ಶನಿವಾರ, ಫೆಬ್ರವರಿ 27, 2021
27 °C

11ಲಕ್ಷ ಪಠ್ಯಪುಸ್ತಕ, 3ಲಕ್ಷ ಸಮವಸ್ತ್ರ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

11ಲಕ್ಷ ಪಠ್ಯಪುಸ್ತಕ, 3ಲಕ್ಷ ಸಮವಸ್ತ್ರ ಪೂರೈಕೆ

ಯಾದಗಿರಿ: ರಜೆಯ ಮೋಜಿನಲ್ಲಿರುವ ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಸಜ್ಜಾ­ಗುತ್ತಿವೆ. ಬೇಸಿಗೆ ರಜೆ ಮುಗಿಯುತ್ತ ಬಂದಿದ್ದು, ಶಾಲೆಗಳ ಪ್ರಾರಂಭೋತ್ಸವಕ್ಕೆ ದಿನಗಣನೆ ಆರಂಭ­ವಾಗಿದೆ. ಮಕ್ಕಳು ಶಾಲೆಯ ಮೆಟ್ಟಿಲೇ­ರುವ ಮುನ್ನವೇ ಅವರಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಕಲ್ಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಿಂದಾಗಿ ಹೆಚ್ಚು ಉತ್ಸಾಹದಲ್ಲಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸರ್ಕಾರಿ ಶಾಲೆಗಳ ವಿದ್ಯಾರ್ಥಿ­ಗಳಿಗೆ ಪುಸ್ತಕ, ಸಮವಸ್ತ್ರಗಳನ್ನು ಸಕಾಲದಲ್ಲಿ ಒದಗಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 1 ರಿಂದ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ಪೂರೈಕೆ ಆಗಿದ್ದು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ, ಪ್ರತಿಯೊಂದು ಶಾಲೆಗೂ ತಲುಪಿಸುವ ಕಾರ್ಯ ಭರದಿಂದ ನಡೆದಿದೆ.1 ರಿಂದ ಎಸ್ಸೆಸ್ಸೆಲ್ಸಿವರೆಗಿನ ತರಗತಿಗಳಿಗೆ ಅಗತ್ಯವಾಗಿರುವ ಪುಸ್ತಕಗಳ ಬೇಡಿಕೆಯನ್ನು ಇಲಾಖೆಯು ಸಲ್ಲಿಸಿದ್ದು, ಅದಕ್ಕೆ ಅನುಗುಣವಾಗಿ ಈಗಾಗಲೇ ಶೇ 88 ರಷ್ಟು ಪುಸ್ತಕಗಳು ಜಿಲ್ಲೆಗೆ ಪೂರೈಕೆ ಆಗಿವೆ. ಇನ್ನು ಕೆಲವು ವಿಷಯಗಳ ಪಠ್ಯಪುಸ್ತಕಗಳು ಬರಬೇಕಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 14,73,503 ಪುಸ್ತಕಗಳ ಬೇಡಿಕೆ ಇದೆ. ಇದರಲ್ಲಿ ಉಚಿತ ವಿತರಣೆಗಾಗಿ 13,21,720, ಖಾಸಗಿ ಶಾಲೆಗಳಿಗೆ ಮಾರಾಟಕ್ಕಾಗಿ 1,46,454 ಮತ್ತು ಹೆಚ್ಚುವರಿ ಮಾರಾಟಕ್ಕಾಗಿ 5,329 ಪುಸ್ತಕಗಳು ಸೇರಿವೆ. ಬೇಡಿಕೆಯ ಪೈಕಿ 11,83,047 ಪುಸ್ತಕಗಳು ಬಂದಿದ್ದು, ಇನ್ನೂ 2,90,456 ಪುಸ್ತಕಗಳು ಸರಬರಾಜು ಆಗಬೇಕಿದೆ.ಎಸ್ಸೆಸ್ಸೆಲ್ಸಿಯ ಉರ್ದು, ಕನ್ನಡ, ಇಂಗ್ಲಿಷ್‌ ಮತ್ತು ವಿಜ್ಞಾನ ಪುಸ್ತಕಗಳು, 7 ನೇ ತರಗತಿಯ ಇಂಗ್ಲಿಷ್‌, ಹಿಂದಿ ಹಾಗೂ 4 ನೇ ತರಗತಿಯ ಗಣಿತ ಮತ್ತು ಇಂಗ್ಲಿಷ್‌ ಪುಸ್ತಕಗಳ ಸರಬರಾಜು ಆಗಬೇಕಿದೆ ಎಂದು ತಿಳಿದು ಬಂದಿದೆ. ಯಾದಗಿರಿ ತಾಲ್ಲೂಕಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಸರಬರಾಜು ಮಾಡಲು ಒಟ್ಟು 4,69,515 ಪುಸ್ತಕಗಳ ಅವಶ್ಯಕತೆ ಇದ್ದು, ಈಗಾಗಲೇ 3,46,517 ಪುಸ್ತಕಗಳು ಪೂರೈಕೆ ಆಗಿವೆ. ಇನ್ನೂ 1,22,999 ಪುಸ್ತಕಗಳು ಬರಬೇಕಿದೆ.ಶಹಾಪುರ ತಾಲ್ಲೂಕಿನಲ್ಲಿ ಒಟ್ಟು 4,72,868 ಪುಸ್ತಕಗಳ ಅವಶ್ಯಕತೆ ಇದ್ದು, ಅದರಲ್ಲಿ 3,84,109 ಪುಸ್ತಕಗಳು ಸರಬರಾಜು ಆಗಿವೆ. ಇನ್ನೂ 88,759 ಪುಸ್ತಕಗಳು ಪೂರೈಕೆ ಆಗಬೇಕಾಗಿದೆ. ಸುರಪುರ ತಾಲ್ಲೂಕಿನ ಶಾಲಾ ಮಕ್ಕಳಿಗೆ ಒಟ್ಟು 5,81,119 ಪುಸ್ತಕಗಳು ಬೇಕಿದ್ದು, ಅದರಲ್ಲಿ 4,52,421 ಪುಸ್ತಕಗಳು ಬಂದಿವೆ. ಇನ್ನೂ 78,698 ಪುಸ್ತಕಗಳು ಬರಬೇಕಿದೆ.ಸಮವಸ್ತ್ರಗಳ ಪೂರೈಕೆ: ಜಿಲ್ಲೆಯ ಶಾಲಾ ಮಕ್ಕಳಿಗೆ ಅಗತ್ಯವಿರುವ ಎಲ್ಲ ಸಮವಸ್ತ್ರಗಳನ್ನು ಪೂರೈಕೆ ಮಾಡಲಾಗಿದ್ದು, ಈಗಾಗಲೇ ಶಾಲೆಗಳಿಗೆ ಕಳುಹಿಸಲಾಗುತ್ತಿದೆ. 1 ರಿಂದ ಎಸ್ಸೆಸ್ಸೆಲ್ಸಿ ತರಗತಿಯ 1,99,734 ಬಾಲಕರು ಮತ್ತು 1,81,948 ಬಾಲಕಿಯರು ಸೇರಿದಂತೆ 3,81,682 ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಯಾದಗಿರಿ ತಾಲ್ಲೂಕಿನ 1,16,040 ಸುರಪುರ ತಾಲ್ಲೂಕಿನ 1,41,030 ಮತ್ತು ಶಹಾಪುರ ತಾಲ್ಲೂಕಿನ 1,24,612 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ.ಶಾಲಾ ಪ್ರಾರಂಭೋತ್ಸವಕ್ಕೂ ಮೊದಲೇ ಎಲ್ಲ ಶಾಲೆಗಳಿಗೆ ಪುಸ್ತಕಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಲಕ ಶಾಲೆಗಳ ಮುಖ್ಯಾಧ್ಯಾಪಕರಿಗೆ ಪುಸ್ತಕಗಳನ್ನು ಹಂಚಿಕೆ ಮಾಡಲಾಗಿದೆ. ಶಾಲಾ ಪ್ರಾರಂಭ ದಿನದಿಂದಲೇ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಣೆ ಮಾಡಲು ಸಿದ್ಧತೆ ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.