1001 ಕಲಾವಿದರಿಂದ ಗಾಯನ- ವಾದನ ಮನಸೂರೆಗೊಂಡ ... ಚಂದ್ರನೆಡೆಗೆ

7

1001 ಕಲಾವಿದರಿಂದ ಗಾಯನ- ವಾದನ ಮನಸೂರೆಗೊಂಡ ... ಚಂದ್ರನೆಡೆಗೆ

Published:
Updated:
1001 ಕಲಾವಿದರಿಂದ ಗಾಯನ- ವಾದನ ಮನಸೂರೆಗೊಂಡ ... ಚಂದ್ರನೆಡೆಗೆ

ಮೈಸೂರು: ಮುಂಜಾನೆ `ನಾದಸ್ವರ~ದಿಂದ ಶ್ರುತಿಗೊಂಡ ಸಂಗೀತ ಕಾರ್ಯಕ್ರಮ, ಮುಸ್ಸಂಜೆಯ `ಲಯಲಹರಿ~ಯೊಂದಿಗೆ ಅನುರಣಿಸಿ ಸಮಾಪ್ತಿಯಾಗುವ ಮೂಲಕ 1001 ಕಲಾವಿದರ 12 ಗಂಟೆ ನಿರಂತರ ಪ್ರದರ್ಶನಕ್ಕೆ ಮೈಸೂರಿನ ಅಂಬಾವಿಲಾಸ ಅರಮನೆ ಭಾನುವಾರ ಸಾಕ್ಷಿಯಾಯಿತು.ಮೈಸೂರು ದಸರಾ ಮಹೋತ್ಸವ- 2012ರ ಅಂಗವಾಗಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ `ಸೂರ್ಯನಿಂದ ಚಂದ್ರನೆಡೆಗೆ~ ಎಂಬ ವಿವಿಧ ಪ್ರಕಾರಗಳ ಸಂಗೀತ ಮತ್ತು ವಾದ್ಯಮೇಳ ಕಾರ್ಯಕ್ರಮ ನಡೆಯಿತು.

ಎಂ.ನಾರಾಯಣ ನೇತೃತ್ವದಲ್ಲಿ 100 ಕಲಾವಿದರ ತಂಡ `ನಾದಸ್ವರ~ ನುಡಿಸುವ ಮೂಲಕ ಶುಭಾರಂಭ ಮಾಡಿದರು. ನಂತರ ನಿತಿನ್ ರಾಜಾರಾಂ ಶಾಸ್ತ್ರಿ ಮತ್ತು ತಂಡದಿಂದ `ಭಕ್ತಿ ಸಂಗೀತ~ದ ಝೇಂಕಾರ ಮೊಳಗಿತು.ಅಧ್ಯಾತ್ಮದ ಅಲೆಯಲ್ಲಿ ತೇಲುತ್ತಿದ್ದ ಸಂಗೀತ ರಸಿಕರಿಗೆ, ಸಮೀರ್ ಎಲ್.ರಾವ್ ಮತ್ತು ತ್ಯಾಗರಾಜ ಅವರ ಜುಗಲ್‌ಬಂದಿಯಲ್ಲಿ ಮೂಡಿಬಂದ ಕೊಳಲ ವಾದನ ಮುದ ನೀಡಿತು. ನಂತರ ಡಾ.ಆರ್.ಎನ್.ಶ್ರೀಲತಾ ತಂಡದವರು ಜಯಚಾಮರಾಜೇಂದ್ರ ಒಡೆಯರ್ ಕೃತಿಗಳ ಗಾಯನ ನಡೆಸಿಕೊಟ್ಟರೆ, ಚಾಮುಂಡೇಶ್ವರಿ ಕುರಿತು ಬಿಲಹರಿ ರಾಗ-ಆದಿತಾಳದಲ್ಲಿ ಮೂಡಿಬಂದ ಎಂ.ಜೆ.ದಿವ್ಯಶ್ರೀ ತಂಡದ `ಕರ್ನಾಟಕ ವಾದ್ಯ ಸಂಗೀತ~ ಮನಸೂರೆಗೊಂಡಿತು.ಆನಂತರ ಸಂಪ್ರದಾಯ ಪದ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕ್ಲಾರಿಯೋನೆಟ್, ರಂಗಗೀತೆ, ಮೃದಂಗ ತರಂಗ, ಸುಗಮ ಸಂಗೀತ ಕಾರ್ಯಕ್ರಮಗಳು ವೈಶಿಷ್ಟ್ಯಪೂರ್ಣವಾಗಿದ್ದು, ಭಿನ್ನ ತರಂಗಗಳನ್ನು ಸೃಷ್ಟಿಸಿದವು.ಮೇಳೈಸಿದ ಜಾನಪದ ತಾಳವಾದ್ಯ:


ಕಂಜರ, ಡೋಲಕ್, ಚಂಡೆ, ಕೋಲ್, ಕರಟವಾದ್ಯ, ಡೊಳ್ಳು, ಜಂಬೆ, ಕಹೋನ್, ಕಮಕ್, ತಮಟೆ ಸೇರಿದಂತೆ 15 ವಾದ್ಯಗಳಿಂದ ಎಚ್.ಎಲ್.ಅನಂತಕೃಷ್ಣಸ್ವಾಮಿ ತಂಡದವರು ನಡೆಸಿಕೊಟ್ಟ ಜಾನಪದ ತಾಳವಾದ್ಯ ತನ್ನದೇ ಆದ ಸೊಗಡು ಬೀರಿತು.ಕೀರ್ತನ ಅವರ `ಮಂಗಳಾರತಿ ಬೆಳಗಿರೋ ಮಾದೇವನಿಗೆ~ ಎಂಬ ಹಾಡು ಲಯಬದ್ಧವಾಗಿ ಮೂಡಿಬಂದಿತು. ನಂತರ ವೀಣಾವಾದನ, ಶತಕಂಠ ಗಾಯನ, ಮ್ಯಾಂಡೋಲಿನ್ ವಾದನ, ಜನಪದ ಸಂಗೀತ, ಹರಿಕಥೆ ಕಾರ್ಯಕ್ರಮ ಪ್ರದರ್ಶನಗೊಂಡವು. ಎಚ್.ಎಲ್.ಶಿವಶಂಕರಸ್ವಾಮಿ ಮತ್ತು ತಂಡದಿಂದ ಮೃದಂಗ, ಘಟ, ಕಂಜರ, 8 ಜತೆ ತಬಲ, ಕೀ ಬೋರ್ಡ್‌ಗಳಿಂದ ಕೂಡಿದ `ಲಯಲಹರಿ~ ರಿಂಗಣಿಸುವುದರೊಂದಿಗೆ ಕಾರ್ಯಕ್ರಮ ಸಂಜೆ ಮುಕ್ತಾಯವಾಯಿತು.ಪ್ರತಿ ತಂಡಗಳ ಸಂಗೀತ ಪ್ರದರ್ಶನಕ್ಕೆ ತಲಾ 30 ನಿಮಿಷಗಳ ಅವಧಿ ನಿಗದಿಗೊಳಿಸಲಾಗಿತ್ತು. ಬೆಳಿಗ್ಗೆ ಮತ್ತು ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದ್ದ್ದಿದರೂ, ಮಧ್ಯಾಹ್ನ ನಡೆದ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು.ಕಲಾವಿದ ಎಂ.ಮಹದೇವಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.`ದಸರಾ ಇತಿಹಾಸದಲ್ಲಿ ಮೊದಲು~: ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ 12 ಗಂಟೆಗಳ ಕಾಲ 18 ತಂಡಗಳ 1001 ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಪ್ರತಿಯೊಂದು ಸಂಗೀತಕ್ಕೂ ಒಂದೊಂದು ಅವಧಿ ಮತ್ತು ಮೌಲ್ಯವಿದೆ. ಅದರಂತೆ ಸಂಗೀತದ ವಿವಿಧ ಪ್ರಕಾರಗಳನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಏರ್ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry