12 ದೇವರಕಾಡುಗಳ ಜಾಗದ ಸರ್ವೆ

7

12 ದೇವರಕಾಡುಗಳ ಜಾಗದ ಸರ್ವೆ

Published:
Updated:

ಮಡಿಕೇರಿ: ದೇವರ ಕಾಡುಗಳನ್ನು ಸಂರಕ್ಷಿಸುವ ದಿಸೆಯಲ್ಲಿ 12 ದೇವರಕಾಡುಗಳ ಜಾಗ ಸರ್ವೆ ಮಾಡಿ ನಾಮಫಲಕ ಹಾಕುವ ಕೆಲಸ ಪ್ರಗತಿಯಲ್ಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಆನಂದ ತಿಳಿಸಿದ್ದಾರೆ.ಈ ವರ್ಷ ದೇವರಕಾಡುಗಳನ್ನು ಸಂರಕ್ಷಿಸುವುದಕ್ಕಾಗಿ ರೂ. 12 ಲಕ್ಷ  ಯೋಜನೆ ರೂಪಿಸಲಾಗಿದೆ. ಈ ಪೈಕಿ 7 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. 12 ದೇವರಕಾಡುಗಳ ಪೈಕಿ ಈಗಾಗಲೇ ಮಡಿಕೇರಿ ತಾಲ್ಲೂಕಿನ ಅರೆಕಾಡು ಹಾಗೂ ಸೋಮವಾರಪೇಟೆ ತಾಲ್ಲೂಕಿನ ಸುಗ್ಗಿ ದೇವರಬನಗಳ ಜಾಗ ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.ಜಿಲ್ಲೆಯಲ್ಲಿ ಸುಮಾರು 1400 ದೇವರ ಕಾಡುಗಳಿವೆ. ಒಂದು ಎಕರೆಯಿಂದ 400 ಎಕರೆ ವಿಸ್ತೀರ್ಣದವರೆಗೂ ದೇವರಕಾಡುಗಳಿವೆ. ಕೆಲವೆಡೆ ಜಾಗ ಒತ್ತುವರಿಯಾಗಿದೆ. ಇನ್ನೂ ಕೆಲವು ದೇವರಕಾಡುಗಳ ಜಾಗ ವಿವಾದ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಸರ್ವೆ ಮಾಡಿದ ನಂತರವಷ್ಟೇ ಎಲ್ಲೆಲ್ಲಿ ಎಷ್ಟು ಜಾಗ ಒತ್ತುವರಿಯಾಗಿದೆ ಎಂಬುದು ತಿಳಿಯಲಿದೆ.ಸಂತಸದ ವಿಚಾರವೆಂದರೆ, ಕೆಲವೆಡೆ ದೇವರಕಾಡು ಒತ್ತುವರಿ ಮಾಡಿದ ಸ್ಥಳೀಯರು ಸ್ವಯಂಪ್ರೇರಿತರಾಗಿ ಜಾಗ ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. ಇದು ಮೆಚ್ಚುಗೆಯ ಸಂಗತಿ ಎಂದರು.ದೇವರ ಕಾಡುಗಳ ಸಂರಕ್ಷಣೆಗೆ ಪ್ರತಿ ವರ್ಷ ಹಣ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮೊದಲು ದೇವರಕಾಡುಗಳ ಜಾಗ ಸರ್ವೆ ಮಾಡಿ, ಜಾಗ ಗುರುತಿಸಲಾಗುವುದು. ಆನಂತರ ಜಾಗದ ಸುತ್ತಲೂ ತಂತಿ ಬೇಲಿ ಹಾಕಿ, ನಾಮಫಲಕ ಹಾಕುವ ಮೂಲಕ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry