ಶುಕ್ರವಾರ, ಮೇ 14, 2021
31 °C

12 ಸ್ಥಳೀಯ ಕಲಾತಂಡಗಳಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಏಪ್ರಿಲ್ 7 ರಿಂದ 9 ರ ವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಬೀದರ್ ಉತ್ಸವದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಈ ಬಾರಿ ಮುಖ್ಯ ವೇದಿಕೆಯಲ್ಲಿ ಜಿಲ್ಲೆಯ ಒಟ್ಟು 12 ಕಲಾ ತಂಡಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿವೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲ ತಿಳಿಸಿದರು.ಬೀದರ್ ಕೋಟೆ ಆವರಣದಲ್ಲಿರುವ ಮುಖ್ಯ ವೇದಿಕೆಯಲ್ಲಿ ಸಂಜೆ ಸ್ಥಳೀಯ ಕಲಾತಂಡಗಳಿಗೆ ಪ್ರದರ್ಶನ ನೀಡಲು ಅವಕಾಶ ನೀಡಲಾಗುವುದು. ತಂಡಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ದೇಶದ ಖ್ಯಾತ ಕಲಾವಿದರು ಸಹ ಮೂರು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮ ಸಂಜೆ 5.30 ಗಂಟೆಯಿಂದ ಆರಂಭವಾಗಲಿದೆ. ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಸಾರ್ವಜನಿಕರಿಗಾಗಿ 15 ಸಾವಿರ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಧೂಳು ಏಳದಂತೆ ಕುರ್ಚಿಗಳ ಕೆಳಗೆ ಹಾಸನ್ನು ಹಾಕಲಾಗುವುದು ಎಂದು ತಿಳಿಸಿದರು.ಸ್ಮಾರಕಗಳಿಗೆ ದೀಪಾಲಂಕಾರ: ಕೋಟೆಯ ಒಳಗಿನ ಸ್ಮಾರಕಗಳಿಗೆ ದೀಪಾಲಂಕಾರ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಸ್ಮಾರಕಗಳು ಮೂರು ದಿನಗಳ ಕಾಲ ವಿದ್ಯುತ್ ದೀಪಗಳಿಂದ ಅಲಂಕೃತವಾಗಲಿವೆ. ಈ ಬಾರಿ ಸತತ ಮೂರು ದಿನ ಸುಡುಮದ್ದು ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ ಎಂದರು.ಉತ್ಸವದ ಆಯೋಜನೆಗಾಗಿ ರಚಿಸಲಾಗಿದ್ದ ಉಪಸಮಿತಿಗಳು ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಲು ಈಗಾಗಲೇ ಸಿದ್ಧತೆ ಪೂರ್ಣಗೊಳಿಸಿವೆ. ನೆಹರು ಕ್ರೀಡಾಂಗಣದಿಂದ ಉತ್ಸವದ ಮೆರವಣಿಗೆ ಆರಂಭವಾಗಲಿದ್ದು, ಇದರಲ್ಲಿ ಹೊರ ಜಿಲ್ಲೆಗಳ ಮಾತ್ರವಲ್ಲದೆ ಸ್ಥಳೀಯ ಕಲಾತಂಡಗಳು ಸಹ ಭಾಗವಹಿಸಲಿವೆ.ಉತ್ಸವದ ಸಂದರ್ಭದಲ್ಲಿ ಸುಗಮ ಸಂಚಾರ ವ್ಯವಸ್ಥೆ ಹಾಗೂ ಪಾರ್ಕಿಂಗ್‌ಗಾಗಿ ಈಗಾಗಲೇ ಯೋಜನೆ ರೂಪಿಸಲಾಗಿದೆ. ಕೋಟೆಯ ಒಳಗೆ ಅಲ್ಲಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.ಮಕ್ಕಳಿಗೆ ಮನೋರಂಜನೆ: ಮಕ್ಕಳಿಗಾಗಿ ಕೋಟೆ ಆವರಣದಲ್ಲಿರುವ ಚಾಂದಿನಿ ಚಬೂತರ ಬಳಿ ಕಿಡ್‌ಜೋನ್ ಆಯೋಜಿಸಲಾಗಿದೆ. ಇಲ್ಲಿ ಮಕ್ಕಳಿಗಾಗಿ 25ಕ್ಕೂ ಅಧಿಕ ಆಟಗಳು ಲಭ್ಯವಿದ್ದು, ಮಕ್ಕಳು ಪೂರ್ಣ ಮನೋರಂಜನೆ ಪಡೆಯಬಹುದಾಗಿದೆ. ವೈವಿಧ್ಯಮಯ ಸಾಹಸ ಕ್ರೀಡೆಗಳನ್ನು ಸಹ ಆಯೋಜಿಸಲಾಗುತ್ತಿದೆ. ಬಂಗಿ ಟ್ರಾಪೋಲೈನ್, ಬರ್ಮಾ ರೋಪ್, ಜಿಪ್ ಲೈನ್, ಜೋರ್ಬಿಂಗ್, ರಾಕ್ ಕ್ಲೈಂಬಿಂಗ್, ಬರ್ಮಾ ಬ್ರಿಡ್ಜ್, ರ‌್ಯಾಪ್ಲಿಂಗ್, ಕಮಾಂಡೊನೆಟ್ ಸಾಹಸ ಪ್ರಿಯರಿಗೆ ರೋಮಾಂಚನ ಉಂಟು ಮಾಡಲಿವೆ. ಶಹಾಪುರ ಗೇಟ್ ಬಳಿಯ ಮೈದಾನದಲ್ಲಿ ಜೀಪ್ ಪ್ಯಾರಾಸೈಲಿಂಗ್ ನಡೆಯಲಿದೆ ಎಂದು ತಿಳಿಸಿದರು.ಪತಂಗ ಉತ್ಸವ: ಬೀದರ್ ಕೋಟೆಯ ಆವರಣದಲ್ಲಿ ಪತಂಗ ಉತ್ಸವ ನಡೆಸಲಾಗುವುದು. ಪತಂಗ ಉತ್ಸವದಲ್ಲಿ ರಾಜ್ಯ ಮಾತ್ರವಲ್ಲದೆ ಇತರ ರಾಜ್ಯಗಳ ಪತಂಗ ಆಸಕ್ತರು ಭಾಗವಹಿಸಲಿದ್ದಾರೆ. ಪತಂಗ ಉತ್ಸವ ಕೊಟೆ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಲಿದೆ. ಏಪ್ರಿಲ್ 8ರಂದು ರಾತ್ರಿ 10 ಗಂಟೆಗೆ ಮಹಮೂದ್ ಗಾವಾನ್ ಮದರಾಸದಲ್ಲಿ ಮುಶಾಯಿರಾ ನಡೆಯಲಿದೆ. ದೇಶದ ಖ್ಯಾತ ಕವಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಮುಖ್ಯ ವೇದಿಕೆಯ ಮುಂಭಾಗದಲ್ಲಿ ಆಹಾರ ಮೇಳ ನಡೆಯಲಿದೆ. ಈಗಾಗಲೇ ಬಹುತೇಕ ಮಳಿಗೆಗಳನ್ನು ಮುಂಗಡ ಕಾಯ್ದಿರಿಸಲಾಗಿದ್ದು, ಉತ್ಸವ ಥಾಲಿ ರಿಯಾಯಿತಿ ದರದಲ್ಲಿ ದೊರೆಯಲಿದೆ ಎಂದು ತಿಳಿಸಿದರು.

ಉತ್ಸವಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಮಾಹಿತಿ ಒದಗಿಸುವ ವಸ್ತುಪ್ರದರ್ಶನ ಆಯೋಜಿಸಲಾಗುವುದು. ಬೊಮ್ಮಗೊಂಡೇಶ್ವರ ಕೆರೆಯ ಬಳಿ ಜಾತ್ರೆ ರೀತಿಯ ಮೇಳ ಏರ್ಪಡಿಸಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.