ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

110 ತುಂಬಿದರೂ ನಡೆಯದ ಶತಮಾನೋತ್ಸವ

Last Updated 29 ಜೂನ್ 2012, 5:45 IST
ಅಕ್ಷರ ಗಾತ್ರ

ಮಳವಳ್ಳಿ: ತಾಲ್ಲೂಕಿನ ಶಿವನಸಮುದ್ರದ(ಬ್ಲಫ್) ಬಳಿಯಿರುವ ಕೆ.ಶೇಷಾದ್ರಿ ಅಯ್ಯರ್ ಪವರ್ ಸ್ಟೇಷನ್ ಶನಿವಾರದಂದು 110 ವರ್ಷ ಪೂರೈಸಲಿದೆ. ಆದರೆ ಶತಮಾನೋತ್ಸವ ಆಚರಣೆ ಮಾತ್ರ ಇಂದಿಗೂ ಆಗಿಲ್ಲ!

2002ರಲ್ಲೇ  ಆಗ ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ.ಅಬ್ದುಲ್‌ಕಲಾಂ ಅವರಿಂದ ನೆರವೇರಬೇಕಿದ್ದ ಶತಮಾನೋತ್ಸವ ಸಂಭ್ರಮಾಚರಣೆಗೆ ಹಲವು ಸಿದ್ದತೆಗಳು ನಡೆದಿದ್ದವು. ಆದರೆ  ತಮಿಳುನಾಡು-ಕರ್ನಾಟಕ ರಾಜ್ಯಗಳ ಕಾವೇರಿ ಬಿಕ್ಕಟ್ಟಿನಿಂದಾಗಿ ಶತಮಾನೋತ್ಸವದ ಸಂಭ್ರಮಕ್ಕೆ ತೆರೆ ಎಳೆಯಲಾಯಿತು  ಎನ್ನಲಾಗಿದೆ.

ಪಿ.ಎಂ.ನರೇಂದ್ರಸ್ವಾಮಿ ಶಾಸಕರಾಗಿ ಆಯ್ಕೆಯಾಗಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾಗ ಶತಮಾನೋತ್ಸವ ಸಂಭ್ರಮಾಚರಣೆ ಮಾಡಲು ಪ್ರಯತ್ನ ಮಾಡುವುದಾಗಿ ಘೋಷಣೆ ಮಾಡಿ ನಾಲ್ಕು ವರ್ಷಗಳು ಕಳೆದಿವೆ.

ರಾಜ್ಯದಲ್ಲಿ ರಾಜರ ಆಡಳಿತದ ಅವಧಿಯಲ್ಲಿ  ಕಾವೇರಿ ನದಿ ನೀರನ್ನು ಉಪಯೋಗಿಸಿಕೊಂಡು ಮೊದಲ ಬಾರಿ ಜಲವಿದ್ಯುತ್ ಉತ್ಪಾದನೆ ಮಾಡಲು ಪ್ರಾರಂಭಿಸಿದ್ದು, ಇದು ಏಷ್ಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಎಂಬ ಇತಿಹಾಸವು ಇದೆ. ಅಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಇಚ್ಚಾಸಕ್ತಿಯಿಂದ ಈ ವಿದ್ಯುತ್ ಉತ್ಪಾದನಾ ಕೇಂದ್ರ ನಿರ್ಮಾಣವಾಗ್ದ್ದಿದು,  ಆಗ ದಿವಾನರಾಗಿದ್ದ ಕೆ.ಶೇಷಾದ್ರಿ ಅಯ್ಯರ್ ಅವರು ಹೆಚ್ಚು ಶ್ರಮಪಟ್ಟಿದ್ದರಿಂದ ಅವರ ಹೆಸರನ್ನು  ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಇಡಲಾಯಿತು.

ಈ ಯೋಜನೆಗೆ 1896ರಲ್ಲಿ ಮೇಜರ್ ಎ.ಜಿ.ಡಿ. ಲಾಟಿನೀರ್ ಅವರು ನೀಲನಕ್ಷೆ ತಯಾರಿಸಿ ಅದರಂತೆ ಇದಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಬ್ರಿಟನ್ ಮತ್ತು ಅಮೇರಿಕಾಗಳಿಂದ ಆಮದು ಮಾಡಿಕೊಂಡು ಆನೆ ಕುದುರೆಗಳ ಸಹಾಯದ ಮೂಲಕ ಇಲ್ಲಿರುವ ಬೆಟ್ಟದ ಕೆಳಗೆ ಸಾಗಿಸಿ, ಸುಮಾರು 400 ಅಡಿ ಎತ್ತರದಿಂದ ಬೀಳುವ ನೀರಿನಿಂದ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ನಿರ್ಮಿಸಲಾಗಿತ್ತು.

1902ರಲ್ಲಿ ಇದರ ಕಾಮಗಾರಿ ಮುಗಿದು ಅಧಿಕೃತವಾಗಿ ಜೂನ್ 30 ರಂದು ವಿದ್ಯುತ್ ಉತ್ಪಾದನೆ ಮಾಡಿ ಇಲ್ಲಿಂದ ಮೊದಲಿಗೆ ಕೋಲಾರದ ಹಟ್ಟಿ ಚಿನ್ನದ ಗಣಿ ಕಾಮಗಾರಿಗೆ ವಿದ್ಯುತ್ ಸರಬರಾಜು ಮಾಡಲಾಯಿತು.

ಇಲ್ಲಿಂದ ಸುಮಾರು 148 ಕಿ.ಮೀ. ದೂರ ವಿದ್ಯುತ್ ಸರಬರಾಜು ಮಾಡಿದ ಜಗತ್ತಿನ ಉದ್ದದ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದು 35 ಕಿಲೊವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಸೀಮಿತವಾಗಿದ್ದ ಈ ಕೇಂದ್ರ ಪ್ರಸ್ತುತ 42 ಮೆಗಾವ್ಯಾಟ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆದರೆ ಈ ಐತಿಹಾಸಿಕ ವಿದ್ಯುತ ಉತ್ಪಾದನಾ ಕೇಂದ್ರವು 110 ವರ್ಷಗಳನ್ನು ಪೂರೈಸಿದರೂ ಕಾರ್ಯಕ್ರಮ ಮಾತ್ರ ನಡೆದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT