹುದು. ಅವರಲ್ಲಿ ಕ್ಷಮೆಯಾಚಿಸಿಯೇ ವಿವಿ ಅವಕಾಶ ಕಲ್ಪಿಸಬೇಕು. ಅರ್ಹತೆ ಇಲ್ಲದ ವಿದ್ಯಾರ್ಥಿಗಳಿಗೆ ಮಾನವೀಯತೆ ತೋರುವ ಅಗತ್ಯವೇ ಇಲ್ಲ' ಎಂದು ಅವರು ಸಲಹೆ ನೀಡಿದರು. `ಮನವಿ ಸಲ್ಲಿಸಿದವರಲ್ಲಿ ಕೃತಿಚೌರ್ಯ ನಡೆಸಿ ಪಿಎಚ್.ಡಿ ಪದವಿ ಪಡೆಯಲು ವಿಫಲರಾದವರು ಸೇರಿದ್ದಾರೆ. ಕೃತಿಚೌರ್ಯ ಎಸಗಿದವರು ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಈಗ ಮತ್ತೆ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಈಗ ಎಲ್ಲ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಿಎಚ್.ಡಿ ಪದವಿ ಪಡೆದರೆ ಉದ್ಯೋಗ ಪಡೆಯಲು ನೆರವಾಗುತ್ತದೆ ಎಂಬ ಭಾವನೆಯಿಂದ ಮನವಿ ಮಾಡಿದ್ದಾರೆ' ಎಂದು ಅವರು ಅಭಿಪ್ರಾಯಪಟ್ಟರು.`ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮತ್ತೆ ಕಾಲಾವಕಾಶ ನೀಡುವುದರಿಂದ ವಿವಿಯಲ್ಲಿ ಅಕ್ರಮ-ಸಕ್ರಮಕ್ಕೆ ಅವಕಾಶ ಕಲ್ಪಿಸಿದಂತೆ ಆಗುತ್ತದೆ. ಈ ಪ್ರವೃತ್ತಿಗೆ ಬೆಂಬಲ ನೀಡುವುದು ಬೇಡ. ಈ ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತೆ ಅವಕಾಶ ನೀಡಬಾರದು' ಎಂದು ವಿದ್ಯಾವಿಷಯಕ ಪರಿಷತ್ ಸದಸ್ಯೆ ಜ್ಯೋತಿ ವಿಜಯ್ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry