12 ಸರಕುಗಳ ಆಮದು ನಿರ್ಬಂಧ ರದ್ದು

7

12 ಸರಕುಗಳ ಆಮದು ನಿರ್ಬಂಧ ರದ್ದು

Published:
Updated:
12 ಸರಕುಗಳ ಆಮದು ನಿರ್ಬಂಧ ರದ್ದು

ಇಸ್ಲಾಮಾಬಾದ್ (ಪಿಟಿಐ): ಭಾರತದಿಂದ ಕಚ್ಚಾವಸ್ತುಗಳು ಹಾಗೂ ಯಂತ್ರೋಪಕರಣ ಸೇರಿದಂತೆ 12 ಸರಕುಗಳ ಆಮದಿನ ಮೇಲಿದ್ದ ನಿರ್ಬಂಧವನ್ನು ಪಾಕಿಸ್ತಾನ ತೆರವುಗೊಳಿಸಿದೆ.ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಪಾಕ್ ಈ ಕ್ರಮ ಕೈಗೊಂಡಿದೆ.ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಪುಟದ ಆರ್ಥಿಕ ಸಹಕಾರ ಸಮಿತಿ ಸಭೆಯಲ್ಲಿ, ಈ ನಿರ್ಧಾರ ಕೈಗೊಳ್ಳಲಾಯಿತು. ಹಾಗಾಗಿ ಪಾಕ್‌ನ ವರ್ತಕರು ಇನ್ನು ಮುಂದೆ ಕಚ್ಚಾವಸ್ತುಗಳು ಹಾಗೂ ಯಂತ್ರೋಪಕರಣಗಳು ಸೇರಿದಂತೆ 12 ವಸ್ತುಗಳನ್ನು ಆಮದು ಮಾಡಿಕೊಳ್ಳಲು ಯಾವುದೇ ನಿರ್ಬಂಧ ಇಲ್ಲ.ನೆರೆಯ ರಾಷ್ಟ್ರದೊಂದಿಗೆ ವ್ಯಾಪಾರ ಸಂಬಂಧವನ್ನು ತಿಳಿಗೊಳಿಸಲು ಈಚೆಗೆ ಭಾರತಕ್ಕೆ `ಪರಮಾಪ್ತ ರಾಷ್ಟ್ರ~ ಸ್ಥಾನಮಾನ ನೀಡಿತ್ತು. ಈ ಹಿನ್ನೆಲೆಯಲ್ಲಿ ದೇಶದ ಆಮದು-ರಫ್ತು ನೀತಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತಮೂಲಗಳು ತಿಳಿಸಿವೆ.ಎರಡೂ ದೇಶಗಳ ವಾಣಿಜ್ಯ ಕಾರ್ಯದರ್ಶಿಗಳು ನ.14-15ರಂದು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದು, ಈ ಸಭೆಯಲ್ಲಿ ಮಹತ್ವದ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ ಎಂದು ಪಾಕ್ ವಾಣಿಜ್ಯ ಕಾರ್ಯದರ್ಶಿ ಜಾಫರ್ ಮೊಹಮೂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದಿಂದ ಆಮದು ಮಾಡಿಕೊಳ್ಳುವ ಪ್ರಮುಖ ವಸ್ತುಗಳ ಪಟ್ಟಿಯನ್ನು ವಾಣಿಜ್ಯ ಸಚಿವಾಲಯ ಸಂಪುಟ ಸಮಿತಿಗೆ ಕಳುಹಿಸಿಕೊಟ್ಟಿತ್ತು. ಇದರಲ್ಲಿ ಚರ್ಮ ಮತ್ತು ಜವಳಿ ಉದ್ದಿಮೆಗೆ ಅಗತ್ಯವಾದ ಕಚ್ಚಾವಸ್ತು ಮತ್ತು ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳಲು ಇದ್ದ ನಿರ್ಬಂಧ ತೆರವುಗೊಳಿಸುವ ಮನವಿಯೂ ಸೇರಿತ್ತು.ಈಗಲೂ ಸಹ ಪಾಕಿಸ್ತಾನದ ಉದ್ದಿಮೆದಾರರು ಜವಳಿ ಕ್ಷೇತ್ರಕ್ಕೆ ಅಗತ್ಯವಾದ ಯಂತ್ರೋಪಕರಣಗಳನ್ನು ಭಾರತದಿಂದ ಖರೀದಿಸುತ್ತಿದ್ದು, ನಿಯಮಗಳ ಪ್ರಕಾರ ಬೇರೊಂದು ದೇಶದ ಮೂಲಕ ಅವುಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಈಗ ಸರ್ಕಾರ ನಿರ್ಬಂಧ ತೆಗೆದು ಹಾಕಿರುವುದರಿಂದ ಉದ್ದಿಮೆದಾರರು ನೇರವಾಗಿ ವ್ಯವಹರಿಸಲು ಸಾಧ್ಯವಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry