ಭಾನುವಾರ, ಆಗಸ್ಟ್ 18, 2019
24 °C

125ರ ಹರೆಯದ ಮಂಡಿಕಲ್ ಶಾಲೆ

Published:
Updated:
125ರ ಹರೆಯದ ಮಂಡಿಕಲ್ ಶಾಲೆ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪೆರೇಸಂದ್ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಿಸಿದ ಬೆನ್ನಲ್ಲೇ ಈಗ ಮತ್ತೊಂದು ಸರ್ಕಾರಿ ಶಾಲೆ 125 ವರ್ಷಗಳನ್ನು ಪೂರೈಸಿದ ಸಂಭ್ರಮ ಆಚರಿಸಲು ಸಜ್ಜಾಗಿದೆ. ತಾಲ್ಲೂಕಿನ ಅತ್ಯಂತ ಹಳೆಯ ಸರ್ಕಾರಿ ಸರ್ಕಾರಿ ಶಾಲೆಗಳಲ್ಲಿ ಒಂದಾದ ಮಂಡಿಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕೆಲವೇ ದಿನಗಳಲ್ಲಿ 125ನೇ ವಾರ್ಷಿಕೋತ್ಸವ ಸಮಾರಂಭ ಆಚರಿಸಲಿದೆ.ಬ್ರಿಟಿಷರು ನಿರ್ಮಿಸಿದ ಹಳೆಯ ಮಾದರಿಯ ಕಟ್ಟಡದಲ್ಲೇ ತರಗತಿಗಳು ನಡೆಯುತ್ತಿದ್ದು, ಇಡೀ ಆವರಣವನ್ನು ಸ್ಮಾರಕದಂತೆ ಯಥಾರೀತಿ ಕಾಯ್ದುಕೊಳ್ಳಲಾಗಿದೆ. 125ನೇ ವರ್ಷ ಪೂರೈಸಿದ ವಿಷಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ಇಡೀ ಶಾಲೆಯು ಸಂಭ್ರಮಾಚರಣೆಗೆ ಸಾಕ್ಷಿಯಾಗಲಿದೆ.`ಈ ಕಟ್ಟಡದಲ್ಲಿ ಮೊದಲು ಸಂಸ್ಕೃತ ಪಾಠಶಾಲೆ ನಡೆಸಲಾಗುತಿತ್ತು. ಬ್ರಿಟಿಷರು ಮತ್ತು ಸ್ಥಳೀಯರ ಒತ್ತಾಸೆ ಮೇರೆಗೆ ಇಲ್ಲಿ ಸರ್ಕಾರಿ ಶಾಲೆ ಆರಂಭಗೊಂಡಿತು. ಮಂಡಿಕಲ್ ಸುತ್ತಮುತ್ತ ಇದೊಂದೇ ಶಾಲೆಯಿದ್ದ ಕಾರಣ ಸುತ್ತಮುತ್ತಲಿನ ಗ್ರಾಮದ ಜನರು ತಮ್ಮ ಮಕ್ಕಳನ್ನು ಇಲ್ಲಿಯೇ ಕಳುಹಿಸತೊಡಗಿದರು' ಎಂದು ಶಾಲೆಯ ಮುಖ್ಯಶಿಕ್ಷಕ ಎಂ.ಎನ್.ನಾರಾಯಣಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.`ಈ ಶಾಲೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಇಲ್ಲಿ ಕಲಿತ ಬಹುತೇಕ ವಿದ್ಯಾರ್ಥಿಗಳು ಈಗ ಉನ್ನತ ಸ್ಥಾನಗಳಲ್ಲಿದ್ದಾರೆ. ಸುತ್ತಲೂ ಬೆಟ್ಟಗುಡ್ಡಗಳಿಂದ ಮತ್ತು ವಿಶಾಲವಾದ ಆವರಣದಿಂದ ಆವರಿಸಿಕೊಂಡಿರುವ ಈ ಶಾಲೆಗೆ ಹಳೆಯ ವಿದ್ಯಾರ್ಥಿಗಳ ಸಹಕಾರವು ದೊರೆಯುತ್ತಿದೆ. ಇದಲ್ಲದೇ ಬೇರೆ ಬೇರೆ ಕಾರಣಗಳಿಂದಲೂ ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ' ಎಂದು ಅವರು ಹೇಳಿದರು.ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಲಭ್ಯವಿರುವ ಎಲ್ಲ ಯೋಜನೆಗಳನ್ನು ಇಲ್ಲಿ ಅನುಷ್ಠಾನಗೊಳಿಸಿದ್ದೇವೆ. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಉತ್ತಮಪಡಿಸುವಲ್ಲಿ ಮತ್ತು ಅವರ ಜ್ಞಾನ ವೃದ್ಧಿಸುವಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ ಎಂದು ಶಿಕ್ಷಕರಾದ ಡಿ.ಆರ್.ವೇಣುಗೋಪಾಲ್ ಮತ್ತು ಎ.ಆರ್.ಶೈಲಜಾ ತಿಳಿಸಿದರು.

Post Comments (+)