ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ವಾಹನಗಳು ಬೆಂಕಿಗೆ ಆಹುತಿ

Last Updated 2 ಜನವರಿ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೆರೆಹಳ್ಳಿ ವರ್ತುಲ ರಸ್ತೆಯ ವೀರಭದ್ರ ನಗರದಲ್ಲಿರುವ `ಲಕ್ಷ್ಮಿ ಬಾಡಿ ಬಿಲ್ಡರ್ಸ್‌~ ಗ್ಯಾರೇಜ್‌ನಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಒಂಬತ್ತು ಬಸ್‌ಗಳು ಸೇರಿದಂತೆ ಒಟ್ಟು 12 ವಾಹನಗಳು ಸುಟ್ಟು ಹೋಗಿವೆ.

ಗ್ಯಾರೇಜ್‌ನ ಕೆಲಸಗಾರರು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬಸ್‌ವೊಂದರ ಸೀಟಿಗೆ ವೆಲ್ಡಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವೆಲ್ಡಿಂಗ್‌ನ ಕಿಡಿಯಿಂದ ಸೀಟಿಗೆ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಸ್ವಲ್ಪ ಸಮಯದಲ್ಲೇ ಇಡೀ ವಾಹನಕ್ಕೆ ವ್ಯಾಪಿಸಿತು. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಬಸ್‌ಗಳು ಹಾಗೂ ಇತರೆ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿತು ಎಂದು ಗಿರಿನಗರ ಪೊಲೀಸರು ತಿಳಿಸಿದ್ದಾರೆ.

ಇದರಿಂದ ಆತಂಕಗೊಂಡ ಗ್ಯಾರೇಜ್‌ನ ನೌಕರರು ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಎಂಟು ಅಗ್ನಿನಂದಕ ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮೂರು ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಒಂಬತ್ತು ಬಸ್‌ಗಳು, ಟೆಂಪೊ ಎರಡು ಆಟೊಗಳು ಸುಟ್ಟು ಹೋಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಗ್ಯಾರೇಜ್‌ನ ಮಾಲೀಕರು ಯಾರೆಂದು ಗೊತ್ತಾಗಿಲ್ಲ. ಅಗ್ನಿ ಅನಾಹುತದಲ್ಲಿ ಉಂಟಾಗಿರುವ ನಷ್ಟದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಡ್ಡಿಯಾಯಿತು: `ಗ್ಯಾರೇಜ್‌ನಲ್ಲಿದ್ದ ವಾಹನಗಳು ಹೊತ್ತಿ ಉರಿಯುತ್ತಿದ್ದರಿಂದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು. ಇದರಿಂದಾಗಿ ಬೆಂಕಿ ನಂದಿಸುವ ಕಾರ್ಯಕ್ಕೆ ಅಡ್ಡಿಯಾಯಿತು. ಅಲ್ಲದೇ ಗ್ಯಾರೇಜ್‌ನಲ್ಲಿ ಸಾಕಷ್ಟು ವಾಹನಗಳು ಇದ್ದದ್ದರಿಂದ ಹೆಚ್ಚು ಸ್ಥಳಾವಕಾಶ ಇರಲಿಲ್ಲ.ಗ್ಯಾರೇಜ್‌ನಲ್ಲಿ ಅಗ್ನಿ ಅನಾಹುತ ತಡೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ~ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ (ಬನಶಂಕರಿ ಠಾಣೆ) ಎಸ್.ನಂಜುಂಡಪ್ಪ   `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT