ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

110 ಹಳ್ಳಿಗೆ ಕುಡಿಯುವ ನೀರು: ಕಾರಜೋಳ

Last Updated 20 ಸೆಪ್ಟೆಂಬರ್ 2011, 6:05 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ 110 ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆಗೆ ರೂ133 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರೂ. 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಿಕ್ಕೇರಿ ರೈಲ್ವೇ ಮೇಲ್ಸೇತುವೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ರೂ 68 ಕೋಟಿ ವೆಚ್ಚದಲ್ಲಿ ಗುಳೇದಗುಡ್ಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯಿಂದ ಜಿಲ್ಲೆಯಲ್ಲಿ ರೂ 207 ಕೋಟಿ ಅನುದಾನದಲ್ಲಿ 251 ಏತ ನೀರಾವರಿ ಯೋಜನೆ, ಬಾಂದಾರ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ 25 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ ಅಲ್ಲದೇ ಅಂತರ್ಜಲ ಹೆಚ್ಚಳವಾಗಲಿದೆ ಎಂದು ಹೇಳಿದರು.

ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಹೊಲಕ್ಕೆ ನೀರು ಪೂರೈಕೆ ಮಾಡಲು ರೂ 6 ಕೋಟಿ ಅನುದಾನವನ್ನು ಸರ್ಕಾರ ನೀಡಿದೆ ಎಂದರು.

ರೂ 33 ಕೋಟಿ ವೆಚ್ಚದಲ್ಲಿ ಜಿಲ್ಲೆಯ 707 ಕಿ.ಮೀ. ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ, ಅಲ್ಲದೇ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ- ಕಾಲೇಜುಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ನಗರಕ್ಕೆ ರೂ 707 ಕೋಟಿ: ಚಂಡಿಗಡ ಮಾದರಿಯಲ್ಲಿ ಬಾಗಲಕೋಟೆ ನವನಗರವನ್ನು ನಿರ್ಮಿಸಬೇಕೆಂಬ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಕನಸನ್ನು ಪ್ರಸ್ತುತ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈಡೇರುತ್ತಿದೆ ಎಂದು ಹೇಳಿದರು.

ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಅವರು ಮೂರು ವರ್ಷದಲ್ಲಿ ಬಾಗಲಕೋಟೆ ನಗರದ ಅಭಿವೃದ್ಧಿಗಾಗಿ ರೂ 707 ಕೋಟಿ ಅನುದಾನವನ್ನು ತಂದಿದ್ದಾರೆ ಎಂದ ಅವರು, ಇದರಲ್ಲಿ ರೂ 402 ಕೋಟಿಯನ್ನು ಮುಳುಗಡೆ ನಿರಾಶ್ರಿತರಿಗೆ ಪರಿಹಾರ ನೀಡಲು ಮತ್ತು ಉಳಿದ ರೂ 300 ಕೋಟಿಯನ್ನು ನಗರದ ಅಭಿವೃದ್ಧಿಗೆ ವ್ಯಯಿಸಿದ್ದಾರೆ ಎಂದರು.

ನರಕ ಸದೃಶ್ಯವಾಗಿದ್ದ ಬಾಗಲಕೋಟೆಯನ್ನು ಶಾಸಕರು ವಿಶೇಷ ಮುತುವರ್ಜಿ ವಹಿಸಿ ಮಾದರಿ ನಗರವನ್ನಾಗಿ ಮಾಡಿದ್ದು, ಈ ಹಿಂದಿನ ಯಾವೊಬ್ಬ ಶಾಸಕರು ಮಾಡದ ಅಭಿವೃದ್ಧಿಯನ್ನು ಚರಂತಿಮಠ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಅಭಿವೃದ್ಧಿ ಎಂದರೆ ಕೇವಲ ಭಾಷಣವಲ್ಲ ಎಂದ ಅವರು, ಈ ಹಿಂದೆ ಆಡಳಿತ ನಡೆಸಿದ ಪಕ್ಷಗಳಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎಂದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬೇವಿನಮಟ್ಟಿ-ಗದ್ದನಕೇರಿ ಕ್ರಾಸ್ ವರೆಗಿನ 10.7 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಇನ್ನು ಆರು ತಿಂಗಳಲ್ಲಿ ಸಂಚಾರಕ್ಕೆ ಯೋಗ್ಯವಾಗಲಿದೆ ಎಂದು ಹೇಳಿದರು.

ಜನರಿಗೆ ಒಳ್ಳೆಯದನ್ನು ಮಾಡುವುದೇ ಜನಪ್ರತಿನಿಧಿಗಳ ಕೆಲಸ, ಅದರಲ್ಲಿ ಯಾವುದೇ ವಿಶೇಷವಿಲ್ಲ ಎಂದ ಅವರು, ಬಿಟಿಡಿಎಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ ಎಂದರು.

ಸಚಿವ ಕಾರಜೋಳ ಅವರನ್ನು ಶಾಸಕರು ಸನ್ಮಾನಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಿಟಿಡಿಎ ಅಧ್ಯಕ್ಷ ಲಿಂಗರಾಜ ವಾಲಿ, ಸದಸ್ಯ ಕೇಶವ ಭಜಂತ್ರಿ, ಸಂತೋಷ ಹೊಕ್ರಾಣಿ, ಯಲ್ಲಪ್ಪ ಜಕಾತಿ, ತಾ.ಪಂ. ಅಧ್ಯಕ್ಷೆ ಸುಶೀಲಬಾಯಿ ಲಮಾಣಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT