ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಆರೋಪಿಗಳಿಗೆ 2 ವರ್ಷ ಜೈಲು

ಯುವತಿಯ ಮಾನಭಂಗ ಯತ್ನ ಪ್ರಕರಣ
Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಗುವಾಹಟಿ (ಐಎಎನ್‌ಎಸ್): ದೇಶದಾದ್ಯಂತ ತೀವ್ರ ಸುದ್ದಿಯಾಗಿದ್ದ ಇಲ್ಲಿನ ಜಿ.ಎಸ್. ರಸ್ತೆಯಲ್ಲಿ ನಡೆದ ಯುವತಿಯ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 16 ಆರೋಪಿಗಳ ಪೈಕಿ 11 ಮಂದಿಗೆ ಸ್ಥಳೀಯ ನ್ಯಾಯಾಲಯ ತಲಾ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಇತರ ನಾಲ್ವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಇದೇ ವೇಳೆ ಒಬ್ಬನನ್ನು ಬಾಲಾಪರಾಧಿ ಎಂದು ನ್ಯಾಯಾಲಯ ಗುರುತಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಅಮರಜ್ಯೋತಿ ಕಲಿಟಾ ಸೇರಿದಂತೆ 11 ಮಂದಿಗೆ ಕಠಿಣ ಸೆರೆಮನೆವಾಸ ಶಿಕ್ಷೆ ಹಾಗೂ ತಲಾ 3 ಸಾವಿರ ರೂಪಾಯಿ ದಂಡ ವಿಧಿಸಿ ಕಾಮರೂಪ್ ನ್ಯಾಯಾಲಯದ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಎಸ್.ಪಿ. ಮೊಯಿತ್ರಾ ಆದೇಶ ನೀಡಿದರು.

ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಕಾರಾಗೃಹದಲ್ಲಿ ಕಳೆದ ಸಮಯವನ್ನೂ ಶಿಕ್ಷೆಯ ಅವಧಿಯಾಗಿ  ಪರಿಗಣಿಸುವಂತೆ ಇದೇ ವೇಳೆ ನ್ಯಾಯಾಲಯ ತಿಳಿಸಿದೆ.
ಪುಷ್ಪೇಂದ್ರ ದಾಸ್, ಸಿಕಂದರ್ ಬಾಸ್ಫೋರ್, ಧನರಾಜ್ ಬಾಸ್ಫೋರ್, ನವಜ್ಯೋತಿ ಬರುವಾ, ನವಜ್ಯೋತಿ ದೆಕಾ, ದೀಪಕ್ ದೇವ್, ರುಬುಲ್ ಅಲಿ, ದೆಬಾ ದಾಸ್, ರೂಪ್‌ಕಾಂತ್ ಕಲಿಟಾ ಮತ್ತು ಘನಶ್ಯಾಂ ಕುಮಾರ್ ಮಲಿಕ್ ಶಿಕ್ಷೆಗೆ ಗುರಿಯಾದವರು. ಸ್ಥಳೀಯ ಟಿ.ವಿ ಚಾನೆಲ್ ವರದಿಗಾರ ಗೌರವ್ ಜ್ಯೋತಿ ನಿಯೊಗ್ ಮತ್ತು ಹಫೀಜುದ್ದೀನ್, ದಿಗಂತಾ ಬಸುಮತಾರಿ, ಜಿತುಮೋನಿ ದೆಕಾ ಅವರನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪ್ರಕರಣದಿಂದ ಖುಲಾಸೆ ಮಾಡಿದೆ.

ಜುಲೈ 9ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 16 ಮಂದಿಯನ್ನು ಬಂಧಿಸಿದ್ದರು. ಒಬ್ಬನನ್ನು ಅಪ್ರಾಪ್ತನೆಂದು ಗುರುತಿಸಿದ್ದು, ಈತನ ವಿಚಾರಣೆ ಬಾಲಾಪರಾಧ ನ್ಯಾಯಾಲಯದಲ್ಲಿ ನಡೆಯಲಿದೆ. ಎಲ್ಲ ಆರೋಪಿಗಳು ಜಾಮೀನು ಪಡೆದಿದ್ದರು.

ನ್ಯಾಯಾಲಯದ ಆದೇಶ ಸಂತಸ ನೀಡಿಲ್ಲ. ಇದನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ 11 ಆರೋಪಿಗಳ ಪರ ವಕೀಲ ಭಾಸ್ಕರ್ ದೇವ ಕೊನ್ವಾರ್ ತಿಳಿಸಿದರು.
ಜುಲೈ 9ರಂದು ಸಂಜೆ ವೇಳೆ ಗುವಾಹಟಿಯ ಪಬ್ ಹೊರಗಡೆ ಹದಿಹರೆಯದ ಯುವತಿಯನ್ನು ಗುಂಪೊಂದು ಸಾರ್ವಜನಿಕವಾಗಿ ಮಾನಭಂಗಕ್ಕೆ ಯತ್ನಿಸಿತ್ತು. ಈ ಕುರಿತ ದೃಶ್ಯಗಳು ಟಿ.ವಿ. ಚಾನೆಲ್‌ಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ದೇಶದಲ್ಲೆಡೆ ಸಂಚಲನ ಉಂಟಾಗಿತ್ತು. ಘಟನೆ ಬಳಿಕ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಎಸ್‌ಐಟಿ ಸೆಪ್ಟೆಂಬರ್ 4ರಂದು ಒಟ್ಟು 16 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT