ಬುಧವಾರ, ಏಪ್ರಿಲ್ 14, 2021
30 °C

12ರಿಂದ ಚಿಟ್ಟಾಣಿ ಯಕ್ಷಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ಇನೊವೇಟಿವ್ ಸಂಸ್ಥೆ ಆಶ್ರಯದಲ್ಲಿ ಜುಲೈ 12ರಿಂದ 15ರವರೆಗೆ ಚಿಟ್ಟಾಣಿ ಯಕ್ಷ ಸಂಭ್ರಮ ನಡೆಯಲಿದೆ.ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ನಂತರ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಮೈಸೂರು ನಗರ ಗೌರವ ಸಲ್ಲಿಸಲಿದೆ.ಜುಲೈ 12ರಂದು ಸಂಜೆ 5.30ಕ್ಕೆ ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಚಿಟ್ಟಾಣಿ ಯಕ್ಷ ಸಂಭ್ರಮದ ಉದ್ಘಾಟನೆ ನಡೆಯಲಿದೆ. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ಮಹಾಕವಯಿತ್ರಿ ಡಾ.ಲತಾ ರಾಜಶೇಖರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಡಿಸಿಪಿ ಬಸವರಾಜ ಮಾಲಗತ್ತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಕೆ.ಎನ್.ಅಣ್ಣೇಗೌಡ ಅವರು ಭಾಗವಹಿಸುವರು. ನಂತರ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಅಭಿನಯಿಸುವ `ಮಾಯಾ ಬಜಾರ್~ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಜುಲೈ 13ರಂದು ಬೆಳಿಗ್ಗೆ 10.30ಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ತುಂಗಭದ್ರಾ ಸಭಾಂಗಣದಲ್ಲಿ ಯಕ್ಷಗಾನ ತಾಳಮದ್ದಲೆ ಕುರಿತ ವಿಶೇಷ ಉಪನ್ಯಾಸ ನಡೆಯಲಿದೆ. ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಉಪನ್ಯಾಸ ನೀಡುವರು. ನಂತರ `ಮಾಯಾ ಶೂರ್ಪಣಖಿ~ ತಾಳಮದ್ದಲೆ ನಡೆಯಲಿದೆ. ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧ್ಯಕ್ಷತೆ ವಹಿಸಲಿದ್ದು ಪ್ರಸಾರಾಂಗದ ಗೌರವ ನಿರ್ದೇಶಕ ಡಾ.ಡಿ.ಕೆ.ರಾಜೇಂದ್ರ ಮುಖ್ಯ ಅತಿಥಿಯಾಗಿರುವರು. ಅಧ್ಯಯನ ಕೇಂದ್ರದ ಡೀನ್ ಪ್ರೊ.ಟಿ.ಡಿ.ದೇವೇಗೌಡ, ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಜರಿರುವರು.ಜುಲೈ 13ರಂದು ಸಂಜೆ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಹೊಟೇಲ್ ಉದ್ಯಮಿ ಪ್ರಕಾಶ ಶೆಟ್ಟಿ, ಹವೀಕ್ ಸಂಘದ ಅಧ್ಯಕ್ಷ ಡಿ.ಎನ್.ಕೃಷ್ಣಮೂರ್ತಿ, ಯಕ್ಷ ಕೌಮುದಿ ಟ್ರಸ್ಟ್ ಅಧ್ಯಕ್ಷ ಗ.ನಾ.ಭಟ್ಟ ಮತ್ತು ಕರಾವಳಿ ಯಕ್ಷಗಾನ ಕೇಂದ್ರದ ಗೌರವ ಕಾರ್ಯದರ್ಶಿ ಧನಂಜಯ ಅವರನ್ನು ಸನ್ಮಾನಿಸಲಾಗುವುದು. ಮಾಜಿ ಮಹಾಪೌರ ವಾಸು ಅವರು ಸಾಧಕರನ್ನು ಸನ್ಮಾನಿಸುವರು. ನಂತರ `ಕೃಷ್ಣಾರ್ಜುನ ಕಾಳಗ~ ಯಕ್ಷಗಾನ ನಡೆಯಲಿದೆ.ಜುಲೈ 14ರಂದು ಸಂಜೆ 5.30ಕ್ಕೆ ನಡೆಯುವ ಸಮಾರಂಭದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಅವರನ್ನು ಸನ್ಮಾನಿಸಲಾಗುವುದು. ಹಿರಿಯ ಸಾಹಿತಿ ದೇಜಗೌ ಅವರು ಅಧ್ಯಕ್ಷತೆ ವಹಿಸುವರು. ಇನೊವೇಟಿವ್ ಸಂಸ್ಥೆ ಅಧ್ಯಕ್ಷ ಜಿ.ಎಸ್.ಭಟ್ಟ ಮತ್ತು ಪತ್ರಕರ್ತ ರವೀಂದ್ರ ಭಟ್ಟ ಅಭಿನಂದನಾ ಭಾಷಣ ಮಾಡುವರು. ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ಎನ್.ಪಿ.ಪದಕಿ ಮುಖ್ಯ ಅತಿಥಿಯಾಗಿರುವರು.ಈ ಸಮಾರಂಭಕ್ಕೆ ಮೊದಲು ಸಂಜೆ 4ರಿಂದ 5.30ರವರೆಗೆ `ಶರಸೇತು ಬಂಧ~ ಮತ್ತು ಸಮಾರಂಭದ ನಂತರ ಸಂಜೆ 6.30ರಿಂದ 9 ಗಂಟೆಯವರೆಗೆ `ಭೀಷ್ಮ ಪರ್ವ~ ಯಕ್ಷಗಾನ ಪ್ರಸಂಗ ನಡೆಯಲಿದೆ.ಜುಲೈ 15ರಂದು ಬೆಳಿಗ್ಗೆ 10.30ಕ್ಕೆ ಅರಮನೆ ಆವರಣದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರ ಕಾರ‌್ಯಾಲಯದಲ್ಲಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೊಂದಿಗೆ ಸಂವಾದ ನಡೆಯಲಿದೆ. ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದು ಜಿ.ಎಸ್.ಭಟ್ಟ ಸಂವಾದದ ಸಂಯೋಜನೆ ನಡೆಸುವರು.ಸಂಜೆ 5 ಗಂಟೆಗೆ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ `ಕಂಸ ದಿಗ್ವಿಜಯ~ ಮತ್ತು `ಕಂಸ ವಧೆ~ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಎಲ್ಲ ಯಕ್ಷಗಾನ ಪ್ರದರ್ಶನಗಳಿಗೂ ಉಚಿತ ಪ್ರವೇಶವಿದೆ ಎಂದು ಸಂಸ್ಥೆ ಅಧ್ಯಕ್ಷ ಜಿ.ಎಸ್. ಭಟ್ಟ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.