11 ಮಹಿಳೆಯರ ಕೊಲೆ ಪ್ರಕರಣ ಇಬ್ಬರು ಸರಣಿ ಹಂತಕರ ಬಂಧನ

7

11 ಮಹಿಳೆಯರ ಕೊಲೆ ಪ್ರಕರಣ ಇಬ್ಬರು ಸರಣಿ ಹಂತಕರ ಬಂಧನ

Published:
Updated:
11 ಮಹಿಳೆಯರ ಕೊಲೆ ಪ್ರಕರಣ ಇಬ್ಬರು ಸರಣಿ ಹಂತಕರ ಬಂಧನ

ತುಮಕೂರು: ತುಮಕೂರು ಮತ್ತು ಬೆಂಗಳೂರು ವ್ಯಾಪ್ತಿಯಲ್ಲಿ ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ಕಾಮತೃಷೆ ಮತ್ತು ಒಡವೆ, ಹಣಕ್ಕಾಗಿ 11 ಮಂದಿ ವೇಶ್ಯೆಯರನ್ನು ಬರ್ಬರವಾಗಿ ಕೊಲೆ ಮಾಡಿದ್ದ ಇಬ್ಬರು ಸರಣಿ ಹಂತಕರನ್ನು ತುಮಕೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತೀರ್ಥಹಳ್ಳಿ ತಾಲ್ಲೂಕಿನ ಟೆಂಕ ಬಯಲು ವಾಸಿ ಪ್ರೇಮಾ ಮತ್ತು ಈಕೆಯ ಅಕ್ಕನ ಮಗ ರಾಘವೇಂದ್ರ ಬಂಧಿತ ಹಂತಕರು. ಇನ್ನೊಬ್ಬ ಹಂತಕ ತೀರ್ಥಹಳ್ಳಿ ತಾಲ್ಲೂಕಿನ ತುಡಕಿ ಗ್ರಾಮದ ಸುಂದರೇಶ ತಲೆ ಮರೆಸಿಕೊಂಡಿದ್ದಾನೆ. ಜಿಲ್ಲೆಯ ಗ್ರಾಮಾಂತರ ಉಪ ವಿಭಾಗ ಹಾಗೂ ಜಿಲ್ಲೆಯ ವಿಶೇಷ ತಂಡಗಳು ಹಂತಕರನ್ನು ಭಾನುವಾರ ಬಂಧಿಸಿದ್ದು, ಜಿಲ್ಲೆ ವ್ಯಾಪ್ತಿಯಲ್ಲಿ ಆಗಿದ್ದ ಮೂರು ಮತ್ತು ರಾಜ್ಯದ ಇತರೆಡೆ ನಡೆದಿದ್ದ 8 ಕೊಲೆ ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಕಮಲ್‌ಪಂತ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಹಂತಕರ ಬಂಧನ

ಬೆಂಗಳೂರಿನಲ್ಲಿ ವೇಶ್ಯಾ ವೃತ್ತಿ ನಡೆಸುತ್ತಿದ್ದ ವರಲಕ್ಷ್ಮಿ, ಗಂಗಮ್ಮ, ನಾಗಮ್ಮ, ಲತಾ, ಲಕ್ಷ್ಮಿದೇವಿ, ನೇತ್ರಾ ಹಂತಕರ ಪಾತಕ ಕೃತ್ಯಕ್ಕೆ ಬಲಿಯಾದವರು. ಉಳಿದ ಐದು ಮಂದಿ ಮಹಿಳೆಯರ ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ. ಕೊಲೆಯಾದ ಎಲ್ಲ ನತದೃಷ್ಟ ವೇಶ್ಯೆಯರು ಬೆಂಗಳೂರು ಮತ್ತು ನೆಲಮಂಗಲದ ವಿವಿಧ ಬಡಾವಣೆಗಳಲ್ಲಿ ವಾಸವಿದ್ದರು. ಮೆಜೆಸ್ಟಿಕ್, ಅಂಚೆಪಾಳ್ಯ ಹಾಗೂ ಆರ್.ಟಿ.ನಗರದಿಂದ ಈ ಮಹಿಳೆಯರನ್ನು ಕಾಮತೃಷೆ ತೀರಿಸಿಕೊಳ್ಳಲು ಹಂತಕರಾದ ರಾಘವೇಂದ್ರ ಮತ್ತು ಸುಂದರೇಶ ವ್ಯಾನಿನಲ್ಲಿ ಕರೆದೊಯ್ಯುತ್ತಿದ್ದರು.ಈ ಮಹಿಳೆಯರಿಗೆ ನಿದ್ರೆ ಮಾತ್ರೆ ಬೆರೆಸಿದ ಮದ್ಯ ಕುಡಿಸಿ, ಲೈಂಗಿಕ ತೃಷೆ ತೀರಿಸಿಕೊಂಡ ನಂತರ ಒಡವೆ, ಹಣ ಕಸಿದುಕೊಂಡು ಕತ್ತು ಬಿಗಿದು ಕೊಲೆ ಮಾಡುತ್ತಿದ್ದರು.ಶವಗಳನ್ನು ದೂರಕ್ಕೆ ಸಾಗಿಸಿ ಕೆರೆಕಟ್ಟೆಗಳಿಗೆ ಎಸೆಯುತ್ತಿದ್ದರು. ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದ ಪ್ರೇಮಾ ಇವರ ಕೃತ್ಯಕ್ಕೆ ಸಹಕರಿಸುತ್ತಿದ್ದಳು.ಹಂತಕರಿಗೆ ಬಲಿಯಾದ ಮೊದಲ ಮಹಿಳೆ 2010ರ ಫೆಬ್ರುವರಿ 24ರಂದು ಮೆಜೆಸ್ಟಿಕ್‌ನಿಂದ ಕಾಣೆಯಾದ 22ರ ಹರೆಯದ ಹೆಂಗಸು. 2010ರ ಡಿಸೆಂಬರ್ 12ರಂದು ಕೊಲೆಯಾದ ಬೆಂಗಳೂರಿನ ವಿಜಯನಗರ ನಿವಾಸಿ ನೇತ್ರಾ ಹನ್ನೊಂದನೆಯವರು. ಒಂಬತ್ತು ತಿಂಗಳ ಅವಧಿಯಲ್ಲಿ 11 ಮಹಿಳೆಯರನ್ನೂ ಹಂತಕರು ಒಂದೇ ಬಗೆಯಲ್ಲಿ ಕೊಲೆ ಮಾಡಿದ್ದರು. ಆರೋಪಿಗಳಿಂದ ಒಂದು ಮಾರುತಿ ವ್ಯಾನ್, 100 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಕಮಲ್‌ಪಂತ್     ತಿಳಿಸಿದರು.ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ತುಮಕೂರು ತಾಲ್ಲೂಕಿನ ಬೆಳ್ಳಾವಿ, ಕಳ್ಳಂಬೆಳ್ಳ ಹಾಗೂ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂವರು ಅಪರಿಚಿತ ಮಹಿಳೆಯರ ಕೊಲೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿದ್ದ ತುಮಕೂರು ಪೊಲೀಸರಿಗೆ ಹಂತಕರು ಸಿಕ್ಕಿಬಿದ್ದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೆ.ಶಿವಶಂಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry