ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

105 ಆರೋಪಿಗಳಿಂದ 1.68 ಕೆ.ಜಿ. ಚಿನ್ನ ವಶ

Last Updated 21 ಫೆಬ್ರುವರಿ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ನಗರದ ದಕ್ಷಿಣ ವಿಭಾಗದ ಪೊಲೀಸರು 105 ಆರೋಪಿಗಳನ್ನು ಬಂಧಿಸಿ, ಸುಮಾರು 1.68 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

‘ಒಟ್ಟು 160 ಪ್ರಕರಣಗಳನ್ನು ಪತ್ತೆ ಮಾಡಿರುವ ದಕ್ಷಿಣ ವಿಭಾಗದ ಸಿಬ್ಬಂದಿ ಮೂರು ಕೆ.ಜಿಗೂ ಹೆಚ್ಚು ಚಿನ್ನಾಭರಣ, ಸುಮಾರು ಎರಡು ಕೆ.ಜಿ ಬೆಳ್ಳಿ ಆಭರಣ, 13 ಲಕ್ಷ ನಗದು ಹಾಗೂ 80 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಹಲವು ಅಪರಾಧ ಪ್ರಕರಣಗಳನ್ನು ಭೇದಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಬಿದರಿ, ಸಿಬ್ಬಂದಿಗಳಿಗೆ ಒಂದೂವರೆ ಲಕ್ಷ ನಗದು ಬಹುಮಾನ ಘೋಷಿಸಿದರು.

ಶಂಕರಪುರ: ನಕಲಿ ಕೀ ಬಳಸಿ ಮನೆಗಳಲ್ಲಿ ಕಳವು ಮಾಡುತ್ತಿದ್ದ ಆರೋಪದ ಮೇಲೆ ಮುಂಬೈನ ಮುನ್ನ ಅಲಿಯಾಸ್ ಸಲೀಂ ಅಲಿ ಹುಸೇನ್‌ಖಾನ್ (36) ಎಂಬ ಅಂತರರಾಜ್ಯ ಕಳ್ಳನನ್ನು ಬಂಧಿಸಿರುವ ಶಂಕರಪುರ ಪೊಲೀಸರು 30 ಲಕ್ಷ ರೂಪಾಯಿ ಮೌಲ್ಯದ ಅಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆತ ಮುಂಬೈ, ಪುಣೆ, ಕರ್ನಾಟಕ, ಹೈದರಾಬಾದ್, ಜೈಪುರ ಸೇರಿದಂತೆ ವಿವಿಧೆಡೆ ಕಳವು ಮಾಡಿದ್ದಾನೆ. 2001ರಲ್ಲಿ ಆತ ತನ್ನ ಸಹಚರರೊಂದಿಗೆ ಸೇರಿಕೊಂಡು ಭೂಗತ ಪಾತಕಿ ಚೋಟಾ ರಾಜನ್‌ನ ಮುಂಬೈನ ಮನೆಯಲ್ಲಿ 9 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದ. ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ಹುಸೇನ್‌ಖಾನ್ ಮತ್ತು ಸಹಚರರು 2010ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆ ನಂತರವೂ ಆರೋಪಿಗಳು ಕಳವು ಮಾಡುವುದನ್ನು ಮುಂದುವರೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಸೋಗಿನಲ್ಲಿ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದ ಆಂಧ್ರಪ್ರದೇಶದ ನೌಷಾದ್ (36) ಎಂಬಾತನನ್ನು ಬಂಧಿಸಿರುವ ಇದೇ ಠಾಣೆಯ ಪೊಲೀಸರು 5.25 ಲಕ್ಷ ರೂಪಾಯಿ ಮೌಲ್ಯದ ಸರಗಳನ್ನು ಜಪ್ತಿ ಮಾಡಿದ್ದಾರೆ.

ತ್ಯಾಗರಾಜನಗರ: ಕನ್ನಕಳವು ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿರುವ ತ್ಯಾಗರಾಜನಗರ ಪೊಲೀಸರು 12.12 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕುಣಿಗಲ್‌ನ ಶ್ರೀನಿವಾಸ (28), ಮಾಗಡಿ ರಸ್ತೆ ತಾವರೆಕೆರೆಯ ಗಿರೀಶ್ ಬಾಬು (26) ಮತ್ತು ಮೂಕಾಂಬಿಕನಗರದ ಆರ್.ವಿನಯ್ (23) ಬಂಧಿತರು.

ಬನಶಂಕರಿ: ಕಾರುಗಳನ್ನು ಕಳವು ಮಾಡುತ್ತಿದ್ದ ಗುರಪ್ಪನಪಾಳ್ಯದ ಅಬ್ದುಲ್ ಕರೀಂ (53) ಎಂಬ ಆರೋಪಿಯನ್ನು ಬಂಧಿಸಿರುವ ಬನಶಂಕರಿ ಠಾಣೆ ಪೊಲೀಸರು 9 ಲಕ್ಷ ಮೌಲ್ಯದ ಮೂರು ಕಾರುಗಳನ್ನು ಜಪ್ತಿ ಮಾಡಿದ್ದಾರೆ.

ಹನುಮಂತನಗರ: ಸರಗಳವು ಮಾಡುತ್ತಿದ್ದ ಬನಶಂಕರಿಯ ಕಾಶಿ (24) ಎಂಬಾತನನ್ನು ಬಂಧಿಸಿರುವ ಹನುಮಂತನಗರ ಪೊಲೀಸರು 8.88 ಲಕ್ಷ ರೂಪಾಯಿ ಮೌಲ್ಯದ ಒಂಬತ್ತು ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಮತ್ತು ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT