ಸೋಮವಾರ, ಅಕ್ಟೋಬರ್ 14, 2019
22 °C

1241 ಕನ್ನಡ ಶಾಲೆ ತೆರೆಯಲು ಶಿಫಾರಸು

Published:
Updated:

ನವದೆಹಲಿ: ರಾಜ್ಯದಲ್ಲಿ ಐದು ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕನ್ನಡ ಶಾಲೆಗಳನ್ನು ಪಕ್ಕದ ಶಾಲೆಗಳಲ್ಲಿ ವಿಲೀನಗೊಳಿಸುತ್ತಿರುವ ಬೆನ್ನಲ್ಲೇ, ನೂರಕ್ಕೆ ನೂರರಷ್ಟು ಶಾಲಾ ದಾಖಲಾತಿ ಸಾಧ್ಯವಾಗಬೇಕಾದರೆ ಮುಂದಿನ 5 ವರ್ಷಗಳಲ್ಲಿ 1241 ಕನ್ನಡ ಶಾಲೆಗಳೂ ಸೇರಿದಂತೆ ಸುಮಾರು 20 ಸಾವಿರ ಮಾಧ್ಯಮಿಕ ಶಾಲೆಗಳನ್ನು ದೇಶಾದ್ಯಂತ ತೆರೆಯಬೇಕೆಂದು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ `ಕಾರ್ಯತಂಡ~ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.ಈ ವರ್ಷದಿಂದ ಆರಂಭವಾಗಿ 2017ಕ್ಕೆ ಮುಗಿಯಲಿರುವ 12ನೇ ಪಂಚವಾರ್ಷಿಕ ಯೋಜನೆ ಹಿನ್ನೆಲೆಯಲ್ಲಿ ಮಾಧ್ಯಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಗತ್ಯ ಶಿಫಾರಸುಗಳನ್ನು ಮಾಡಲು ನೇಮಿಸಲಾಗಿದ್ದ ಮಾನವ ಸಂಪನ್ಮೂಲ ಸಚಿವಾಲಯದ ಮಾಧ್ಯಮಿಕ ಶಿಕ್ಷಣ ಕಾರ್ಯದರ್ಶಿ ನೇತೃತ್ವದ ಕಾರ್ಯತಂಡ ಈ ಮಹತ್ವದ ಶಿಫಾರಸು ಮಾಡಿದೆ. ಅಲ್ಲದೆ, `ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ~ (ಆರ್‌ಎಂಎಸ್‌ಎ) ವ್ಯಾಪ್ತಿಗೆ 11ಮತ್ತು 12ನೇ ತರಗತಿ ಸೇರ್ಪಡೆ ಮಾಡಬೇಕೆಂದು ಸಲಹೆ ಮಾಡಿದೆ.ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಅತೀ ಹೆಚ್ಚು ಶಾಲೆಗಳನ್ನು ತೆರೆಯಬೇಕು ಎಂದು ಕಾರ್ಯತಂಡ ಹೇಳಿದೆ. ಉಳಿದ ರಾಜ್ಯಗಳಾದ ತಮಿಳುನಾಡು 690, ಆಂಧ್ರ ಪ್ರದೇಶ 456 ಮತ್ತು ಕೇರಳದಲ್ಲಿ 112 ಶಾಲೆಗಳನ್ನು ತೆರೆಯಲು ಈ ತಂಡ ಸಲಹೆ ಮಾಡಿದೆ. ದೇಶಾದ್ಯಂತ 19,946 ಶಾಲೆಗಳನ್ನು ತೆರೆಯಬೇಕು. 2017ರ ಒಳಗಾಗಿ ಶೇ. ನೂರಕ್ಕೆ ನೂರರಷ್ಟು ಮಕ್ಕಳು ಶಾಲೆಗಳಿಗೆ ದಾಖಲಾತಿ ಆಗುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯತಂಡ ಶಿಫಾರಸು ಮಾಡಿದೆ.ಯಾವ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಮಾಧ್ಯಮಿಕ ಶಾಲೆಗಳನ್ನು ತೆರೆಯಬೇಕೆಂಬ ಶಿಫಾರಸು ಒಳಗೊಂಡ ಕಾರ್ಯತಂಡದ ವರದಿ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಕೆಯಾಗಿದೆ. ಅನಂತರ ಇದು ಯೋಜನಾ ಆಯೋಗಕ್ಕೆ ಹೋಗಲಿದೆ. ಯೋಜನಾ ಆಯೋಗದ ಪರಿಶೀಲನೆ ಬಳಿಕ ವರದಿ ಪ್ರಧಾನಿ ಅಧ್ಯಕ್ಷತೆಯ `ರಾಷ್ಟ್ರೀಯ ಅಭಿವೃದ್ಧಿ ಮಂಡಳಿ~ (ಎನ್‌ಡಿಸಿ) ಗೆ ಬರಲಿದೆ.ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುವ ಎನ್‌ಡಿಸಿ ಸಭೆಯಲ್ಲಿ ವರದಿ ಚರ್ಚೆ ಆಗಲಿದೆ. ವರದಿಯನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅಧಿಕಾರ ಎನ್‌ಡಿಸಿಗೆ ಇದೆ. ವರದಿಯನ್ನು ಒಪ್ಪಿಕೊಂಡರೆ ಅನಂತರ ಅದು ಸಚಿವ ಸಂಪುಟದ ಮುಂದೆ ಚರ್ಚೆಗೆ ಬರಲಿದೆ. 12ನೇ ಪಂಚವಾರ್ಷಿಕ ಯೋಜನೆ ಸದ್ಯದಲ್ಲೇ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ತರಾತುರಿಯಲ್ಲಿ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಪರ್ಯಾಸವೆಂದರೆ ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳಿಲ್ಲವೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಕನ್ನಡ ಶಾಲೆಗಳನ್ನು ಅಕ್ಕಪಕ್ಕದ ಶಾಲೆಗಳಲ್ಲಿ ವಿಲೀನಗೊಳಿಸುತ್ತಿರುವ ಸಂದರ್ಭದಲ್ಲೇ 1241 ಶಾಲೆಗಳನ್ನು ತೆರೆಯಬೇಕೆಂದು ಕಾರ್ಯತಂಡ ಶಿಫಾರಸು ಮಾಡಿದೆ.ಕಳೆದ ಒಂದು ದಶಕದಲ್ಲಿ ಸುಮಾರು 10ಸಾವಿರ ಕನ್ನಡ ಶಾಲೆಗಳನ್ನು ವಿಲೀನಗೊಳಿಸಲಾಗಿದೆ. ಈ ವರ್ಷ ತಕ್ಷಣ 5ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ 590 ಕಿರಿಯ ಹಾಗೂ  27 ಹಿರಿಯ ಪ್ರಾಥಮಿಕ ಶಾಲೆಗಳನ್ನು ಬೇರೆ ಶಾಲೆಗಳಲ್ಲಿ ವಿಲೀನಗೊಳಿಸಲಾಗಿದೆ.ಮುಂದಿನ ವರ್ಷ ವಿಲೀನಗೊಳಿಸಲಾಗುವ ಶಾಲಾ ಪಟ್ಟಿ ಸಿದ್ಧವಾಗಿದ್ದು 2483 ಕಿರಿಯ ಮತ್ತು 74 ಹಿರಿಯ ಪ್ರಾಥಮಿಕ ಶಾಲೆಗಳು ಇದರಲ್ಲಿ ಸೇರಿವೆ.

Post Comments (+)