ಬುಧವಾರ, ಮಾರ್ಚ್ 3, 2021
19 °C

12 ನಿಮಿಷಗಳಲ್ಲಿ ಬರ ಅವಲೋಕಿಸಿದ ಸೋನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

12 ನಿಮಿಷಗಳಲ್ಲಿ ಬರ ಅವಲೋಕಿಸಿದ ಸೋನಿಯಾ

ಚಿತ್ರದುರ್ಗ: `ನಮಗೆ ಉದ್ಯೋಗ ಖಾತ್ರಿ ಕೂಲಿ ಕೊಡುತ್ತಿಲ್ಲ. ಫ್ಲೋರೈಡ್‌ಯುಕ್ತ ನೀರು ಕುಡಿದು ನರಳುತ್ತಿದ್ದೇವೆ. ನಮಗೆ ಶುದ್ಧ ಕುಡಿಯುವ ನೀರು ಕೊಡಿ...~- ಹೀಗೆ ಆಂಧ್ರಪ್ರದೇಶದ ಗಡಿ ಸಮೀಪದಲ್ಲಿರುವ ಬರಪೀಡಿತ ಮೊಳಕಾಲ್ಮುರು ತಾಲ್ಲೂಕಿನ ನಾಗಸಮುದ್ರ ಗ್ರಾಮಸ್ಥಕ್ಕೆ ಶನಿವಾರ ಬರ ಅವಲೋಕನಕ್ಕೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮುಂದೆ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಮಂಡಿಸಿದರು.ಬಿಗಿ ಭದ್ರತೆ ನಡುವೆ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಸೋನಿಯಾ ಅವರು, ಗ್ರಾಮದಲ್ಲಿನ ಕೆರೆ ವೀಕ್ಷಿಸಿ, ಗ್ರಾಮಸ್ಥರ ಅಹವಾಲುಗಳನ್ನು ಕೆಲವೇ ನಿಮಿಷ ಆಲಿಸಿದರು.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಹೆಚ್ಚು ಒತ್ತು ನೀಡಿ ಗ್ರಾಮಸ್ಥರನ್ನು ಯೋಜನೆಯ ಬಗ್ಗೆ ಪ್ರಶ್ನಿಸಿದರು.`ಉದ್ಯೋಗ ಖಾತ್ರಿ ಯೋಜನೆಯ ಹಣ ನಿಮಗೆ ಸರಿಯಾಗಿ ಮುಟ್ಟುತ್ತಿದೆಯೇ~ ಎಂದು ಗ್ರಾಮಸ್ಥರನ್ನು ಸೋನಿಯಾ ಕೇಳಿದರು. ತಕ್ಷಣ ಗ್ರಾಮಸ್ಥರಿಂದ `ಇಲ್ಲ~ಗಳ ಸರಮಾಲೆಯೇ ಹೊರಹೊಮ್ಮಿದವು. ಉದ್ಯೋಗ ಖಾತ್ರಿ ಅಡಿಯಲ್ಲಿ ಸರಿಯಾಗಿ ಕೆಲಸ ಮತ್ತು ಕೂಲಿ ಕೊಡುತ್ತಿಲ್ಲ.ಯಾವಾಗಲಾದರೊಮ್ಮೆ ನಮ್ಮ ಸಹಿ ಪಡೆಯುವ ಗುತ್ತಿಗೆದಾರರು ನಮಗೆ 100-150 ರೂಪಾಯಿ ಕೊಡುತ್ತಾರೆ. ಇದು ಬರಪೀಡಿತ ಪ್ರದೇಶ. ಇಲ್ಲಿ ಮಳೆಯಾಗುವುದು ಅತಿ ವಿರಳ. ಗ್ರಾಮದ ಕೆರೆಗೆ ನೀರು ಹರಿದು ಬರುವಂತಹ ಯೋಜನೆ ಕಲ್ಪಿಸಿ. ಗ್ರಾಮದಲ್ಲಿ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ವಿದ್ಯುತ್ ಇಲ್ಲ, ಜಮೀನು ಇಲ್ಲ. ಕೆಲಸವಿಲ್ಲದೆ ಬೆಂಗಳೂರು, ಬಳ್ಳಾರಿಗೆ ಗುಳೆ ಹೋಗುತ್ತಿದ್ದೇವೆ ಎಂದು ಸ್ಥಳೀಯ ಸಮಸ್ಯೆಗಳನ್ನು ಬಿಚ್ಚಿಟ್ಟರು.9.40ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಸೋನಿಯಾ ಗಾಂಧಿ ಅವರು, ನೇರವಾಗಿ ಬತ್ತಿದ ಕೆರೆಯನ್ನು ವೀಕ್ಷಿಸಲು ಹೊರಟರು. ಸಂಪೂರ್ಣ ಬತ್ತಿದ್ದ ಈ ಕೆರೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಸ್ವಲ್ಪ ನೀರು ಹರಿದುಬಂದಿತ್ತು. ವೀಕ್ಷಣೆಯ ನಂತರ ಕೆರೆ ಅಂಗಳದಲ್ಲಿ ಸೇರಿದ್ದ ಗ್ರಾಮಸ್ಥರ ಸಮಸ್ಯೆಗಳನ್ನು ಕೇವಲ 3-4 ನಿಮಿಷಗಳಲ್ಲಿ ಆಲಿಸಿದರು. ರೇಷ್ಮೆ ಬೆಳೆಗಾರರು, ರೈತರು, ಸಿಪಿಐ ಮುಖಂಡರು ಇದೇ ಸಂದರ್ಭದಲ್ಲಿ ಸೋನಿಯಾ ಅವರಿಗೆ ಮನವಿ ಸಲ್ಲಿಸಿದರು.ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಕಿಸಾನ್ ಸಂಘದ ಪದಾಧಿಕಾರಿಗಳು ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದರು. ಇದಕ್ಕೆ `ಓಕೆ~ ಎಂದು ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ ಮುಂದೆ ಹೆಜ್ಜೆ ಹಾಕಿದರು.

 

ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು ಮತ್ತು ನೇಕಾರರಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಆರ್ಥಿಕ ಸಹಾಯ ನೀಡಬೇಕು. ನೇಕಾರರ ಪುನರ್ವಸತಿ ಕಲ್ಪಿಸಲು ಜವಳಿ ಇಲಾಖೆ ಯೋಜನೆ ರೂಪಿಸಬೇಕು ಎಂದು ರೇಷ್ಮೆ ಬೆಳೆಗಾರರು ಕೋರಿದರು. ಮೊಳಕಾಲ್ಮುರು ತಾಲ್ಲೂಕನ್ನು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಸೇರಿಸಬೇಕು ಎಂದು ಸಿಪಿಐ ಮುಖಂಡರು ಮನವಿ ಸಲ್ಲಿಸಿದರು.ಸುಮಾರು 10ರಿಂದ 12 ನಿಮಿಷಗಳ ಮಾತ್ರ ಗ್ರಾಮದಲ್ಲಿ ಸಮಯ ಕಳೆದ ಸೋನಿಯಾ ಬಹಿರಂಗ ಭಾಷಣ ಮಾಡದೆ 10.05ಕ್ಕೆ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ತೆರಳಿದರು. ಸೋನಿಯಾಗಾಂಧಿ ಜತೆಯಲ್ಲಿ  ಹಿರಿಯ ಮುಖಂಡ ಮಧುಸೂದನ ಮಿಸ್ತ್ರಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಜರಿದ್ದರು.ಹೆಲಿಪ್ಯಾಡ್‌ನಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಸಾರ್ವಜನಿಕರು, ಕಲುಷಿತ ಕುಡಿಯುವ ನೀರು ಸೇರಿದಂತೆ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು, ವಿಶೇಷ ಪ್ಯಾಕೇಜ್ ನೀಡಿ ಎಂದು ಸೋನಿಯಾ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷೆ `ಮೊದಲು ನೀವು ರಾಜ್ಯ ಸರ್ಕಾರದ ಮೇಲೆ ಒತ್ತಡ ತನ್ನಿ. ನಂತರ ನಾವು ನೋಡಿಕೊಳ್ಳುತ್ತೇವೆ~ ಎಂದು ತಿಳಿಸಿದರು.ಗ್ರಾಮದಲ್ಲಿ ಸೋನಿಯಾ ಅವರನ್ನು ಕಾಣಲು ಕಾತರದಿಂದ ಬೆಳಿಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಕಾದು ಕುಳಿತಿದ್ದರು.`ಇದೊಂದು ಜೀವನದಲ್ಲಿ ಅಪರೂಪದ ಅವಕಾಶ. ಸೋನಿಯಾ ಗಾಂಧಿ ನಮ್ಮೂರಿಗೆ ಆಗಮಿಸುತ್ತಿರುವುದು ಹೆಮ್ಮೆ ವಿಷಯ. ಇಲ್ಲಿ ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ಬಂದಿಲ್ಲ. ಬೆಳಿಗ್ಗೆಯಿಂದ ಕೆಲಸಬಿಟ್ಟು ಕಾದು ಕುಳಿತಿದ್ದೇವೆ.ಏನೋ ಒಂದು ರೀತಿಯ ಖುಷಿ. ಅವರ ಭೇಟಿಯಿಂದ ಗ್ರಾಮಕ್ಕೆ ಎಷ್ಟು ಪ್ರಯೋಜನ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಗ್ರಾಮದಲ್ಲಿ ನೀರಿನ ಸಮಸ್ಯೆಯಾದರೂ ಬಗೆಹರಿದರೆ ಸೋನಿಯಾ ಗಾಂಧಿ ಭೇಟಿ ಸಾರ್ಥಕ~ ಎಂದು ರಸ್ತೆಬದಿ ಕುಳಿತಿದ್ದ ಗ್ರಾಮಸ್ಥರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.