122 ಲೈಸೆನ್ಸ್ ರದ್ದು, ಕೇಂದ್ರಕ್ಕೆ ಗುದ್ದು

7

122 ಲೈಸೆನ್ಸ್ ರದ್ದು, ಕೇಂದ್ರಕ್ಕೆ ಗುದ್ದು

Published:
Updated:

ನವದೆಹಲಿ: ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಹಗರಣವೆಂಬ `ಕುಖ್ಯಾತಿ~ ಪಡೆದಿರುವ ಎರಡನೇ ತಲೆಮಾರಿನ ರೇಡಿಯೊ ತರಂಗಾಂತರದ 122 ಪರವಾನಗಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದು ಮಾಡುವ ಮಹತ್ವದ ತೀರ್ಪು ಪ್ರಕಟಿಸುವುದರೊಂದಿಗೆ ಮನಮೋಹನ್‌ಸಿಂಗ್ ಸರ್ಕಾರ ತೀವ್ರ ಮುಜುಗರ ಅನುಭವಿಸಿದೆ. ಎ.ರಾಜಾ ದೂರಸಂಪರ್ಕ ಸಚಿವರಾಗಿದ್ದ ವೇಳೆ `ಮೊದಲು ಬಂದವರಿಗೆ ಮೊದಲ ಆದ್ಯತೆ~ ನೀತಿ ಅನುಸರಿಸಿ ಮಂಜೂರು ಮಾಡಿರುವ 2ಜಿ ಪರವಾನಗಿ `ಕಾನೂನು ಬಾಹಿರ~ ಎಂದು ನ್ಯಾಯಾಲಯ ಸಾರಿರುವುದರಿಂದ ದೂರಸಂಪರ್ಕ ವಲಯ ಹಿನ್ನಡೆ ಅನುಭವಿಸಿದೆ.2ಜಿ ಪರವಾನಗಿ ನೀಡಿಕೆ ಕುರಿತಂತೆ ರಾಜಾ ಮೇಲೆ ನೇರ ದೋಷಾರೋಪಣೆ ಮಾಡಿರುವ ಸುಪ್ರೀಂ ಕೋರ್ಟ್, ಹಿಂದಿನ ದೂರ ಸಂಪರ್ಕ ಸಚಿವರು ಇಡೀ ವ್ಯವಹಾರ ನಿರ್ವಹಿಸಿದ ವಿಧಾನ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. 22 ಟೆಲಿಕಾಂ ಸರ್ಕಲ್‌ಗಳ ಪರವಾನಗಿಗಳನ್ನು `ಹರಾಜು ಪ್ರಕ್ರಿಯೆ~ ಮೂಲಕ ಹಂಚಿಕೆ ಮಾಡಬೇಕು. ಇದಕ್ಕಾಗಿ `ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ~ (ಟ್ರಾಯ್) ಎರಡು ತಿಂಗಳ ಒಳಗೆ ಹೊಸ ಶಿಫಾರಸುಗಳನ್ನು ಮಾಡಬೇಕು. ಇದಾದ ಒಂದು ತಿಂಗಳ ಒಳಗಾಗಿ ಸರ್ಕಾರ ಸೂಕ್ತ ತೀರ್ಮಾನ ಮಾಡಬೇಕು ಎಂದು ಸೂಚಿಸುವ ಮೂಲಕ 2008ರ 2ಜಿ ವಿವಾದಕ್ಕೆ ವಿರಾಮ ಹಾಕಿದೆ.`ಹಗರಣದಲ್ಲಿ ಕೇಂದ್ರ ಸಚಿವ ಚಿದಂಬರಂ ಪಾತ್ರ ಕುರಿತು ತನಿಖೆ ನಡೆಸಬೇಕು~ ಎಂಬ ಡಾ. ಸುಬ್ರಮಣಿಯನ್ ಸ್ವಾಮಿ ಬೇಡಿಕೆ ಕುರಿತು ತೀರ್ಮಾನಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ಸಿಬಿಐ ವಿಚಾರಣಾ ನ್ಯಾಯಾಲಯಕ್ಕೆ ಬಿಟ್ಟಿದೆ. `ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ತಾನು ಹಸ್ತಕ್ಷೇಪ ಮಾಡಿದಂತೆ ಆಗಬಾರದು~ ಎಂಬ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯ ಈ ಸಂಬಂಧ ಸಿಬಿಐಗೆ ಯಾವುದೇ ನಿರ್ದೇಶನ ನೀಡಿಲ್ಲ.ಮೂರನೇ ತಲೆಮಾರಿನ ತರಂಗಾಂತರದಂತೆ 2ಜಿ ತರಂಗಾಂತರಗಳನ್ನು `ಹರಾಜು ಪ್ರಕ್ರಿಯೆ~ ಮೂಲಕವೇ ಮಾರಾಟ ಮಾಡಬೇಕೆಂದು ನ್ಯಾ. ಜಿ.ಎಸ್. ಸಿಂಘ್ವಿ ಮತ್ತು ನ್ಯಾ.ಎ.ಕೆ. ಗಂಗೂಲಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಕೇಂದ್ರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.ಲೈಸೆನ್ಸ್ ರದ್ದತಿ ಆದೇಶ 4 ತಿಂಗಳ ಬಳಿಕ ಜಾರಿಗೆ ಬರಲಿದೆ. ಅಲ್ಲಿವರೆಗೆ ಈ ಪರವಾನಗಿಗಳು ಚಾಲ್ತಿಯಲ್ಲಿರುತ್ತವೆ ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.ಏಕಪಕ್ಷೀಯ ಮತ್ತು ಅಸಾಂವಿಧಾನಿಕ ನಿರ್ಧಾರದ ಪೂರ್ಣ ಲಾಭ ಪಡೆದು, ಷೇರುಗಳ ಮಾರಾಟದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಮಾಡಿರುವ  `ಸ್ವಾನ್ ಟೆಲಿಕಾಂ~, `ಯುನಿಟೆಕ್ ವೈರ್‌ಲೆಸ್ ಗ್ರೂಪ್~ ಹಾಗೂ `ಟಾಟಾ ಟೆಲಿ ಸರ್ವಿಸಸ್ ಲಿ~ ಕಂಪೆನಿಗಳಿಗೆ ನ್ಯಾಯಾಲಯ ಐದು ಕೋಟಿ ರೂಪಾಯಿಯ ಭಾರಿ ದಂಡ ವಿಧಿಸಿದೆ. ಈ ನಿರ್ಧಾರದ ಪ್ರಯೋಜನ ಪಡೆದಿರುವ `ಲೂಪ್ ಟೆಲಿಕಾಂ ಪ್ರೈ. ಲಿ, ಎಸ್- ಟೆಲ್, ಅಲೈಯನ್ಸ್ ಇನ್‌ಫ್ರಾಟೆಕ್ ಅಂಡ್ ಸಿಸ್ಟೆಮ್ ಶ್ಯಾಮ್ ಟೆಲಿಸರ್ವಿಸಸ್ ಲಿ. ಕಂಪೆನಿಗಳಿಗೆ ತಲಾ 50 ಲಕ್ಷ ವೆಚ್ಚ ಭರಿಸುವಂತೆ ಆದೇಶಿಸಿದೆ.ರಾಜಾ ಕಾಲದಲ್ಲಿ ಮಂಜೂರಾಗಿರುವ ಲೈಸೆನ್ಸ್‌ಗಳು ಏಕಪಕ್ಷೀಯ, ದುರುದ್ದೇಶ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತವಾಗಿದೆ. ಕೆಲವು ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಖಜಾನೆಗೆ ಹಾನಿ ಮಾಡಲಾಗಿದ್ದು, ಸಮಾನತೆ ಸಿದ್ಧಾಂತದ ಉಲ್ಲಂಘನೆ ಆಗಿದೆ ಎಂದು ನ್ಯಾಯಾಲಯ ಕಠಿಣ ಶಬ್ದಗಳಲ್ಲಿ ಸರ್ಕಾರದ ತೀರ್ಮಾನದ ವಿರುದ್ಧ ಹರಿಹಾಯ್ದಿದೆ.ತರಂಗಾಂತರ ಮಂಜೂರು ಮಾಡುವಾಗ ಪಾರದರ್ಶಕ ಮತ್ತು ನ್ಯಾಯಯುತ ನೀತಿಗಳನ್ನು ಅನುಸರಿಸಬೇಕೆಂಬ ಪ್ರಧಾನಿ ಸಲಹೆಯನ್ನು ದೂರ ಸಂಪರ್ಕ ಇಲಾಖೆ ಮತ್ತು ರಾಜಾ ಕೇಳಿಲ್ಲ. ಇಡೀ ಹಗರಣದಲ್ಲಿ ಟ್ರಾಯ್ ವಹಿಸಿರುವ ಪಾತ್ರ ಕುರಿತು ಕೋರ್ಟ್ ಕಟುವಾಗಿ ಟೀಕಿಸಿದೆ. ಪ್ರಾಧಿಕಾರದ ಶಿಫಾರಸು ಮಂತ್ರಿ ಮಂಡಳ ಕೈಗೊಂಡ ನಿರ್ಧಾರಕ್ಕೆ ವ್ಯತಿರಿಕ್ತವಾಗಿದ್ದು, ರಾಷ್ಟ್ರೀಯ ಸಂಪತ್ತನ್ನು ಅಗ್ಗದ ದರಕ್ಕೆ ಮಾರಾಟ ಮಾಡಲು ರಾಜಾ ಅವರಿಗೆ ಸಹಾಯ ಮಾಡಿದೆ ಎಂದು ಅಭಿಪ್ರಾಯಪಟ್ಟಿದೆ.`ಖಾಸಗಿ ವಲಯದ ಪಾಲ್ಗೊಳ್ಳುವಿಕೆ~ ಕುರಿತ ಸರ್ಕಾರದ ನೀತಿಯನ್ನು ಪರಾಮರ್ಶಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ~ ಎಂಬ ಅಟಾರ್ನಿ ಜನರಲ್ ಅವರ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದೆ. ರಿಲೈಯನ್ಸ್ ಅನಿಲ ವಿವಾದ ಸೇರಿದಂತೆ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಾಲಯ `ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ ಸರ್ಕಾರದ ಏಕೈಕ ಕರ್ತವ್ಯವಾಗಬೇಕು. ರಾಷ್ಟ್ರೀಯ  ಸಂಪತ್ತು ರಾಷ್ಟ್ರೀಯ ಹಿತಾಸಕ್ತಿಗೆ ಬಳಕೆಯಾಗಬೇಕೇ ವಿನಾ ಖಾಸಗಿ ಹಿತಾಸಕ್ತಿಗಳ ಪಾಲಾಗಬಾರದು~ ಎಂದು ನ್ಯಾಯಾಲಯ ಹೇಳಿದೆ.ಟ್ರಾಯ್ ಪರಿಣತ ಸಂಸ್ಥೆ ಇರಬಹುದು. ಆದರೆ, ತರಂಗಾಂತರ ಹಂಚಿಕೆ ಕುರಿತ ಶಿಫಾರಸುಗಳು ಲೋಪದಿಂದ ಕೂಡಿವೆ. 1999ರಲ್ಲಿ ರೂಪಿಸಲಾದ ರಾಷ್ಟ್ರೀಯ ದೂರಸಂಪರ್ಕ ನೀತಿಯ ಧ್ಯೇಯೋದ್ದೇಶಗಳ ಉಲ್ಲಂಘನೆ ಆಗಿದೆ. ಕೇಂದ್ರ ಸರ್ಕಾರ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನೀತಿ ಅನುಸರಿಸಿ ಅತ್ಯಂತ ಅಗ್ಗದ ದರಕ್ಕೆ ತರಂಗಾಂತರ ನಿಗದಿ ಮಾಡಿದೆ ಎಂದು ನ್ಯಾಯಾಲಯ ವಿವರಿಸಿದೆ.`ಪರವಾನಗಿ ನೀಡಿಕೆಗೆ ಹರಾಜು ಪ್ರಕ್ರಿಯೆ ಅನುಸರಿಸಿದ್ದರೆ ಯಾವುದೇ ಸಂದೇಹವೂ ಇರುತ್ತಿರಲಿಲ್ಲ. ರಾಷ್ಟ್ರೀಯ ಸಂಪತ್ತಿನ ಹಂಚಿಕೆಗೆ ಇದೊಂದೇ ಸರಿಯಾದ ಪಾರದರ್ಶಕ ಮಾರ್ಗ. ಇದರಿಂದ ರಾಷ್ಟ್ರೀಯ ಆದಾಯಕ್ಕೆ ಕೋಟ್ಯಂತರ ರೂಪಾಯಿ ಬರುತಿತ್ತು~ ಎಂದು ನ್ಯಾಯಾಲಯ ತಿಳಿಸಿದೆ. ತರಂಗಾಂತರ ಮಾರಾಟಕ್ಕೆ ಸಂಬಂಧಿಸಿದಂತೆ ಪಾರದರ್ಶಕ ಮತ್ತು ನ್ಯಾಯಯುತ ಮಾರ್ಗ ಅನುಸರಿಸಬೇಕು ಎಂದು ಪ್ರಧಾನಿ 2007ರ ನವೆಂಬರ್ 2ರಂದು ಪತ್ರ ಬರೆದಿದ್ದಾರೆ. ಆದರೆ, `ಹರಾಜು ಪ್ರಕ್ರಿಯೆ ಮೂಲಕ ಹೊಸ ಅರ್ಜಿದಾರರಿಗೂ ತರಂಗಾಂತರ ಹಂಚುವುದು  ಅನೀತಿ, ತಾರತಮ್ಯದ ಧೋರಣೆ ಆಗಲಿದೆ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದಂತೆ ಆಗುವುದಿಲ್ಲ~ ಎಂದು ರಾಜಾ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಸಲಹೆಯನ್ನು ತಿರಸ್ಕರಿಸಿದ್ದಾರೆ.ಅರ್ಜಿ ಸಲ್ಲಿಕೆಗೆ ನಿಗದಿ ಮಾಡಲಾಗಿದ್ದ ಅಂತಿಮ ಗಡುವನ್ನು 2007ರ ಅಕ್ಟೋಬರ್ 1ಕ್ಕೆ ಬದಲು ಸೆಪ್ಟೆಂಬರ್ 25ಕ್ಕೆ ನಿಗದಿ ಮಾಡುವ ಮೂಲಕ ದೂರಸಂಪರ್ಕ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರದ ಕೆಲವು `ರಿಯಲ್ ಎಸ್ಟೇಟ್ ಉದ್ಯಮ~ ಗಳಿಗೆ ಅನುಕೂಲ ಮಾಡಿಕೊಡುವ ಏಕಪಕ್ಷೀಯ ತೀರ್ಮಾನ ಮಾಡಿದ್ದಾರೆ. ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2007ರ ಅಕ್ಟೋಬರ್ 1 ಎಂದು ದೂರ ಸಂಪರ್ಕ ಇಲಾಖೆ ಪ್ರಕಟಣೆ ನೀಡಿದ ಮಾರನೆ ದಿನ ರಾಜಾ ಅಂತಿಮ ಗಡುವನ್ನು ಒಂದು ವಾರ ಕಡಿತಗೊಳಿಸಿದ್ದಾರೆ. ಸಚಿವರು ನಿಗದಿ ಮಾಡಿದ ಅಂತಿಮ ಗಡುವಿಗೆ ಒಂದು ದಿನ ಮೊದಲು ಅರ್ಜಿ ಸಲ್ಲಿಸಿದ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಇಡೀ 2ಜಿ ವ್ಯವಹಾರ ಪೂರ್ವಯೋಜಿತ. ಕೆಲವು ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಮೊದಲೇ ಅರ್ಜಿ ಸಲ್ಲಿಸಿದ ಕಂಪೆನಿಗಳನ್ನು ಆದ್ಯತಾ ಪಟ್ಟಿಯಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ. ಪರವಾನಗಿ ನೀಡಿಕೆ ವ್ಯವಹಾರಗಳನ್ನು ಗಮನಿಸಿದರೆ ಇಡೀ ವ್ಯವಹಾರ ಪುರ್ವಯೋಜಿತ ಎಂಬ ಅನುಮಾನ ಬರುತ್ತದೆ. 2004 ಮತ್ತು 2006ರಲ್ಲಿ ಅರ್ಜಿ ಸಲ್ಲಿಸಿದ ಕಂಪೆನಿಗಳನ್ನು ಜೇಷ್ಠತಾ ಪಟ್ಟಿಯಿಂದ ಕೆಳಕ್ಕೆ ತಳ್ಳಲಾಗಿದೆ. 2007ರ ಆಗಸ್ಟ್- ಸೆಪ್ಟೆಂಬರ್ ನಡುವೆ ಅರ್ಜಿ ಸಲ್ಲಿಸಿದ ಕಂಪೆನಿಗಳು `ಮೊದಲು ಬಂದವರಿಗೆ ಮೊದಲ ಆದ್ಯತೆ~ ನೀತಿಯಡಿ ಲೈಸೆನ್ಸ್ ಪಡೆಯಲು ಯಶಸ್ವಿಯಾಗಿವೆ ಎಂದು ನ್ಯಾಯಾಲಯ ವಿಶ್ಲೇಷಿಸಿದೆ. 2ಜಿ ತರಂಗಾಂತರವನ್ನು 3ಜಿ ಮಾದರಿಯಲ್ಲಿ ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಬಹುದಿತ್ತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.ಟೆಲಿಕಾಂ ಕಂಪೆನಿಗಳು ಪಾವತಿಸುವ ದಂಡದಲ್ಲಿ ಶೇ. 50ರಷ್ಟು ಸುಪ್ರೀಂ ಕೋರ್ಟ್ ಕಾನೂನು ನೆರವು ವಿಭಾಗಕ್ಕೆ, ಉಳಿದ ಅರ್ಧ ಭಾಗವನ್ನು ಪ್ರಧಾನಿ ಪರಿಹಾರ ನಿಧಿಗೆ ನೀಡಬೇಕೆಂದು ಕೋರ್ಟ್ ನಿರ್ದೇೀಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry