ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`108' ನೌಕರರ ಪರ ಸಿಐಟಿಯು ಪ್ರತಿಭಟನೆ

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 108 ಆಂಬುಲೆನ್ಸ್ ನೌಕರರು ಎಂಟು ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ, ಅವರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸರ್ಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಿಐಟಿಯು ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಸ್.ಪ್ರಸನ್ನಕುಮಾರ್ ಮಾತನಾಡಿ, `2008ರ ನವೆಂಬರ್ 1ರಿಂದ ಸರ್ಕಾರವು ಆರೋಗ್ಯ ಕವಚ 108 ತುರ್ತು ಚಿಕಿತ್ಸಾ ಅಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ಆರೋಗ್ಯ ಇಲಾಖೆಯು ಜಿವಿಕೆ ಕಂಪೆನಿಯ ಸಹಭಾಗಿತ್ವದಲ್ಲಿ ದಿನದ 24 ಗಂಟೆಗಳ ಕಾಲದ ಉಚಿತ ಸೇವೆ ನೀಡುತ್ತಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ಒಟ್ಟು 517 ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ.

ಚಾಲಕರು, ಸ್ಟಾಫ್ ನರ್ಸ್‌ಗಳು ಸೇರಿದಂತೆ ಒಟ್ಟು  2,400 ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಏಕಕಾಲದಲ್ಲಿ ಧರಣಿ ಆರಂಭಿಸಿರುವುದರಿಂದ ರಾಜ್ಯದಾದ್ಯಂತ ಜನ ಪರದಾಡುತ್ತಿದ್ದಾರೆ' ಎಂದರು.`ಆಂಧ್ರಪ್ರದೇಶ ಮೂಲದ ಜಿವಿಕೆ ಕಂಪೆನಿ ಈಗಾಗಲೇ 14 ರಾಜ್ಯಗಳಲ್ಲಿ 108 ಆಂಬುಲೆನ್ಸ್‌ನ ಚಾಲಕರು ಮತ್ತು ವೈದ್ಯಕೇತರ ಸಿಬ್ಬಂದಿಗೆ ಮೂಲ ಸೌಕರ್ಯ ಒದಗಿಸದೆ ವಂಚಿಸಿದೆ.

ಇದನ್ನು ಖಂಡಿಸಿ ಆಂಧ್ರಪ್ರದೇಶದಲ್ಲಿ 108 ನೌಕರರು ನಡೆಸುತ್ತಿರುವ ಮುಷ್ಕರ 17ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದಲ್ಲೂ ಪ್ರತಿಭಟನೆ ಮುಂದುವರಿದಿದೆ. ದಿನದಿಂದ ದಿನಕ್ಕೆ ಹೋರಾಟ ಕಾವು ಹೆಚ್ಚುತ್ತಿದ್ದರೂ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ಪ್ರತಿಭಟನಾನಿರತ ನೌಕರರು ಅಸ್ವಸ್ಥಗೊಳ್ಳುತ್ತಿರುವುದು ಜತೆಗೆ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿ ರೋಗಿಗಳೂ ಪರದಾಡುತ್ತಿದ್ದಾರೆ' ಎಂದು ಹೇಳಿದರು.

`ಆರೋಗ್ಯ ಕವಚ - 108ರಲ್ಲಿನ ನೌಕರರಿಗೆ ಸೇವಾ ಭದ್ರತೆ ಇಲ್ಲ. ವಾಹನ ಚಾಲಕರಿಗೆ ತಿಂಗಳಿಗೆ 6,500 ರೂಪಾಯಿ ಮತ್ತು ಸ್ಟಾಫ್ ನರ್ಸ್‌ಗೆ 7,500 ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ಅವರನ್ನು ಸೇವೆಗೆ ತೆಗೆದುಕೊಂಡಿರುವುದರಿಂದ ಆ ಕೆಲಸವೂ ಶಾಶ್ವತವಲ್ಲ. ಹೀಗೆ ಒತ್ತಡದ ನಡುವೆ ಕೆಲಸ ಮಾಡುತ್ತಿರುವ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT