ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`108' ನೌಕರರ ಮುಷ್ಕರ ತೀವ್ರ: 9ಮಂದಿ ಅಸ್ವಸ್ಥ

Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆರೋಗ್ಯ ಕವಚ 108 ಆಂಬುಲೆನ್ಸ್ ನೌಕರರು ನಡೆಸುತ್ತಿರುವ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದೆ. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕಳೆದ ಎರಡು ದಿನಗಳಿಂದ ಉಪವಾಸ ನಿರತರಾಗಿದ್ದ ಒಂಬತ್ತು ಮಂದಿ ನೌಕರರು ಗುರುವಾರ ತೀವ್ರ ಅಸ್ವಸ್ಥರಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾದರು.

`ಉದ್ಯೋಗ ಭದ್ರತೆ ಹಾಗೂ ಸಂಬಳ ಹೆಚ್ಚಳ ಸೇರಿದಂತೆ ಯಾವುದೇ ಬೇಡಿಕೆಗೆ ಜಿವಿಕೆ ಸಂಸ್ಥೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. 2,500 ಮಂದಿ ನೌಕರರನ್ನು ಸರ್ಕಾರ ನಿರ್ಲಕ್ಷ್ಯಿಸುತ್ತಿದೆ. ಹಾಗಾಗಿ ಸಮಸ್ಯೆ ಇತ್ಯರ್ಥಗೊಳ್ಳುವವರೆಗೂ ಯಾವುದೇ ಕಾರಣಕ್ಕೂ ಮುಷ್ಕರವನ್ನು ಹಿಂಪಡೆಯುವುದಿಲ್ಲ ಹಾಗೂ ಉಪವಾಸವೂ ಕೂಡ ಮುಂದುವರಿಯುತ್ತದೆ' ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೌಕರ ಪರಶುರಾಮ `ಪ್ರಜಾವಾಣಿ'ಗೆ ತಿಳಿಸಿದರು.

`ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ಜಿವಿಕೆ ಸಂಸ್ಥೆ ಹಾಗೂ ನೌಕರರ ನಡುವೆ ಸಭೆ ನಡೆಯಿತು. ಇಲಾಖೆಯ ವ್ಯಾಪ್ತಿಯಲ್ಲಿ ಮಾತ್ರ  ನೌಕರರಿಗೆ ಸಹಾಯ ಮಾಡಲು ಸಾಧ್ಯ ಎಂದು ಆಯುಕ್ತರು ಕೈಚೆಲ್ಲಿದರು. ರಜಾಸೌಲಭ್ಯ, ಉದ್ಯೋಗ ಭದ್ರತೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಲ್ಲಿಸಿದ್ದ ಮನವಿಗೆ ಯಾವುದೇ ಬೆಲೆ ದೊರೆಯಲಿಲ್ಲ' ಎಂದು ನೊಂದು ನುಡಿದರು.

ನೌಕರರ ಸಂಘದ ಉಪಾಧ್ಯಕ್ಷ ಪರಮಶಿವಯ್ಯ, `ಗುತ್ತಿಗೆ ಪಡೆದ ಜಿವಿಕೆ ಸಂಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಇದ್ದರೆ ಸರ್ಕಾರ ಅವರನ್ನು ವಜಾಗೊಳಿಸಲು ಒಪ್ಪಂದದ ಅನ್ವಯ ಅವಕಾಶವಿದೆ. ಇಷ್ಟು ಮಂದಿ ನೌಕರರು ಒಕ್ಕೂರಲಿನಿಂದ  ಸಂಸ್ಥೆಯು ನೌಕರರಿಗೆ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟಿಸಿದರೂ ಸರ್ಕಾರಕ್ಕೆ ಅರ್ಥವಾಗದೇ ಇರುವುದು ಆಶ್ಚರ್ಯ ತಂದಿದೆ' ಎಂದು ಹೇಳಿದರು.

ಜಿವಿಕೆ ತುರ್ತು ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ಜಗದೀಶ ಪಾಟೀಲ, `ಸಂಸ್ಥೆಯು ಕಾರ್ಮಿಕರಿಗೆ ನೀಡುವ ಸೌಲಭ್ಯ, ಸಂಬಳ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕಾರ್ಮಿಕ ಇಲಾಖೆಗೆ ಒದಗಿಸಿದೆ. ಇಲಾಖೆಯು ಸಿದ್ಧಪಡಿಸಿದ ವರದಿಯು ಸರ್ಕಾರದ ಕೈ ಸೇರಿದೆ ಎಂಬ ಮಾಹಿತಿಯಿದೆ. ಸಂಸ್ಥೆ ಹಾಗೂ ನೌಕರರ ನಡುವೆ ಎದ್ದಿರುವ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದಿಂದ ಸದ್ಯದಲ್ಲೇ ಸೂಚನೆ ಹೊರಬೀಳುವ ನಿರೀಕ್ಷೆಯಿದೆ' ಎಂದು ತಿಳಿಸಿದರು.

`ರಾಜ್ಯದಾದ್ಯಂತ ಈವರೆಗೆ 1,250 ತುರ್ತುಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಖಾಸಗಿ ಶುಶ್ರೂಷಕರ ಎರವಲು ಸೇವೆ ಮುಂದುವರಿದಿದ್ದೂ, ತುರ್ತು ಸೇವೆ ಒದಗಿಸುವಲ್ಲಿ ಯಾವುದೇ ತೊಂದರೆಯಾಗಿಲ್ಲ' ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT