ಶುಕ್ರವಾರ, ಏಪ್ರಿಲ್ 16, 2021
21 °C

108ರಿಂದ 61 ಸಾವಿರಕ್ಕೂ ಹೆಚ್ಚು ಜೀವ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಆರೋಗ್ಯ ಕವಚ 108 ಸೇವೆಯು ನಾಲ್ಕು ವರ್ಷಗಳಲ್ಲಿ 19.5 ಲಕ್ಷ ತುರ್ತು ಸೇವೆ ನೀಡಿ 61,961 ಜೀವಗಳನ್ನು ಉಳಿಸಿದೆ. 26,359 ಹೆರಿಗೆಗಳನ್ನು ಮಾಡಿಸಿದೆ~ ಎಂದು ಜಿವಿಕೆ ತುರ್ತುಸ್ಥಿತಿ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆಯ (ಇಎಂಆರ್‌ಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಪಾಟೀಲ್ ತಿಳಿಸಿದರು.ಜಿವಿಕೆ ಇಎಂಆರ್‌ಐ ಕರ್ನಾಟಕ ಆಶ್ರಯದಲ್ಲಿ ಮಾರತಹಳ್ಳಿ ಸಮೀಪದ ಚಿನ್ನಪ್ಪನಹಳ್ಳಿಯಲ್ಲಿ ಸೋಮವಾರ ನಡೆದ `108~ ಆರೋಗ್ಯ ಸೇವೆಯ ವಾರ್ಷಿಕೋತ್ಸವ, ಸಾಂಸ್ಕೃತಿಕ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

`8.41 ಲಕ್ಷ ಹೆರಿಗೆ ಸಂಬಂಧಿಸಿದ, 2.67 ಲಕ್ಷ ಅಪಘಾತ, 2.46 ಲಕ್ಷ ಉದರಬೇನೆ, 85,541 ಹೃದಯ ಸಂಬಂಧಿಸಿದ, 87,472 ಉಸಿರಾಟದ ಸಂಬಂಧಿಸಿದ, 61,405 ವಿಷಾಹಾರ ಸೇವನೆ ಪ್ರಕರಣ ಹಾಗೂ 3.19 ಲಕ್ಷ ಇತರ ಸಮಸ್ಯೆಗಳಿಗೆ ತುರ್ತು ಸೇವೆಗಳನ್ನು ಒದಗಿಸಲಾಗಿದೆ~ ಎಂದು ಅವರು ಮಾಹಿತಿ ನೀಡಿದರು.`ಸಂಸ್ಥೆಯು 517 ಆಂಬುಲೆನ್ಸ್‌ಗಳನ್ನು ಹೊಂದಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಘಟನೆ ಸಂಭವಿಸಿದಾಗ ಕಡಿಮೆ ಅವಧಿಯಲ್ಲಿ ಸ್ಥಳದಲ್ಲಿ ತಲುಪಲು ಸಾಧ್ಯವಾಗುವಂತೆ ಜಿಲ್ಲಾ ಹಾಗೂ ತಾಲ್ಲೂಕಿನ ಆಯಕಟ್ಟಿನ ಜಾಗದಲ್ಲಿ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ರಸ್ತೆ ಅಪಘಾತಗಳು ಮಾತ್ರವಲ್ಲದೆ, ಹೃದಯ ಸಂಬಂಧಿ ತೊಂದರೆಗಳು, ತೀವ್ರ ಜ್ವರ, ಉಸಿರಾಟ, ಮಧುಮೇಹ, ಹೆರಿಗೆ, ಮೂರ್ಛೆ ರೋಗ, ಆತ್ಮಹತ್ಯೆ ಯತ್ನ, ಗಲಭೆ, ಪ್ರಾಣಿಗಳಿಂದ ದಾಳಿ, ಕಟ್ಟಡ ಕುಸಿತ, ಬೆಂಕಿ ಅನಾಹುತ ಸೇರಿದಂತೆ ತುರ್ತುಸಂದರ್ಭಗಳಲ್ಲಿ ಜನರು ಕರೆ ಮಾಡಬಹುದು~ ಎಂದು ಅವರು ತಿಳಿಸಿದರು.`ಅಪಘಾತ, ಹಲ್ಲೆ, ಗಲಭೆ, ದರೋಡೆ ಸಂದರ್ಭ, ಜೂಜು, ಆಸ್ತಿ ಸಂಬಂಧಿಸಿದ ಅಪರಾಧಗಳು, ಬೆದರಿಕೆ, ಅಸಭ್ಯ ವರ್ತನೆ ಮತ್ತಿತರ ಅಪರಾಧ ಪ್ರಕರಣಗಳ ಸಂದರ್ಭಗಳಲ್ಲೂ ಕರೆ ಮಾಡಬಹುದು. ಸಂತ್ರಸ್ತರು 108ಕ್ಕೆ ಕರೆ ಮಾಡಿ ಸ್ಥಳದ ವಿಳಾಸ ಹಾಗೂ ಗುರುತಿನ ಸ್ಥಳದ ಬಗ್ಗೆ ಮಾಹಿತಿ ನೀಡಬೇಕು. ಈ ಮೂಲಕ ತುರ್ತು ಸ್ಥಿತಿಗಳಲ್ಲಿ ಹತ್ತಿರದ ಸಂಚಾರಿ ಠಾಣೆಗಳಿಗೆ ಮಾಹಿತಿ ತಲುಪಿಸಲಾಗುವುದು~ ಎಂದು ಅವರು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ, `ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತುರ್ತಾಗಿ ಆರೋಗ್ಯ ಸೇವೆ ಒದಗಿಸುವಲ್ಲಿ 108 ಮಹತ್ವದ ಪಾತ್ರ ವಹಿಸುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ನಗರೀಕರಣದ ಹಿನ್ನೆಲೆಯಲ್ಲಿ ಆಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ~ ಎಂದು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.