12 ವರ್ಷ ತಲೆಮರೆಸಿಕೊಂಡ್ದ್ದಿದ ಅಪರಾಧಿ ಬಂಧನ

7

12 ವರ್ಷ ತಲೆಮರೆಸಿಕೊಂಡ್ದ್ದಿದ ಅಪರಾಧಿ ಬಂಧನ

Published:
Updated:

ಬೆಂಗಳೂರು: ಲಂಚ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಹನ್ನೆರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಿಂದಿನ ಹೊರಮಾವು ಪಂಚಾಯಿತಿಯ ಬಿಲ್ ಕಲೆಕ್ಟರ್ ಎಚ್.ಎನ್.ಚಂದ್ರಶೇಖರ್ ಅವರನ್ನು  ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.ಅಪರಾಧಿಯು ಕೆ.ಆರ್.ಪುರ ಸುತ್ತಮುತ್ತ ಇರುವ ಕುರಿತು ಲೋಕಾಯುಕ್ತ ಪೊಲೀಸರಿಗೆ ಇತ್ತೀಚೆಗೆ ಮಾಹಿತಿ ದೊರಕಿತ್ತು. ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ಅವರ ನಿರ್ದೇಶನದಂತೆ ಡಿವೈಎಸ್‌ಪಿ ಎಂ.ನಾರಾಯಣ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಇಡಾ ಮಾರ್ಟಿನ್, ಚಂದ್ರಶೇಖರ್ ಪತ್ತೆಗೆ ಸೂಚಿಸಿದ್ದರು.ಕೆ.ಆರ್. ಪುರದಲ್ಲಿರುವ ಅತ್ತೆಯ ಮನೆಯಲ್ಲಿ ಚಂದ್ರಶೇಖರ್ ಇರುವುದನ್ನು ಖಚಿತಪಡಿಸಿಕೊಂಡ ತಂಡ, ಬುಧವಾರ ದಾಳಿ ನಡೆಸಿ ಬಂಧಿಸಿತು. ಬಳಿಕ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಆದೇಶ ಹೊರಡಿಸಿದರು. ಬಳಿಕ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ಒಪ್ಪಿಸಲಾಗಿದೆ ಎಂದು ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.ಇನ್‌ಸ್ಪೆಕ್ಟರ್‌ಗಳಾದ ಸಿ.ಡಬ್ಲ್ಯು.ಪೂವಯ್ಯ, ಮೊಹಮ್ಮದ್ ಮುಕಾರಾಂ, ಹೆಡ್ ಕಾನ್‌ಸ್ಟೆಬಲ್‌ಗಳಾದ ಜಗದೀಶ್ವರ, ಗಾಳಪ್ಪ, ರಾಜೇಂದ್ರ ಸಿಂಗ್, ಶಿವಕುಮಾರ್ ಮತ್ತು ರಮೇಶ್ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು 1994ರ ಸೆಪ್ಟೆಂಬರ್ 19ರಂದು ಕೆ.ಆರ್.ಪುರ ಹೋಬಳಿಯ ಎಸ್.ನಟರಾಜ್ ಅವರಿಂದ 200 ರೂಪಾಯಿ ಲಂಚ ಪಡೆಯುತ್ತಿದ್ದಾಗ ಚಂದ್ರಶೇಖರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಬೆಂಗಳೂರು ನಗರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.2000ನೇ ಸಾಲಿನಲ್ಲಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ಬಿಲ್ ಕಲೆಕ್ಟರ್ ಅಪರಾಧಿ ಎಂದು ಸಾರಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 7ರ ಅಡಿಯಲ್ಲಿ ಆರು ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಇದೇ ಕಾಯ್ದೆಯ ಕಲಂ 13(1)(ಡಿ) ಮತ್ತು 13(2)ರ ಅಡಿಯಲ್ಲಿ ಒಂದು ತಿಂಗಳ ಕಠಿಣ ಸಜೆ ಮತ್ತು ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಅಪರಾಧಿಯು ಆರು ತಿಂಗಳ ಅವಧಿಯ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಿತ್ತು.ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಪರಾಧಿಯು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ಊರ್ಜಿತಗೊಳಿಸಿ ಹೈಕೋರ್ಟ್ 2001ರಲ್ಲಿ ತೀರ್ಪು ನೀಡಿತ್ತು. ನಂತರ ನ್ಯಾಯಾಲಯಕ್ಕೆ ಶರಣಾಗದೇ ತಲೆಮರೆಸಿಕೊಂಡಿದ್ದ. ಹನ್ನೆರಡು ವರ್ಷಗಳಾದರೂ ಚಂದ್ರಶೇಖರ್ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry