ಗುರುವಾರ , ಮೇ 13, 2021
16 °C

12ರಿಂದ ದೆಹಲಿಯಲ್ಲಿ ಪಾಕ್ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್(ಪಿಟಿಐ): ಪಾಕಿಸ್ತಾನವು ಭಾರತೀಯರಿಗೆ ತನ್ನ ಮೃದು ರೂಪವನ್ನು ತೋರುವ ಮತ್ತು ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನವಾಗಿ ಈ ತಿಂಗಳ 12ರಿಂದ 15ರವರೆಗೆ ನವದೆಹಲಿಯಲ್ಲಿ ಪ್ರಥಮ ಬೃಹತ್ ಜೀವನಶೈಲಿ ವಸ್ತುಗಳ ಪ್ರದರ್ಶನ ಮತ್ತು ಸಾಂಸ್ಕೃತಿಕ ಮೇಳವನ್ನು ಆಯೋಜಿಸಿದೆ.ಮೂರು ದಿನಗಳ ಈ ಮೇಳದಲ್ಲಿ ಪಾಕಿಸ್ತಾನದ ಉನ್ನತ ಬ್ರಾಂಡ್‌ಗಳು ಮತ್ತು ಫ್ಯಾಷನ್ ಔಟ್‌ಲೆಟ್‌ಗಳು ಸೇರಿದಂತೆ ಸುಮಾರು 100 ವಾಣಿಜ್ಯ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಕಳೆದ ಫೆಬ್ರುವರಿ ತಿಂಗಳು ಲಾಹೋರ್‌ನಲ್ಲಿ ನಡೆದ ಭಾರತೀಯ ಉತ್ಪನ್ನಗಳ ಮೇಳಕ್ಕೆ ಪ್ರತಿಯಾಗಿ ಪಾಕಿಸ್ತಾನದ ವ್ಯಾಪಾರ ಅಭಿವೃದ್ಧಿ ಪ್ರಾಧಿಕಾರ (ಟಿಡಿಎಪಿ) ತನ್ನ ಈ ಜೀವನವಿಧಾನ ಪ್ರದರ್ಶನವನ್ನು ಏರ್ಪಡಿಸಿದೆ. ಎರಡೂ ದೇಶಗಳ ವಾಣಿಜ್ಯ ಸಚಿವರ ಸಮ್ಮುಖದಲ್ಲಿ ಈ ಪ್ರದರ್ಶನ ಉದ್ಘಾಟನೆಯಾಗಲಿದೆ ಎಂದು ಟಿಡಿಎಪಿ ಮುಖ್ಯ ಕಾರ್ಯನಿರ್ವಾಹಕ ತಾರೀಕ್ ಪುರಿ ಕರಾಚಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಪಾಕ್ ಉತ್ಪನ್ನಗಳು ಉತ್ತಮ ಮಟ್ಟದಲ್ಲಿ ಮಾರಾಟವಾಗುವ ನಿರೀಕ್ಷೆಯಿದ್ದು, ವಿಶ್ವದ ಬೃಹತ್ ಗ್ರಾಹಕ ಮಾರುಕಟ್ಟೆಯಾದ ಭಾರತ ಸೇರಿದಂತೆ ನಮ್ಮ ಪ್ರಾಂತ್ಯದಲ್ಲಿ ವ್ಯಾಪಾರವನ್ನು ಅಭಿವೃದ್ಧಿಪಡಿಸುವ ವಿಪುಲ ಅವಕಾಶವನ್ನು ಶೋಧಿಸಲಾಗುತ್ತಿದೆ. ಮೇಳದಲ್ಲಿ ಪ್ರದರ್ಶನ- ಮಾರಾಟಕ್ಕಿಡಲು ಈಗಾಗಲೇ ಸಮುದ್ರದ ಮೂಲಕ ಪಾಕ್ ಉತ್ಪನ್ನಗಳನ್ನು ಭಾರತಕ್ಕೆ ಸಾಗಿಸಲಾಗಿದೆ.

 

ಇನ್ನೂ ಹೆಚ್ಚಿನ ವಸ್ತುಗಳನ್ನು ವಾಘಾ ಗಡಿಯ ಮುಖಾಂತರ ಕಳುಹಿಸಲಾಗುತ್ತಿದೆ. ಪಾಕ್ ವಾಣಿಜ್ಯೋದ್ಯಮ ನಿಯೋಗದೊಡನೆ 32 ಸದಸ್ಯರ ಅಕ್ಕಿ ಉದ್ಯಮ ಪ್ರತಿನಿಧಿಗಳು ಸಹ ತೆರಳಲಿದ್ದು, ಇವರು ಭಾರತೀಯ ತಂತ್ರಜ್ಞಾನಗಳನ್ನು ಪರಿಶೀಲಿಸಲಿದ್ದಾರೆ. ನಿಯೋಗದ ಮೊದಲ ತಂಡ ಈ ತಿಂಗಳ 9ರಂದು ಮತ್ತು ಉಳಿದವರು ತಂಡೋಪತಂಡವಾಗಿ ನಂತರ ಪ್ರಯಾಣಿಸಲಿದ್ದಾರೆ ಎಂದು ಅವರು ಹೇಳಿದರು.ಮೇಳದ ಉದ್ಘಾಟನೆಯ ಬಳಿಕ ಭಾರತದ ವಾಣಿಜ್ಯ ಸಚಿವ ಆನಂದ ಶರ್ಮ ಅವರು ಪಾಕ್ ವಾಣಿಜ್ಯೋದ್ಯಮ ನಿಯೋಗಕ್ಕೆ ಔತಣಕೂಟ ಏರ್ಪಡಿಸಿದ್ದಾರೆ. ಮಾರನೇ ದಿನ ಪಾಕ್ ವಾಣಿಜ್ಯ ಸಚಿವ ಮಖ್ದೂಮ್ ಅಮಿನ್ ಫಾಹಿಮ್ ಅವರು ಭಾರತೀಯ ವಾಣಿಜ್ಯೋದ್ಯಮಿಗಳಿಗೆ ಔತಣಕೂಟ ಏರ್ಪಡಿಸಲಿದ್ದಾರೆ ಎಂದರು.ಪಾಕಿಸ್ತಾನವು ಮುಂದಿನ ವರ್ಷದಿಂದ ಭಾರತಕ್ಕೆ ಆಪ್ತರಾಷ್ಟ್ರ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ತನ್ನ ವ್ಯಾಪಾರ ಮಾರ್ಗಗಳನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ. 2014ರೊಳಗೆ ದ್ವಿಪಕ್ಷೀಯ ವ್ಯಾಪಾರವನ್ನು ಈಗಿನ 2 ಶತಕೋಟಿ ಅಮೆರಿಕನ್ ಡಾಲರ್‌ಗಳಿಂದ 6 ಶತಕೋಟಿ ಅಮೆರಿಕನ್ ಡಾಲರ್‌ಗಳಿಗೆ ಹೆಚ್ಚಿಸಲು ಉಭಯ ದೇಶಗಳು ಯೋಜಿಸಿವೆ ಎಂದರು.ಲಾಹೋರ್‌ನಲ್ಲಿ ನಡೆದ ಮೂರು ದಿನಗಳ ಭಾರತೀಯ ವಸ್ತು ಪ್ರದರ್ಶನ- ಮಾರಾಟ ಮೇಳದಲ್ಲಿ ಸುಮಾರು 60 ಸಾವಿರ ಜನರು ಭಾಗವಹಿಸಿದ್ದು, ಆಭರಣಗಳು, ಸೌಂದರ್ಯ ವರ್ಧಕಗಳು, ರಾಸಾಯನಿಕ ಪದಾರ್ಥಗಳು, ಜವಳಿಗಳು, ಮೋಟಾರು ವಾಹನ ಸಾಮಗ್ರಿಗಳು, ಕರಕುಶಲ ವಸ್ತುಗಳು ಹಾಗೂ ಎಂಜಿನಿಯರಿಂಗ್ ಸರಕುಗಳು ಸೇರಿ ಅನೇಕ ಉತ್ಪನ್ನಗಳು ಪ್ರದರ್ಶನಗೊಂಡಿವೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.