ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

108 ಆಂಬುಲೆನ್ಸ್: ಜಿವಿಕೆಯಿಂದ 194 ಸಿಬ್ಬಂದಿ ವಜಾ

ನೌಕರರ ಮುಷ್ಕರ: ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯೋಗ ಭದ್ರತೆ ಹಾಗೂ ಸಂಬಳ ಹೆಚ್ಚಿಸುವಂತೆ ಆಗ್ರಹಿಸಿ ಹತ್ತು ದಿನಗಳಿಂದ ಮುಷ್ಕರ ನಿರತರಾಗಿದ್ದ ಆರೋಗ್ಯ ಕವಚ 108 ಆಂಬುಲೆನ್ಸ್ ನೌಕರರಲ್ಲಿ 194 ಮಂದಿಯನ್ನು ಜಿವಿಕೆ ಸಂಸ್ಥೆಯು ಸೋಮವಾರ ಸೇವೆಯಿಂದ ವಜಾಗೊಳಿಸಿದೆ.

`ಸಕಾರಣವಿಲ್ಲದೇ ಮುಷ್ಕರ ಹಮ್ಮಿಕೊಂಡಿರುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರೂ ನೌಕರರು ಕಿವಿಗೊಡಲಿಲ್ಲ. ಈ ಕಾರಣದಿಂದ ಆರಂಭಿಕ ಹಂತವಾಗಿ ರಾಜ್ಯದಾದ್ಯಂತ ಮುಷ್ಕರದಲ್ಲಿ ಕೈಜೋಡಿಸಿದ 194 ಮಂದಿ ನೌಕರರನ್ನು ವಜಾಗೊಳಿಸಲಾಗಿದೆ' ಎಂದು ಜಿವಿಕೆ ತುರ್ತು ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕಾರ್ಯನಿರ್ವಹಣಾಧಿಕಾರಿ ಜಗದೀಶ ಪಾಟೀಲ `ಪ್ರಜಾವಾಣಿ'ಗೆ ತಿಳಿಸಿದರು.

`ಮುಷ್ಕರ ನಿರತ ಉಳಿದ ನೌಕರರನ್ನು ಸೇವೆಗೆ ಹಿಂತಿರುಗುವಂತೆ ಮನವಿ ಮಾಡಲಾಗಿದೆ. ಮುಷ್ಕರ ಹೀಗೆ ಮುಂದುವರಿದರೆ ಹಂತ ಹಂತವಾಗಿ ಎಲ್ಲ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗುವುದು. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಅಲ್ಲದೇ ವಜಾಗೊಂಡ ನೌಕರರ ಜಾಗಕ್ಕೆ ಈಗಾಗಲೇ ಹೊಸ ನೇಮಕಾತಿಯೂ ನಡೆದಿದೆ' ಎಂದು ಮಾಹಿತಿ ನೀಡಿದರು.

`ತುರ್ತು ಸೇವೆಯನ್ನು ಅಗತ್ಯವಾಗಿ ನೀಡಲೇಬೇಕಾಗಿರುವುದರಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ ಚಾಲಕರು ಮತ್ತು ಖಾಸಗಿ ಆಸ್ಪತ್ರೆಗಳ ಶುಶ್ರೂಷಕರ ಸೇವೆಯನ್ನು ಎರವಲು ಪಡೆಯಲಾಗಿತ್ತು. ಈ ಸೇವೆಯ ಪೂರೈಕೆಯು ತಾತ್ಕಲಿಕವಾಗಿರುವುದರಿಂದ ಹೊಸ ನೇಮಕಾತಿ ಅಗತ್ಯವಾಗಿದೆ. ಮುಷ್ಕರದಿಂದ ತುರ್ತು ಸೇವೆ ನೀಡಲು ಯಾವುದೇ ತೊಂದರೆಯಾಗಿಲ್ಲ' ಎಂದು ಸ್ಪಷ್ಟಪಡಿಸಿದರು.

ನೌಕರರ ಸಂಘದ ಉಪಾಧ್ಯಕ್ಷ ಪರಮಶಿವಯ್ಯ, `ನೌಕರರ ನಡುವೆ ಇರುವ ಒಗ್ಗಟ್ಟನ್ನು ಒಡೆಯುವ ಸಲುವಾಗಿ ಸಂಸ್ಥೆಯು ವಜಾ ಮಾಡುವ ತಂತ್ರ ಹೂಡಿದೆ. ವಜಾಗೊಳಿಸಿರುವ ಬಗ್ಗೆ ಒಂದು ಪತ್ರ ತಲುಪಿದೆ. ಆದರೆ, ವಜಾಗೊಂಡಿರುವ ನೌಕರರ ಮಾಹಿತಿಯೇ ಇಲ್ಲ' ಎಂದು ತಿಳಿಸಿದರು.

`ಜಿವಿಕೆಯ ಈ ಬೆದರಿಕೆಯ ತಂತ್ರಕ್ಕೆ ನೌಕರರು ಮಣಿಯುವುದಿಲ್ಲ.  ತಾಕತ್ತಿದ್ದರೆ 2,400 ಮಂದಿಯನ್ನು ವಜಾ ಮಾಡುವ ಧೈರ್ಯ ತೋರಲಿ. ನ್ಯಾಯ ದೊರೆಯುವವರೆಗೂ ಯಾವುದೇ ಕಾರಣಕ್ಕೂ ಮುಷ್ಕರವನ್ನು ನಿಲ್ಲಿಸುವುದಿಲ್ಲ ಮತ್ತು ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟವನ್ನು ಆರಂಭಿಸಲಾಗುವುದು' ಎಂದು ಎಚ್ಚರಿಕೆ ನೀಡಿದರು.

ಹೈಕೋರ್ಟ್ ನಿರ್ದೇಶನ: ಆರೋಗ್ಯ ಕವಚ (108) ಸಿಬ್ಬಂದಿ ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಮಗ್ರ ಮಾಹಿತಿಯುಳ್ಳ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ.

ಡಾ.ಕೋಡೂರು ವೆಂಕಟೇಶ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಮತ್ತು ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ, 108 ಸಿಬ್ಬಂದಿಯ ಮುಷ್ಕರದ ಕುರಿತು ವಿಸ್ತೃತವಾದ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.

`ರಾಜ್ಯದ ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗಾಗಿ ಆರೋಗ್ಯ ಕವಚ ಯೋಜನೆಯನ್ನು ಜಾರಿಗೊಳಿಸಲಾಗಿದೆ. 108 ಸೇವೆಯು ಅವಶ್ಯಕ ಸೇವೆಗಳ ವ್ಯಾಪ್ತಿಗೆ ಬರುತ್ತದೆ. ಈ ಸೇವೆಯನ್ನು ಒದಗಿಸುವ ಸಿಬ್ಬಂದಿ ಮುಷ್ಕರ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ' ಎಂದು ಅರ್ಜಿದಾರರು ವಾದಿಸಿದ್ದಾರೆ.

ಸರ್ಕಾರದ ನಿರ್ಲಕ್ಷ್ಯದ ಪರಿಣಾಮವಾಗಿ 108 ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರ ಕಾನೂನುಬಾಹಿರವಾದುದು. ತಕ್ಷಣವೇ ಮುಷ್ಕರ ಸ್ಥಗಿತಗೊಳಿಸುವಂತೆ ಆದೇಶ ನೀಡಬೇಕು. ಮುಷ್ಕರದಿಂದ ಉದ್ಭವಿಸಿರುವ ಸಮಸ್ಯೆ ಪರಿಹಾರಕ್ಕೆ ಉನ್ನತಮಟ್ಟದ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

`ಸರ್ಕಾರ ಈಗಾಗಲೇ ಪರ್ಯಾಯ ಕ್ರಮಗಳನ್ನು ಕೈಗೊಂಡಿದೆ. ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಇಂತಹ ಸಂದರ್ಭದಲ್ಲಿ ಈ ಅರ್ಜಿಯು ವಿಚಾರಣೆಗೆ ಸ್ವೀಕಾರಾರ್ಹವಲ್ಲ' ಎಂದು ಸರ್ಕಾರಿ ವಕೀಲ ಆರ್.ದೇವದಾಸ್ ಪ್ರತಿಪಾದಿಸಿದರು. ನಂತರ, ಮುಷ್ಕರಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿವರವಾದ ವರದಿ ಸಲ್ಲಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT