ಗುರುವಾರ , ನವೆಂಬರ್ 21, 2019
21 °C

12 ನಾಮಪತ್ರ ಸಮರ್ಪಕ

Published:
Updated:

ಶಿಡ್ಲಘಟ್ಟ:  ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆದಿದ್ದು, ಎಲ್ಲಾ 12 ಮಂದಿ ಅಭ್ಯರ್ಥಿಗಳ ಉಮೇದುವಾರಿಕೆ ಸಮರ್ಪಕವಾಗಿವೆ.ಅಭ್ಯರ್ಥಿಗಳ ಆಸ್ತಿ ಮೌಲ್ಯದಲ್ಲಿ ಕೆಜೆಪಿ ಪಕ್ಷದ ಶಿವಕುಮಾರಗೌಡ ಮುಂಚೂಣಿಯಲ್ಲಿದ್ದು, 29 ಕೋಟಿ ರೂಪಾಯಿ ಹಾಗೂ ಅವರ ಪತ್ನಿ ಹೆಸರಿನಲ್ಲಿ 84 ಕೋಟಿ ರೂಪಾಯಿ ಹೊಂದಿದ್ದಾರೆ. ಅವರಿಗೆ ಹದಿನೆಂಟೂವರೆ ಕೋಟಿ ರೂಪಾಯಿ ಸಾಲ ಇದ್ದು, ಅವರ ಪತ್ನಿಗೆ ಇಪ್ಪತ್ತೊಂದು ಮುಕ್ಕಾಲು ಕೋಟಿ ರೂಪಾಯಿ ಸಾಲ ಇದೆ.ಕಾಂಗ್ರೆಸ್ ಅಭ್ಯರ್ಥಿ ವಿ.ಮುನಿಯಪ್ಪ ಅವರ ಸ್ಥಿರ -ಚರಾಸ್ತಿಗಳ ಒಟ್ಟು ಮೌಲ್ಯ 3 ಕೋಟಿ ರೂಪಾಯಿಯಾದರೆ, ಅವರ ಪತ್ನಿಯದು ಎರಡು ಕೋಟಿ ರೂಪಾಯಿಯಿದೆ. ಜೆಡಿಎಸ್ ಪಕ್ಷದ ಎಂ.ರಾಜಣ್ಣ ಅವರ ಆಸ್ತಿ 1 ಕೋಟಿ 11 ಲಕ್ಷ ರೂಪಾಯಿಯಾದರೆ, ಅವರ ಪತ್ನಿಗೆ ಮೂವತ್ತೂವರೆ ಲಕ್ಷ ರೂಪಾಯಿಯಷ್ಟು ಆಸ್ತಿ ಇದೆ. ಇನ್ನು ಬಿಜೆಪಿ ಅಭ್ಯರ್ಥಿ ಜೆ.ವಿ.ಸದಾಶಿವ ಅವರ ಆಸ್ತಿ ಮೌಲ್ಯ 72 ಲಕ್ಷ ರೂಪಾಯಿ.ಬಿಎಸ್‌ಪಿಯ ಧನರಾಜ್ 43 ಸಾವಿರ ರೂಪಾಯಿ ನಗದು ಹೊಂದಿದ್ದರೆ, ಬಿಎಸ್‌ಆರ್ ಕಾಂಗ್ರೆಸ್‌ನ ಟಿ.ಎಂ.ನಾರಾಯಣಸ್ವಾಮಿ ಬಳಿ ಮೂರು ಲಕ್ಷ ಎಂಬತ್ತು ಸಾವಿರ ರೂಪಾಯಿ ಆಸ್ತಿ ಇದ್ದು, ಎರಡು ಲಕ್ಷ ರೂಪಾಯಿ ಸಾಲ ಕೂಡ ಹೊಂದಿದ್ದಾರೆ. ಜೆಡಿಯು ಪಕ್ಷದ ಸಾದಿಕ್ ಪಾಷ 5 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.ಪಕ್ಷೇತರ ಅಭ್ಯರ್ಥಿಗಳಾದ ಕೊತ್ತನೂರಿನ ತೇಜಸ್ವರೂಪರೆಡ್ಡಿ ಎರಡು ಮುಕ್ಕಾಲು ಲಕ್ಷ, ಬೈರಗಾನಹಳ್ಳಿಯ ಗೋವಿಂದಪ್ಪ 80 ಸಾವಿರ, ಕೊತ್ತನೂರಿನ ಕೆ.ಕೆಂಪಮ್ಮ 3,67,000 ರೂಪಾಯಿ, ಕೊತ್ತನೂರು ಜಿ.ಎ.ರಾಜಣ್ಣ 42,500 ರೂಪಾಯಿ ಮೌಲ್ಯದ ಒಟ್ಟು ಸ್ಥಿರಾಸ್ತಿ ಹಾಗೂ ಚರಾಸ್ತಿಯಿದೆ. ಬೂದಾಳದ ವಿ.ಮುನಿಯಪ್ಪ ಅವರ ಆಸ್ತಿ ಮೌಲ್ಯ 8.50 ಲಕ್ಷದ ಆಸ್ತಿಯಿದ್ದರೆ, 70 ಸಾವಿರ ರೂಪಾಯಿ ಸಾಲ ಹೊಂದಿದ್ದಾರೆ.ಕಣದಲ್ಲಿ ಇರುವವರ ಪೈಕಿ ಮೂವರು ಪದವೀಧರರು, ನಾಲ್ವರು ಪಿಯುಸಿ, ನಾಲ್ವರು ಹತ್ತನೇ ತರಗತಿ ಹಾಗೂ ಒಬ್ಬರು ಏಳನೇ ತರಗತಿ ವಿದ್ಯಾರ್ಹತೆ ಹೊಂದಿದ್ದಾರೆ. ಕಾಂಗ್ರೆಸ್‌ನ ವಿ.ಮುನಿಯಪ್ಪ ಬಿಎಸ್‌ಸಿ, ಜೆಡಿಎಸ್ ಪಕ್ಷದ ಎಂ.ರಾಜಣ್ಣ ಬಿಎಸ್‌ಸಿ ಡೇರಿ ಟೆಕ್ನಾಲಜಿ, ಕೆಜೆಪಿಯ ಶಿವಕುಮಾರಗೌಡ ಬಿಎ ವಿದ್ಯಾರ್ಹತೆ ಹೊಂದಿದ್ದಾರೆ. ಬಿಜೆಪಿಯ ಸದಾಶಿವ, ಬಿಎಸ್‌ಪಿಯ ಧನರಾಜ್, ಪಕ್ಷೇತರರಾದ ತೇಜಸ್ವರೂಪರೆಡ್ಡಿ ಮತ್ತು ಕೆ.ಕೆಂಪಮ್ಮ ಪಿಯುಸಿ ಪಾಸಾಗಿದ್ದಾರೆ. ಜೆಡಿಯುನ ಸಾದಿಕ್‌ಪಾಷ, ಪಕ್ಷೇತರರಾದ ಗೋವಿಂದಪ್ಪ, ಜಿ.ಎ.ರಾಜಣ್ಣ ಮತ್ತು ಬೂದಾಳದ ವಿ.ಮುನಿಯಪ್ಪ ಎಸ್‌ಎಸ್‌ಎಲ್‌ಸಿ ಪಾಸಾಗಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನ ಟಿ.ಎಂ.ನಾರಾಯಣಸ್ವಾಮಿ ಏಳನೇ ತರಗತಿ ಓದಿದ್ದಾರೆ.

ಪ್ರತಿಕ್ರಿಯಿಸಿ (+)