ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1063 ಉದ್ಯೋಗ; ಶೀಘ್ರ ಆದೇಶ

Last Updated 14 ಜೂನ್ 2011, 11:00 IST
ಅಕ್ಷರ ಗಾತ್ರ

ಮಂಗಳೂರು: ಎಂಎಸ್‌ಇಝೆಡ್ ಯೋಜನೆಯಿಂದ ಸಂತ್ರಸ್ತರಾದ 1063 ಉದ್ಯೋಗಾಕಾಂಕ್ಷಿಗಳಿಗೆ ಎಂಆರ್‌ಪಿಎಲ್ ಮತ್ತು ಎಂಎಸ್‌ಇಝೆಡ್ ಉದ್ಯೋಗ ನೀಡಲು ಒಪ್ಪಿಕೊಂಡಿದ್ದಾರೆ. ಆ ಮೂಲಕ ಕಳೆದ 14 ದಿನಗಳಿಂದ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿದ್ದ ಪ್ರತಿಭಟನೆಗೆ ಯಶಸ್ಸು ದೊರೆತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಎಂಎಸ್‌ಇಝೆಡ್ ಅಧಿಕಾರಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಸಭೆ ನಡೆಯಿತು. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಪಾಲೆಮಾರ್, `ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸಲು ಕಂಪೆನಿಗಳು ಒಪ್ಪಿಕೊಂಡಿದ್ದು, ಸಮಸ್ಯೆ ಬಗೆಹರಿದಿದೆ. ಪ್ರತಿಭಟನೆ ಮುಕ್ತಾಯಗೊಂಡಿದೆ. ಉದ್ಯೋಗ ನೀಡುವ ಸಂಬಂಧ ಹಿಂದಿನ ಆದೇಶ ಪರಿಷ್ಕರಿಸಿ, 15 ದಿನಗಳ ಒಳಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು~ ಎಂದು ತಿಳಿಸಿದರು.

ಎಂಆರ್‌ಪಿಎಲ್‌ನಿಂದ 183 ಜನರಿಗೆ ಉದ್ಯೋಗ: ಎಂಆರ್‌ಪಿಎಲ್ ಕಂಪೆನಿ 183 ಜನರಿಗೆ ಉದ್ಯೋಗ ನೀಡಬೇಕಿದ್ದು, ಈವರೆಗೆ 86 ಮಂದಿಗೆ ಉದ್ಯೋಗ ನೀಡಿದೆ. ಉಳಿದ 97 ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದ ಆದೇಶ ಬಂದ 3 ತಿಂಗಳ ಒಳಗೆ ಉದ್ಯೋಗ ನೀಡಲಾಗುವುದು. ಒಎಂಪಿಎಲ್ 302 ಮಂದಿಗೆ ಉದ್ಯೋಗ ನೀಡಬೇಕಾಗಿದೆ. ಅದು ಈಗ ಮೂವರಿಗಷ್ಟೇ ಉದ್ಯೋಗ ನೀಡಿದೆ. ಉಳಿದ 299 ಮಂದಿಯಲ್ಲಿ 143 ಉದ್ಯೋಗಾಕಾಂಕ್ಷಿಗಳಿಗೆ ಒಂದು ವರ್ಷ 6 ತಿಂಗಳ ಒಳಗೆ ಉದ್ಯೋಗ ನೀಡಲು ಒಪ್ಪಿದೆ. ನಂತರ ಉಳಿದ 156 ಮಂದಿಗೆ ಉದ್ಯೋಗ ನೀಡಲಾಗುವುದು.

ಐಎಸ್‌ಪಿಆರ್‌ಎಲ್ ಕಂಪೆನಿ 55 ಜನರಿಗೆ ಉದ್ಯೋಗ ನೀಡಬೇಕಿದ್ದು, 14 ಮಂದಿಗೆ ಮೂರು ತಿಂಗಳೊಳಗೆ ಉದ್ಯೋಗ ನೀಡಲಿದೆ. ಉಳಿದ 44 ಮಂದಿಗೆ ಎಂಎಸ್‌ಇಝೆಡ್ ಮೂರು ವರ್ಷದೊಳಗೆ ಉದ್ಯೋಗ ನೀಡಲಿದೆ. ಎಂಎಸ್‌ಇಝೆಡ್ 529 ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡಬೇಕಿದ್ದು, ಈವರೆಗೆ 4 ಮಂದಿಗೆ ಉದ್ಯೋಗ ನೀಡಿದೆ. ಉಳಿದವರಿಗೆ ಮೂರು ವರ್ಷದೊಳಗೆ ಉದ್ಯೋಗ ನೀಡುವುದಾಗಿ ಒಪ್ಪಿಕೊಂಡಿದೆ.

ರೂ.10 ಸಾವಿರ ಶಿಷ್ಯವೇತನ: ಸರ್ಕಾರದ ಆದೇಶ ಬಂದ ನಂತರ 1063 ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವವರೆಗೆ ಪ್ರತಿ ತಿಂಗಳು ರೂ.10000 ಸಾವಿರ ಶಿಷ್ಯವೇತನ ನೀಡಲು ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು. ಶಿಷ್ಯವೇತನವನ್ನು ಎಂಎಸ್‌ಇಝೆಡ್ ಭರಿಸಬೇಕಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಟ್ರಸ್ಟ್ ರಚಿಸಲಾಗುವುದು. ಸರ್ಕಾೃದ ಆದೇಶದ ಬಂದ ತಕ್ಷಣ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪತ್ರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಉದ್ಯೋಗ ನೀಡದಿದ್ದರೆ ಹಣ: ಕಂಪೆನಿಗಳು ನೀಡಿದ ಭರವಸೆಯಂತೆ ಒಂದೊಮ್ಮೆ ಉದ್ಯೋಗ ನೀಡಲು ಸಾಧ್ಯವಾಗದಿದ್ದರೆ, ಹಣ ನೀಡಲಾಗುವುದು. ಮೊದಲ ಹಂತದ ಯೋಜನಾ ನಿರ್ವಸಿತ ಕುಟುಂಬದ ಉದ್ಯೋಗಾಕಾಂಕ್ಷಿಗಳಿಗೆ ರೂ. 7 ಲಕ್ಷ, ಎರಡನೇ ಹಂತದ ಯೋಜನಾ ನಿರ್ವಸಿತ ಕುಟುಂಬದ ಉದ್ಯೋಗಾಕಾಂಕ್ಷಿಗಳಿಗೆ ರೂ. 3 ಲಕ್ಷ, ಮೂರನೇ ಹಂತದ ಯೋಜನಾ ನಿರ್ವಸಿತ ಕುಟುಂಬದ ಉದ್ಯೋಗಾಕಾಂಕ್ಷಿಗಳಿಗೆ ರೂ. 2 ಲಕ್ಷ ನೀಡಲಾಗುವುದು. ಉಳಿದವರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ  ಪರಿಹಾರ ಹಣ ನೀಡಲಾಗುವುದು ಎಂದು ಪಾಲೆಮಾರ್ ತಿಳಿಸಿದರು.

ಈ ಹಿಂದಿನ ಜಿಲ್ಲಾಧಿಕಾರಿ ಸುಬೋಧ್ ಯಾದವ್ ನೇತೃತ್ವದಲ್ಲಿ ಎರಡು ಬಾರಿ ಸಭೆ ನಡೆದಿದ್ದು ನಿರ್ಣಯಗಳು ಅನುಷ್ಠಾನಗೊಂಡಿರಲಿಲ್ಲ. ಇದರಿಂದಾಗಿ ಕಳೆದ ಮೇ 31ರಿಂದ ಉದ್ಯೋಗಾಕಾಂಕ್ಷಿಗಳು ಎಂಆರ್‌ಪಿಎಲ್ ಕಾರಿಡಾರ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದರು.

ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಸಭೆ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್, ಜಿಲ್ಲಾಧಿಕಾರಿ ಡಾ. ಚನ್ನಪ್ಪ ಗೌಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗರಾಜ ಶೆಟ್ಟಿ, ಶಾಸಕ ಅಭಯಚಂದ್ರ ಜೈನ್, ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಎಂಆರ್‌ಪಿಎಲ್ ಎಂ.ಡಿ ಯು.ಕೆ. ಬಸು,  ಉದ್ಯೋಗಾಕಾಂಕ್ಷಿ ಪರ ಹೊರಾಟ ನೇತೃತ್ವ ವಹಿಸಿದ್ದ ಸತ್ಯಜಿತ್ ಸುರತ್ಕಲ್ ಮತ್ತಿತರರಿದ್ದರು.

ಸಂಧಾನ ಯಶಸ್ವಿ: ಪ್ರತಿಭಟನೆ ಹಿಂದಕ್ಕೆ
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತ ಮೂಡಿದ ಕಾರಣ ಉದ್ಯೋಗಾಕಾಂಕ್ಷಿಗಳು ಕಳೆದ 14 ದಿನಗಳಿಂದ ಸುರತ್ಕಲ್‌ನ ಎಂಆರ್‌ಪಿಎಲ್ ಕಾರಿಡಾರ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ. `ಸಭೆಯ ತೀರ್ಮಾನದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಲಿಖಿತ ಭರವಸೆ ನೀಡಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ~ ಎಂದು ಉದ್ಯೋಗಾಕಾಂಕ್ಷಿಗಳ ಪರ ಹೋರಾಟಗಾರ ಆರ್.ಎನ್. ಶೆಟ್ಟಿ ಕಳವಾರು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT