ಭಾನುವಾರ, ಏಪ್ರಿಲ್ 11, 2021
33 °C

12 ವರ್ಷಗಳ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಣಿಪುರದ ಐರೊಮ್ ಚಾನು ಶರ್ಮಿಳಾ ( 41) ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 12 ವರ್ಷಗಳನ್ನು ಪೂರೈಸಿ ಈಗ 13ನೇ ವರ್ಷಕ್ಕೆ ಕಾಲಿರಿಸಿದೆ. ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು ಹಿಂತೆಗೆದುಕೊಳ್ಳಬೇಕೆಂದು  ಒತ್ತಾಯಿಸಿ ಈ ಅಹಿಂಸಾತ್ಮಕ ಸತ್ಯಾಗ್ರಹವನ್ನು ಅವರು ನಡೆಸಿಕೊಂಡು ಬಂದಿದ್ದಾರೆ.ಶರ್ಮಿಳಾ ಅವರ ನಿರಶನ ಆರಂಭವಾದದ್ದು 2000ದ ನವೆಂಬರ್ 5ರಂದು. ಅಸ್ಸಾಂ ರೈಫಲ್ಸ್ ಸಿಬ್ಬಂದಿ, ಹತ್ತು ನಾಗರಿಕರನ್ನು ಗುಂಡಿಕ್ಕಿ ಕೊಂದ ಘಟನೆಯ ನಂತರ ಶರ್ಮಿಳಾರ ಉಪವಾಸ ಸತ್ಯಾಗ್ರಹ ಆರಂಭವಾಯಿತು. ಸಶಸ್ತ್ರಪಡೆಗಳಿಗೆ ಯಾವುದೇ ಮಿತಿ ಇಲ್ಲದಂತಹ ಅಧಿಕಾರವನ್ನು ಈ ವಿವಾದಾತ್ಮಕವಾದ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ನೀಡುತ್ತದೆ.ಬರೀ ಅನುಮಾನದ ಮೇಲೆಯೇ ವ್ಯಕ್ತಿಗಳ ಮೇಲೆ ಗುಂಡು ಹಾರಿಸುವಂತಹ   ಅವಕಾಶ ಈ  ಕಾಯಿದೆಯಲ್ಲಿದೆ. ಸ್ವೇಚ್ಛೆಯ ಅಧಿಕಾರವನ್ನು ಒದಗಿಸುವ ಈ  ಕರಾಳ ಕಾಯಿದೆಯನ್ನು ಸರ್ಕಾರ ಹಿಂತೆಗೆದುಕೊಳ್ಳುವವರೆಗೂ  ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಳ್ಳುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ ಈ `ಉಕ್ಕಿನ ಮಹಿಳೆ~. ಹೀಗಾಗಿ ಕಳೆದ 12 ವರ್ಷಗಳಿಂದ ಅವರು ಅನ್ನಾಹಾರ ಮುಟ್ಟಿಲ್ಲ. ಒಂದು ಗುಟುಕು ನೀರೂ ಕುಡಿದಿಲ್ಲ. ಇದಕ್ಕಾಗಿ ಶರ್ಮಿಳಾರ ವಿರುದ್ಧ ಆತ್ಮಹತ್ಯೆ ಯತ್ನದ ಮೊಕದ್ದಮೆ ಹೂಡಿದೆ ಸರ್ಕಾರ. ಹೀಗಾಗಿ ಅವರೀಗ ನ್ಯಾಯಾಂಗ ಬಂಧನದಲ್ದ್ದ್‌ದ್ದಾರೆ.

 

ಆದರೆ ಇಂಫಾಲದಲ್ಲಿರುವ ಸರ್ಕಾರದ ಜವಾಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ಆಸ್ಪತ್ರೆ ಕೊಠಡಿಯಿಂದ ಅವರ ಹೋರಾಟ ಈಗಲೂ ಮುಂದುವರಿದಿದೆ. ಇಲ್ಲಿ ಶರ್ಮಿಳಾ ಅವರ ಮೂಗಿನೊಳಗೆ ನಳಿಕೆ ಇರಿಸಿ ಆ ಮೂಲಕ ಬಲವಂತವಾಗಿ ದ್ರವಾಹಾರ ನೀಡಿಕೊಂಡು ಬರಲಾಗುತ್ತಿದೆ. ಪ್ರಜಾಸತ್ತೆ ಹಾಗೂ ಅಹಿಂಸೆಯ ಕುರಿತಾಗಿ ಶರ್ಮಿಳಾಗಿರುವ ವಿಶ್ವಾಸವನ್ನು ಈ ಹೋರಾಟ ತೋರಿಸುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ರಾಜ್ಯದ 60 ಶಾಸಕರು ಏನೂ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ.ಶರ್ಮಿಳಾ ಅವರ ನಿರಶನ ಸಶಕ್ತವಾದುದು. ಜಗತ್ತಿನಲ್ಲಿ ಈ ಹಿಂದೆಂದೂ ಕೇಳರಿಯದಂತಹ ಶಾಂತಿಯುತವಾದ ಸುದೀರ್ಘ ಕಾಲದ ಹೋರಾಟವಾಗಿದೆ ಇದು. ತತ್ವಗಳಿಗೆ ಬದ್ಧವಾಗಿ ನಡೆಸುತ್ತಿರುವಂತಹ ಗಾಂಧಿ ಮಾರ್ಗದ ಈ ಸಾತ್ವಿಕ ಹೋರಾಟಕ್ಕೆ ಆಡಳಿತಗಾರರಿಂದ ನಿರ್ಲಕ್ಷ್ಯವೇ ವ್ಯಕ್ತವಾಗುತ್ತಿರುವುದು ವಿಷಾದನೀಯ.

 

ಈ 12 ವರ್ಷಗಳಲ್ಲಿ ಒಮ್ಮೆಯಾದರೂ ಶರ್ಮಿಳಾ ಜೊತೆಗೆ ಮಾತುಕತೆಗೆ ಸರ್ಕಾರದ ವತಿಯಿಂದ ಯಾವುದೇ ನಿಯೋಗ ತೆರಳಿಲ್ಲ. ಈ ಕಾಯಿದೆಯನ್ನು ಹಿಂತೆಗೆದುಕೊಳ್ಳಬೇಕೆಂಬ ಕೂಗು  ಕಾಶ್ಮೀರ ಹಾಗೂ ಇತರ ಅನೇಕ ಈಶಾನ್ಯ ರಾಜ್ಯಗಳಲ್ಲೂ ಇದೆ. ವಾಸ್ತವವಾಗಿ ಈ ಕಾಯಿದೆಯಿಂದ ಹೆಚ್ಚೇನೂ ಉಪಯೋಗವಾಗುತ್ತಿಲ್ಲ ಎಂಬ ಬಗ್ಗೆ ಸರ್ಕಾರ ನೇಮಿಸಿದ ಅನೇಕ ಸಮಿತಿಗಳೇ ಈ ಹಿಂದೆ ವರದಿಗಳನ್ನು ನೀಡಿವೆ. ಈ ಕಾಯಿದೆ ಜಾರಿಯಾದ ನಂತರ ಈಶಾನ್ಯ ರಾಜ್ಯಗಳಲ್ಲಿ ಅನೇಕ ಉಗ್ರ ಸಂಘಟನೆಗಳು ತಲೆ ಎತ್ತಿರುವುದೂ ನಿಜ. ಕಳೆದ 12 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಈ ಅಹಿಂಸಾತ್ಮಕ ಹೋರಾಟಕ್ಕೆ ಸ್ಪಂದಿಸುವಂತಹ ಸೂಕ್ಷ್ಮತೆಯನ್ನು ಪ್ರಭುತ್ವ ಪ್ರದರ್ಶಿಸಬೇಕಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.