ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11ರಿಂದ ದುಂಡು ಮೇಜಿನ ಪರಿಷತ್ತು

Last Updated 7 ಜನವರಿ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜನರನ್ನು ಜಾಗೃತಿಗೊಳಿಸುವ ಮುಖ್ಯ ಉದ್ದೇಶದಿಂದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಇದೇ ತಿಂಗಳ 11 ಮತ್ತು 12ರಂದು ನಗರದಲ್ಲಿ ಧರ್ಮಾಧಿಕಾರಿಗಳ ದುಂಡು ಮೇಜಿನ ಪರಿಷತ್ತನ್ನು ಆಯೋಜಿಸಿದೆ.

ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆಯಲಿರುವ ಈ ಪರಿಷತ್ತಿನಲ್ಲಿ ರಾಜ್ಯದ ವಿವಿಧ ಭಾಗಗಳ 50ಕ್ಕೂ ಅಧಿಕ ಧರ್ಮಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

11ರಂದು ಬೆಳಿಗ್ಗೆ 10 ಗಂಟೆಗೆ ಸಿದ್ಧಗಂಗಾ ಕ್ಷೇತ್ರದ ಪೀಠಾಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ಈ ದುಂಡು ಮೇಜಿನ ಪರಿಷತ್ತನ್ನು ಉದ್ಘಾಟಿಸಲಿದ್ದು, `ಮದ್ಯಪಾನ ಏಕೆ ಬೇಡ~ ಪುಸ್ತಕವನ್ನು ಕಾನೂನು ಸಚಿವ ಎಸ್. ಸುರೇಶ್‌ಕುಮಾರ್ ಬಿಡುಗಡೆ ಮಾಡಲಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಅಂದು ಮಧ್ಯಾಹ್ನ ಮದ್ಯವರ್ಜನ ಶಿಬಿರಗಳು, ಮದ್ಯಪಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು, ವಿಶೇಷ ಉಪನ್ಯಾಸಗಳು ನಡೆಯಲಿವೆ. 12ರಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

`ಮದ್ಯಪಾನ ಹಾಗೂ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಮಠಾಧೀಶರ ಮೂಲಕ ಸಾಮಾಜಿಕ ಹೊಣೆಗಾರಿಕೆ ಬಗ್ಗೆ ಚಿಂತಿಸುವುದು ಈ ದುಂಡು ಮೇಜಿನ ಪರಿಷತ್ತಿನ ಮೂಲ ಉದ್ದೇಶ. ಎರಡು ದಿನಗಳ ಸಮ್ಮೇಳನದಲ್ಲಿ ಮದ್ಯಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ, ಮದ್ಯ ವ್ಯಸನಿಗಳಿಗೆ ನೀಡಲಾಗುವ ಚಿಕಿತ್ಸೆ ಹಾಗೂ ಮನಪರಿವರ್ತನೆಗೆ ಬಳಸಬಹುದಾದ ವಿಧಾನಗಳ ಬಗ್ಗೆ ಮನೋವೈದ್ಯರು, `ಆಲ್ಕೋಹಾಲಿಕ್ಸ್ ಅನಾನಿಮಸ್~ ಪ್ರತಿನಿಧಿಗಳು ಹಾಗೂ ಬೆಳ್ತಂಗಡಿಯ ಜನಜಾಗೃತಿ ವೇದಿಕೆಯ ನಿರ್ದೇಶಕರು ಮಠಾಧೀಶರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ರಾಜ್ಯದಲ್ಲಿ 12 ಸಾವಿರ ಮಂದಿ ಮಠಾಧೀಶರಿದ್ದು, ಈ ಪೈಕಿ ಶೇ 10ರಷ್ಟು ಮಠಾಧೀಶರು ಈ ಕಾರ್ಯದಲ್ಲಿ ಕೈಜೋಡಿಸಿದರೂ ಕ್ರಾಂತಿ ಮಾಡಬಹುದು. ಈ ನಿಟ್ಟಿನಲ್ಲಿ ಮಂಡಳಿಯು ಧರ್ಮಾಧಿಕಾರಿಗಳ ಮೂಲಕ ನಡೆಸುತ್ತಿರುವ ಮೊದಲ ಪ್ರಯತ್ನ ಇದಾಗಿದೆ~ ಎಂದರು.

`ಉತ್ತರ ಕನ್ನಡ ಜಿಲ್ಲೆಯಲ್ಲಿ 22 ಗ್ರಾಮಗಳನ್ನು ಮದ್ಯ ವ್ಯಸನಮುಕ್ತ ಗ್ರಾಮಗಳನ್ನಾಗಿ ಮಾಡಲು ಪ್ರಯತ್ನ ನಡೆದಿದೆ. ಚಾಮರಾಜನಗರ ಜಿಲ್ಲೆಯ ಎಂಟು ಗ್ರಾಮಗಳನ್ನು ಇದೀಗ ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಮದ್ಯವ್ಯಸನ ಮುಕ್ತ ಗ್ರಾಮಗಳನ್ನಾಗಿ ಪರಿವರ್ತಿಸುವ ಸ್ತ್ರೀಶಕ್ತಿ ಸಂಘಟನೆಗಳಿಗೆ ಮೊದಲ ವರ್ಷ ರೂ. 10 ಸಾವಿರ, ಎರಡನೇ ವರ್ಷ ರೂ. 15 ಸಾವಿರ ಹಾಗೂ ಮೂರನೇ ವರ್ಷ 25 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ~ ಎಂದರು.

`ಸುಮಾರು 40 ಸಾವಿರ ಜನರನ್ನು ವ್ಯಸನಮುಕ್ತರನ್ನಾಗಿಸಿರುವ ಬೆಳ್ತಂಗಡಿಯ ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷ, ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಕಳೆದ ವರ್ಷ ಒಂದು ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವರ್ಷದ ಪ್ರಶಸ್ತಿಯನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ~ ಎಂದರು.

`ದೇಶದಲ್ಲಿ ಮದ್ಯಪಾನದ ಪ್ರಭಾವದಿಂದಲೇ ಶೇ 50ರಷ್ಟು ಹತ್ಯೆ, ಶೇ 15ರಷ್ಟು ಆತ್ಮಹತ್ಯೆ ನಡೆಯುತ್ತಿವೆ. ಅಲ್ಲದೆ, ಶೇ 70ರಷ್ಟು ಅತ್ಯಾಚಾರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳಿಗೆ ಸೇರುತ್ತಿರುವ ಶೇ 60ರಷ್ಟು ರೋಗಿಗಳು ಮದ್ಯವ್ಯಸನಿಗಳೇ ಆಗಿದ್ದಾರೆ~ ಎಂದು ಹೇಳಿದರು.

ಮಂಡಳಿ ಕಾರ್ಯದರ್ಶಿ ಎಚ್.ಬಿ. ದಿನೇಶ್, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಹೊ. ಶ್ರೀನಿವಾಸಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT