12ರ ಮೋಹ; ಕಾಡಿದ `ಪ್ರಳಯ' ಭೀತಿ

7

12ರ ಮೋಹ; ಕಾಡಿದ `ಪ್ರಳಯ' ಭೀತಿ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ನೂರು ವರ್ಷಗಳಿಗೊಮ್ಮೆ ಬರುವ ವಿಶಿಷ್ಟ ದಿನವಾದ `12-12-12' ತಾರೀಕಿನ ಮೋಡಿಗೆ ಜನಸಾಮಾನ್ಯರಷ್ಟೇ ಒಳಗಾಗಿಲ್ಲ. ಈ ಜಾದೂ ಸಂಖ್ಯೆಯ ಮೋಹದಿಂದ ತಪ್ಪಿಸಿಕೊಳ್ಳಲು ವಿಧಾನ ಪರಿಷತ್‌ಗೂ ಸಾಧ್ಯವಾಗಿಲ್ಲ.ಬುಧವಾರ ಮೇಲ್ಮನೆ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ವೇಳೆ ಸಭಾಪತಿಗಳ ಎದುರಿನ ಗೋಡೆ ಗಡಿಯಾರ 12 ಗಂಟೆ ತೋರಿಸುತ್ತಿದ್ದಂತೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಚೀಟಿಯೊಂದನ್ನು ಸಂಭ್ರಮದಿಂದ ಓದುತ್ತಾ, `ಇಂದು 2012ರ , 12ನೇ ತಿಂಗಳ 12ನೇ ದಿನಾಂಕ ಮಾತ್ರವಲ್ಲ, ಈಗ 12 ಗಂಟೆ ಕೂಡ. ಕೆಲವು ಸದಸ್ಯರು ಇದನ್ನು ನನ್ನ ಗಮನಕ್ಕೆ ತಂದರು. ಅದನ್ನು ಈ ಸುಸಮಯದಲ್ಲಿ ಎಲ್ಲ ಸದಸ್ಯರ ಗಮನಕ್ಕೆ ತಂದಿದ್ದೇನೆ' ಎಂದರು.  `ಅರೇ, ಹೌದಲ್ವೆ' ಎನ್ನುತ್ತ ಸದಸ್ಯರೆಲ್ಲ ಖುಷಿಪಟ್ಟರು.ಬಳಿಕ ಮುಂದುವರಿದ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆ ಕಾಕತಾಳೀಯ ಎನ್ನುವಂತೆ 12 ಗಂಟೆ 12 ನಿಮಿಷಕ್ಕೆ ಬಂತು. ಇದರಿಂದ ಇನ್ನಷ್ಟು ಸಂಭ್ರಮಿಸಿದ ಭಾರತಿ ಅವರು, ಇಂದು ಕೇವಲ 12-12-12 ಅಷ್ಟೇ ಅಲ್ಲ, 12 ಗಂಟೆ 12 ನಿಮಿಷಕ್ಕೆ ನನಗೆ ಸದನದಲ್ಲಿ ಪ್ರಶ್ನೆ ಕೇಳುವ ಸದವಕಾಶ ಲಭಿಸಿದೆ' ಎಂದರು.ಇದು ಮೇಲ್ಮನೆಯ ಹಲವು ಹಿರಿಯ ಸದಸ್ಯರ ಮೊಗದಲ್ಲಿ ನಗೆ ಉಕ್ಕಿಸಿದರೆ, ಗೋಡೆಯಲ್ಲಿದ್ದ ಗಡಿಯಾರ ಮುಳ್ಳುಗಳು ಮಾತ್ರ ಟಿಕ್ ಟಿಕ್ ಎನ್ನುತ್ತ ಮುಂದೆ ಚಲಿಸುತ್ತ 12ರ ಸುಸಮಯದ ಮಾಂತ್ರಿಕತೆಯನ್ನು ಇತಿಹಾಸಕ್ಕೆ ಸೇರಿಸಲು ಪೈಪೋಟಿಯಲ್ಲಿದ್ದವು.

`ಇದೇ ತಿಂಗಳ 21, ಜಗತ್ತಿಗೆ ಕೊನೆಯ ದಿನ. ಅಂದು ಭೀಕರ ಪ್ರಳಯವಾಗಿ ಪ್ರಪಂಚ ಸರ್ವನಾಶ ಆಗುತ್ತದೆ ಎಂಬ ವದಂತಿಯ ವಿಚಾರ ಕೂಡ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು.  ಶೂನ್ಯವೇಳೆಯಲ್ಲಿ  ಈ ವಿಚಾರ ಪ್ರಸ್ತಾಪಿಸಿದ ವಿರೋಧ ಪಕ್ಷದ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಪ್ರಳಯದ ವಿಚಾರದಲ್ಲಿ ಸಾರ್ವಜನಿಕರು ಬಹಳ ಆತಂಕದಿಂದ ಇದ್ದಾರೆ. ಕಳೆದ ಹಲವು ತಿಂಗಳುಗಳಿಂದ ಪ್ರತಿನಿತ್ಯ  ಕೆಲವು ಪತ್ರಿಕೆಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಪ್ರಳಯದ ಸುದ್ದಿ, ವಿಶ್ಲೇಷಣೆ, ಸಂವಾದಗಳು ನಡೆಯುತ್ತಿದ್ದು ಜನರು ಗೊಂದಲದಲ್ಲಿದ್ದಾರೆ, ಭಯಭೀತರಾಗಿದ್ದಾರೆ. ವದಂತಿ ಮತ್ತಷ್ಟು ಹರಡದಂತೆ ಮಾಡಲು ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.ಸಭಾನಾಯಕ ವಿ.ಸೋಮಣ್ಣ ಮಾತ್ರ ಪ್ರಳಯದ ಬಗ್ಗೆ ಕಿಂಚಿತ್ತೂ ಆತಂಕ ವ್ಯಕ್ತಪಡಿಸದೇ, `ಪ್ರಳಯ ಆಗುತ್ತದೆ ಎಂಬುದು ಮೂಢನಂಬಿಕೆ. ಅದನ್ನು ನಂಬುತ್ತಿರುವುದು ವಿಪರ್ಯಾಸ. ಹಾಗೇನಾದರೂ ಪ್ರಳಯವಾದರೆ ಡಿ. 22ರಂದು ನಿಮಗೆ ಸ್ಪಷ್ಟೀಕರಣ ಕೊಡುತ್ತೇವೆ' ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದಸ್ಯರಿಗೆ ಸಮಾಧಾನ ಆಗಲಿಲ್ಲ.ಉತ್ತರ ಮುಂದುವರಿಸಿದ ಸಚಿವರು, `ಯಾವ ಮಾಧ್ಯಮಗಳು ಇಂತಹ ವಿಚಾರಗಳ ಮೂಲಕ ಸಾರ್ವಜನಿಕರಲ್ಲಿ ಭಯ, ಆತಂಕ ಮೂಡಿಸಿ, ಆ ಮೂಲಕ ಸಾರ್ವಜನಿಕರಿಗೆ ತೊಂದರೆಯಾದರೆ, ಸಾವು, ನೋವು ಸಂಭವಿಸಿದರೆ ಅಂತಹ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry