ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಹಾಸಿಗೆ ಆಸ್ಪತ್ರೆ ಸೇವೆಗೆ ಸಿದ್ಧ !

Last Updated 6 ಫೆಬ್ರುವರಿ 2012, 6:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಾಲಿಕೆ ಒಡೆತನದ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ಹೊಸ ಬ್ಲಾಕ್ ಕಾರ್ಯ ನಿರ್ವಹಣೆಗೆ ಸನ್ನದ್ಧವಾಗಿದ್ದು, ಉದ್ಘಾಟನೆಗೊಳ್ಳಲು ಜನಪ್ರತಿನಿಧಿಗಳ ಸಮಯಕ್ಕಾಗಿ ಕಾಯುತ್ತಾ ಕುಳಿತಿದೆ. 100 ಹಾಸಿಗೆ ಸಾಮರ್ಥ್ಯದ ಈ ಕಟ್ಟಡವನ್ನು ರೂ 1.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಶಸ್ತ್ರ ಚಿಕಿತ್ಸೆ ವಿಭಾಗ, ತುರ್ತು ನಿಗಾ ಘಟಕ, ಹೆರಿಗೆ ಕೋಣೆ, ಎಕ್ಸ್‌ರೇ ಮತ್ತು ಅಲ್ಟ್ರಾ ಸೌಂಡ್ ಉಪಕರಣ ಸೇರಿದಂತೆ ಬೇಕಾದ ಎಲ್ಲ ಸೌಲಭ್ಯವನ್ನೂ ಈ ಹೊಸ ಬ್ಲಾಕ್ ಹೊಂದಿದೆ. ನೂರು ಹೊಸ ಕಾಟ್‌ಗಳೂ ಆಗಲೇ ಬಂದಿವೆ. ಕಾರ್ಯಾಚರಣೆ ಆರಂಭಿಸಲು ಔಪಚಾರಿಕ ಸಮಾರಂಭವಷ್ಟೇ ಬಾಕಿ ಉಳಿದಿದೆ.

ಪಾಲಿಕೆ ಆರಂಭಿಸಿದ ಆರೋಗ್ಯ ಸಂಸ್ಥೆಗಳಲ್ಲೇ ಚಿಟಗುಪ್ಪಿ ಆಸ್ಪತ್ರೆ ಅತ್ಯಂತ ಹಳೆಯದಾಗಿದೆ. ಬ್ರಿಟಿಷರ ಕಾಲದಲ್ಲಿ ಕಟ್ಟಿದ ಐತಿಹಾಸಿಕ ಕಟ್ಟಡದಲ್ಲಿ ಅದು ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯ ಮೂಲ ಸೌಕರ್ಯಗಳು ಈ ಆಸ್ಪತ್ರೆಗೆ ಇಲ್ಲ ಎಂಬ ಕೂಗು ಮೊದಲಿನಿಂದಲೂ ಇದೆ. ಈಗ ಅಂತಹ ಎಲ್ಲ ಕೊರತೆಗಳನ್ನು ನೀಗಿಸುವ ಭರವಸೆಯೊಂದಿಗೆ ಹೊಸ ಕಟ್ಟಡ ತಲೆ ಎತ್ತಿದೆ.

`ಹೊಸ ಕಟ್ಟಡ ಕಾರ್ಯಾರಂಭ ಮಾಡಿದ ಮೇಲೆ ಹಳೆಯ ಕಟ್ಟಡವನ್ನು ಅದರ ಪಾರಂಪರಿಕ ಸೊಬಗು ಉಳಿಸಿಕೊಂಡೇ ನವೀಕರಣ ಮಾಡಲಾಗುವುದು. ಇದರಿಂದ ನಾವು 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಜನರ ಸೇವೆಗೆ ಲಭ್ಯವಾಗುತ್ತದೆ~ ಎಂದು ಪಾಲಿಕೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಹೇಳುತ್ತಾರೆ.

ಚಿಟಗುಪ್ಪಿ ಆಸ್ಪತ್ರೆಯಲ್ಲಿ ಪುರುಷ, ಮಹಿಳೆ, ಹೆರಿಗೆ ಮತ್ತು ಹೊರರೋಗಿಗಳು ಎಂಬ ನಾಲ್ಕು ವಿಭಾಗಗಳು ಇವೆಯಾದರೂ `ಹೆರಿಗೆ ಆಸ್ಪತ್ರೆ~ ಎಂದೇ ಅದು ಹೆಸರಾಗಿದೆ. ದೊಡ್ಡ ಸಂಖ್ಯೆಯಲ್ಲಿ ಗರ್ಭಿಣಿಯರು ಹೆರಿಗೆಗಾಗಿ ಈ ಆಸ್ಪತ್ರೆಗೆ ಬರುವುದೇ ಇದಕ್ಕೆ ಕಾರಣವಾಗಿದೆ. ಸೂಕ್ತ ಸೌಲಭ್ಯಗಳಿಲ್ಲದೆ ಇಲ್ಲಿಗೆ ಬಂದ ಗರ್ಭಿಣಿಯರ ಪೈಕಿ ಹೆಚ್ಚಿನವರನ್ನು ಕಿಮ್ಸಗೆ ಕಳುಹಿಸಿ ಕೊಡಲಾಗುತ್ತಿತ್ತು ಎಂಬ ದೂರುಗಳು ಕೇಳಿ ಬಂದಿದ್ದವು.

`ಚಿಟಗುಪ್ಪಿ ಆಸ್ಪತ್ರೆಯನ್ನು ಜನಸ್ನೇಹಿಯಾಗಿ ಬೆಳೆಸುವುದು ನಮ್ಮ ಉದ್ದೇಶವಾಗಿದೆ. ಈ ಹಿಂದೆ ಒಂದಿಷ್ಟು ಕೊರತೆಗಳು ಇದ್ದಿರಬಹುದು. ಈಗ ಹೊಸದಾಗಿ 100 ಹಾಸಿಗೆಗಳ ಬ್ಲಾಕ್ ತಲೆ ಎತ್ತಿದೆ. ಯಾವುದೇ ಅತ್ಯಾಧುನಿಕ ಆಸ್ಪತ್ರೆಯಲ್ಲಿ ಇರಬೇಕಾದ ಎಲ್ಲ ಸೌಲಭ್ಯಗಳನ್ನೂ ಇಲ್ಲಿ ಒದಗಿಸಲಾಗಿದೆ. ಜನರಿಗೆ ಇನ್ನುಮುಂದೆ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಲಿದೆ~ ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಐವತ್ತು ವರ್ಷಗಳ ಹಿಂದಿನ ಅಂದಾಜನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ಕನಿಷ್ಠ 23 ಜನ ವೈದ್ಯರು ಇಲ್ಲಿ ಇರಬೇಕು. ಆದರೆ, ಸದ್ಯ ಎಂಟು ವೈದ್ಯರು ಮಾತ್ರ ಇದ್ದಾರೆ. ಉಳಿದ ಸಿಬ್ಬಂದಿ ಸಂಖ್ಯೆಯಲ್ಲೂ ಸಾಕಷ್ಟು ಕೊರತೆಯಿದೆ. ಎಲ್ಲ ರೀತಿಯ ಸೌಕರ್ಯ ಹೊಂದಿ ದರೂ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಜನರಿಗೆ ಗುಣಮಟ್ಟದ ಸೇವೆಯನ್ನು ನೀಡಲಾಗುತ್ತಿಲ್ಲ ಎಂಬ ಕೊರಗಿದೆ.

ಈ ವಿಷಯವಾಗಿ ಆಯುಕ್ತರನ್ನು ಪ್ರಶ್ನಿಸಿದಾಗ, `ಹೌದು, ಆಸ್ಪತ್ರೆಗೆ ಸಿಬ್ಬಂದಿ ಕೊರತೆ ಇರುವುದು ನಿಜ. ಸರ್ಕಾರ ಹೊಸದಾಗಿ ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಇದೊಂದು ನಮಗೆ ದೊಡ್ಡ ತೊಡಕಾಗಿದೆ. ಆದ್ದರಿಂದಲೇ ಪಾಲಿಕೆ ಹಲವು ಖಾಸಗಿ ವೈದ್ಯಕೀಯ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ತಜ್ಞ ವೈದ್ಯರ ಸೇವೆಯನ್ನು ಒದಗಿಸಲು ಯತ್ನಿಸುತ್ತಿದೆ~ ಎಂದು ಉತ್ತರಿಸುತ್ತಾರೆ.

`ರಾಜ್ಯ ಸರ್ಕಾರಕ್ಕೆ ಸಾಕಷ್ಟು ಸಲ ಪತ್ರ ಬರೆದು ಅಗತ್ಯ ವೈದ್ಯರನ್ನು ಒದಗಿಸುವಂತೆ ಆಗ್ರಹಿಸಲಾಗಿದೆ. ಇದುವರೆಗೆ ಯಾವ ವೈದ್ಯರನ್ನೂ ಕೊಟ್ಟಿಲ್ಲ~ ಎಂದೆನ್ನುವ ಅವರು, `ಸ್ತ್ರೀರೋಗ ತಜ್ಞರು, ಚಿಕ್ಕಮಕ್ಕಳ ತಜ್ಞರು ಸೇರಿದಂತೆ ಅಗತ್ಯ ವೈದ್ಯರ ಸೇವೆ ಆಸ್ಪತ್ರೆಗೆ ಇದ್ದೇ ಇದೆ. ಪಾಲಿಕೆಯಿಂದ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕ ಮಾಡಿಕೊಂಡು ಉಳಿದ ಕೊರತೆಯನ್ನು ನೀಗಿಸಲಾಗುತ್ತಿದೆ~ ಎಂದು ವಿವರಿಸುತ್ತಾರೆ. 

ಆಸ್ಪತ್ರೆ ವಿಷಯವಾಗಿ ಕೇಳಿಬರುವ ಮತ್ತೊಂದು ಪ್ರಮುಖ ದೂರೆಂದರೆ ಅದು ಔಷಧಿಯದ್ದು. `ಔಷಧಿ ವಿತರಣೆಗೆ ಯಾವುದೇ ರೀತಿ ತೊಂದರೆ ಆಗದಂತೆ ಹಣ ಒದಗಿಸಲಾಗುತ್ತದೆ~ ಎಂದು ಡಾ. ತ್ರಿಲೋಕಚಂದ್ರ ಸ್ಪಷ್ಟನೆ ನೀಡುತ್ತಾರೆ. ಮೂಲತಃ ವೈದ್ಯರಾಗಿರುವ ಅವರು ಆಸ್ಪತ್ರೆ ವಿಷಯವಾಗಿ ಹೆಚ್ಚಿನ ಕಳಕಳಿ ವ್ಯಕ್ತಪಡಿಸುತ್ತಾರೆ.

`ಹೇಗಾದರೂ ಮಾಡಿ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಕಾಯಂ ವೈದ್ಯರ ವ್ಯವಸ್ಥೆ ಮಾಡುವ ಯೋಚನೆ ಇದೆ. ಏನಾಗುತ್ತದೆ ನೋಡೋಣ~ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT