ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಸಾವಿರ ಶಿಕ್ಷಕ ಹುದ್ದೆ ಭರ್ತಿಗೆ ಅನುಮತಿ

ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸಿದ್ದರಾಮಯ್ಯ
Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಂದಿನ ಐದು ವರ್ಷಗಳಲ್ಲಿ ಹಂತ- ಹಂತವಾಗಿ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2013ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಪಿಯುಸಿ ವಿಭಾಗದಲ್ಲಿ 24 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. ಈ ವರ್ಷ 12 ಸಾವಿರ ಹುದ್ದೆ ಭರ್ತಿಗೆ ಅನುಮತಿ ನೀಡಲಾಗಿದೆ. ಪ್ರತಿ ವರ್ಷ 4ರಿಂದ 5ಸಾವಿರ ಶಿಕ್ಷಕರು ನಿವೃತ್ತಿಯಾಗುತ್ತಿದ್ದಾರೆ. ಈ ಹುದ್ದೆಗಳಿಗೂ ಸೇರಿಸಿ ಭರ್ತಿ ಮಾಡಲಾಗುವುದು. ಇದಕ್ಕೆ ಬೇಕಾದ ಹಣ ಕೂಡ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ 1994-99ರ ಅವಧಿ ಸುವರ್ಣಯುಗ ಎನಿಸಿಕೊಂಡಿತ್ತು. ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ತಾವು ಹಣಕಾಸು ಸಚಿವರಾಗಿ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದಾಗಿ ತಿಳಿಸಿದ ಅವರು, ಈ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಶಿಕ್ಷಕರನ್ನು ನೇಮಕಗೊಳಿಸಲಾಯಿತು. ಪ್ರಸಕ್ತ ಸರ್ಕಾರವೂ ಮುಂದಿನ 5 ವರ್ಷಗಳ ಅವಧಿಯಲ್ಲಿ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂದರು. ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣ ಶೇ 74ರಷ್ಟಿದ್ದು, ಪಕ್ಕದ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಸಾಕ್ಷರತಾ ಪ್ರಮಾಣ ಶೇ 90ಕ್ಕಿಂತ ಜಾಸ್ತಿ ಇದೆ. ರಾಜ್ಯದಲ್ಲೂ ಶೇ 100 ಸಾಕ್ಷರತೆ ಸಾಧಿಸಲು ಪ್ರಯತ್ನಗಳು ಸಾಗಿವೆ. ಈ ಹಿನ್ನೆಲೆಯಲ್ಲಿ ಬಿಸಿಯೂಟ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ಮತ್ತಿತರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಶಿಕ್ಷಣ ಕ್ಷೇತ್ರದಲ್ಲಿ ಸಕಾಲಿಕವಾಗಿ ಅಗತ್ಯ ಬದಲಾವಣೆಗಳೊಂದಿಗೆ ಸಮಾಜದ ಎಲ್ಲರಿಗೂ ಶಿಕ್ಷಣ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಮುಖ್ಯವಾಗಿ ಶಿಕ್ಷಕರಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಲಾಗುವುದು ಎಂದರು.

ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮಾತನಾಡಿದರು. ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ಜೆ.ಅಪ್ಪಾಜಿ, ಮಧು ಬಂಗಾರಪ್ಪ, ಶಾರದಾ ಪೂರ್ಯನಾಯ್ಕ, ಎಂ.ಬಿ.ಭಾನುಪ್ರಕಾಶ್, ಆರ್.ಕೆ.ಸಿದ್ದರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

`ಶಾಲೆಗೆ ಸೇರದಿದ್ದರೆ ಈಗಲೂ ಎಮ್ಮೆ ಕಾಯುತ್ತಿದ್ದೆ'
`ನಾನು 1 ರಿಂದ 4ನೇ ತರಗತಿಯವರೆಗೆ ಶಾಲೆಗೆ ಹೋಗಲಿಲ್ಲ. ಸಿದ್ಧರಾಮೇಶ್ವರನ ಭಕ್ತರಾದ ನಮ್ಮ ಕುಟುಂಬ ನನ್ನನ್ನು ವೀರಮಕ್ಕಳ ಕುಣಿತ ಕಲಿಯಲು ಬಿಟ್ಟಿದ್ದರು. ಕುಣಿತ ಕಲಿಸುವ ಮೇಸ್ಟ್ರು ಸ್ವಲ್ಪ ಅಕ್ಷರಾಭ್ಯಾಸ ಮಾಡಿಸಿದ್ದರು. ಈ ಮಧ್ಯೆ ಎಮ್ಮೆ ಕಾಯುತ್ತಿದ್ದ ನನ್ನನ್ನು ನಮ್ಮ ಊರಿನ ಶಾಲೆಯ ಮುಖ್ಯ ಶಿಕ್ಷಕ ಎಸ್.ಎಂ.ರಾಜಪ್ಪ 5ನೇ ತರಗತಿಗೆ ನೇರವಾಗಿ ಸೇರಿಸಿದರು.

ಅವರು ಇಲ್ಲದೇ ಹೋಗಿದ್ದರೆ ನಾನು ಈಗಲೂ ಎಮ್ಮೆ ಕಾಯುತ್ತಿರಬೇಕಾಗಿತ್ತು. ನನ್ನ ಇಬ್ಬರು ತಮ್ಮಂದಿರು ಶಾಲೆಗೆ ಹೋಗಲಿಲ್ಲ; ಅವರು ಈಗಲೂ ಹೊಲ ಉಳುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜೀವನದಲ್ಲಿ ಶಿಕ್ಷಕನ ಪಾತ್ರ ಎಷ್ಟು ಎಂಬುದನ್ನು ವಿವರಿಸಿದರು.

`ರಾಜಕೀಯ ಕೂಡ ನನ್ನ ಆಯ್ಕೆಯಾಗಿರಲಿಲ್ಲ. ಕಾನೂನು ಪದವಿ ಓದುತ್ತಿದ್ದಾಗ ರೈತ ಸಂಘದ ಪ್ರೊ.ನಂಜುಂಡಸ್ವಾಮಿ ಅವರ ಒಡನಾಟ, ಮಾತುಗಳಿಂದ ಪ್ರಭಾವಿತನಾಗಿ ಈ ಕ್ಷೇತ್ರಕ್ಕೆ ಬಂದೆ. ನಮ್ಮ ಕುಟುಂಬದಲ್ಲಿ ಇಷ್ಟು ಓದಿದ್ದು, ರಾಜಕೀಯಕ್ಕೆ ಬಂದಿದ್ದು ಎಲ್ಲವೂ ನಾನೇ ಮೊದಲು; ಬಹುಶಃ ನನ್ನಿಂದಲೇ ಅದು ಕೊನೆಯಾಗಬಹುದು' ಎಂದು ಸೂಚ್ಯವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT