ಬುಧವಾರ, ಜುಲೈ 28, 2021
20 °C
ಕಲಬುರ್ಗಿ–ವಾಡಿ ರಾಷ್ಟ್ರೀಯ ಹೆದ್ದಾರಿ: ಮಹದೇವಪ್ಪ

125 ಕಿ.ಮೀ ರಸ್ತೆಗೆ ₹1,024 ಕೋಟಿ ವೆಚ್ಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

125 ಕಿ.ಮೀ ರಸ್ತೆಗೆ ₹1,024 ಕೋಟಿ ವೆಚ್ಚ

ಕಲಬುರ್ಗಿ: ‘₹ 1,024 ಕೋಟಿ ವೆಚ್ಚದಲ್ಲಿ 125.30 ಕಿ.ಮೀ ಉದ್ದದ ಕಲಬುರ್ಗಿ–ವಾಡಿ ರಾಷ್ಟ್ರೀಯ ಹೆದ್ದಾರಿ (ನಂ. 150) ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ‘ಕಲಬುರ್ಗಿ, ವಾಡಿ, ಸೈದಾಪುರ, ರಾವೂರ, ಯರಗೋಳ ಮತ್ತು ಕಡೆಚೂರ ಮಾರ್ಗವಾಗಿ ಆಂಧ್ರಪ್ರದೇಶ ಗಡಿಭಾಗದವರೆಗೆ ಈ ರಸ್ತೆ ನಿರ್ಮಿಸಲಾಗುತ್ತಿದೆ.ಈಗಾಗಲೇ ಅನುದಾನ ಮಂಜೂರಾಗಿದ್ದು, ಮೇ 18ರಂದು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಜೂನ್ ಮೊದಲ ವಾರದಿಂದ ಕಾಮಗಾರಿ ಆರಂಭಿಸಲಾಗುವುದು. ಇದರಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘35 ಕಿ.ಮೀ ಹೊರ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಗೆ ₹ 280 ಕೋಟಿ, ಜೇವರ್ಗಿ–ಶಹಾಪುರ ರಾಷ್ಟ್ರೀಯ ಹೆದ್ದಾರಿಯ (13 ಕಿ.ಮೀ) ನವೀಕರಣ ಕಾಮಗಾರಿಗೆ ₹ 5.60 ಕೋಟಿ, ಮಹಾರಾಷ್ಟ್ರ ಗಡಿಯಿಂದ ಹುಮನಾ ಬಾದ್‌ವರೆಗೆ 102 ಕಿ.ಮೀ ರಸ್ತೆ ನಿರ್ಮಾಣಕ್ಕೆ ₹ 1,200 ಕೋಟಿ, ಚೌಡಾಪುರ–ಅಫಜಲಪುರ–ಹೊಸೂರು ದ್ವಿಪಥ ರಸ್ತೆ (46 ಕಿ.ಮೀ)ಗೆ ₹ 76 ಕೋಟಿ, ಅಫಜಲಪುರ–ಬಳ್ಳೂರ್ಗಿ–ಧುದನಿಯ 13 ಕಿ.ಮೀ ರಸ್ತೆ ಅಭಿವೃದ್ಧಿಗೆ ₹ 40 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ತಿಳಿಸಿದರು.‘ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌)ದಿಂದ ₹ 1 ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದಾದ್ಯಂತ 120 ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಸೇಡಂ ತಾಲ್ಲೂಕಿನ ಮಳಖೇಡ ಬಳಿಯ ಸೇತುವೆಯೂ ಸೇರಿದೆ. ಅಪೆಂಡಿಕ್ಸ್–ಇ ಅಡಿ ಕಲಬುರ್ಗಿ ಜಿಲ್ಲೆಗೆ ₹146 ಕೋಟಿ ಹಾಗೂ ಯಾದಗಿರಿ ಜಿಲ್ಲೆಗೆ ₹ 81 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.‘ಬೀದರ್ ಜಿಲ್ಲೆಯ ಕಮಲನಗರದಿಂದ ಹುಮನಾಬಾದ್‌ವರೆಗೆ ಹಲಬರ್ಗಾ, ನೌಬಾದ್, ಹಳ್ಳಿಖೇಡ (ಬಿ) ಮಾರ್ಗವಾಗಿ 102 ಕಿ.ಮೀ ರಸ್ತೆ ನವೀಕರಣ ಮಾಡಲಾಗುತ್ತಿದೆ. ರಸ್ತೆಗಳ ಸ್ಥಿತಿಗತಿಗಳನ್ನು ಆನ್‌ಲೈನ್‌ನಲ್ಲೇ ನೋಡಲು ಅನುಕೂಲವಾಗುವಂತೆ ದೇಶದಲ್ಲೇ ಮೊದಲ ಬಾರಿಗೆ ರಸ್ತೆ ಮಾಹಿತಿ ವ್ಯವಸ್ಥೆ (ಆರ್‌ಐಎಸ್) ಜಾರಿಗೆ ತರಲಾಗಿದೆ’ ಎಂದು ವಿವರಿಸಿದರು.ಸಂಸದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡಿಸಿದರೂ ಕಾಮಗಾರಿ ಆರಂಭಿಸದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮದ (ಎನ್‌ಎಚ್‌ಎಐ) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.‘ಕಲಬುರ್ಗಿ–ವಾಡಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಆದಷ್ಟು ಬೇಗನೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಅದೇ ರೀತಿ ದೇವಲಗಾಣಗಾಪುರ–ಅಫಜಲಪುರ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಮಾಹಿತಿ ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, ಬೀದರ್ ಸಂಸದ ಭಗವಂತ ಖೂಬಾ, ಶಾಸಕರಾದ ಪ್ರಿಯಾಂಕ್ ಖರ್ಗೆ, ಅಲ್ಲಮಪ್ರಭು ಪಾಟೀಲ, ಅಮರನಾಥ ಪಾಟೀಲ, ಅಜಯ್‌ಸಿಂಗ್, ಬಿ.ಆರ್.ಪಾಟೀಲ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್‌ ಅಸಗರ್ ಚುಲಬುಲ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಲೋಕೋಪ ಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.