128ನೇ ಜಯಂತಿ ಆಚರಣೆ: ಸಂಶೋಧನಾ ಕೇಂದ್ರ ತೆರೆಯಲು ಒತ್ತಾಯ

ಶನಿವಾರ, ಜೂಲೈ 20, 2019
28 °C

128ನೇ ಜಯಂತಿ ಆಚರಣೆ: ಸಂಶೋಧನಾ ಕೇಂದ್ರ ತೆರೆಯಲು ಒತ್ತಾಯ

Published:
Updated:

ರಾಮನಗರ: ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ ಜನಾಂಗಗಳ ಅಭಿವೃದ್ಧಿಗಾಗಿ ಮಾಡಿರುವ ಕೆಲಸಗಳನ್ನು ಕೆಲ ದುಷ್ಟಶಕ್ತಿಗಳು ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಜಿ.ಗೋವಿಂದಯ್ಯ ಅಸಮಧಾನ ವ್ಯಕ್ತಪಡಿಸಿದರು.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 128ನೇ ಜಯಂತಿ ಪ್ರಯುಕ್ತ ಸೋಮವಾರ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಅವರು ಮಾತನಾಡಿದರು.  ಈ ಕೂಡಲೇ ಸರ್ಕಾರ ಪ್ರತಿ ವಿಶ್ವವಿದ್ಯಾಲಯಗಳಲ್ಲೂ ಒಡೆಯರ್ ಅವರ ಸಂಶೋಧನಾ ಕೇಂದ್ರವನ್ನು ತೆರೆಯಬೇಕು.

 

ಬೆಂಗಳೂರು-ಮೈಸೂರು ರಸ್ತೆಯಲ್ಲಿ ಒಡೆಯರ್ ಅವರ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಿ, ಅವರ ಹೆಸರಿನಲ್ಲಿ ವೃತ್ತ ನಿರ್ಮಿಸಬೇಕು. ಅವರ ಆಡಳಿತ ಅವಧಿಯಲ್ಲಿ ನಡೆದಿರುವ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮತ್ತು ಕಾನೂನು ರಚನೆಗಳನ್ನು ಶಾಲಾ ಮಕ್ಕಳಿಗೆ ತಿಳಿಸಲು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು.ಕರ್ನಾಟಕದಲ್ಲಿ ಮೊದಲ ಬಾರಿಗೆ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ನೀಡಿ ಸಮಾನತೆಯನ್ನು ಕಲ್ಪಿಸಿದವರು ಕೃಷ್ಣರಾಜ ಒಡೆಯರ್ ಅವರು. 1921ರಲ್ಲಿ ಸರ್ಕಾರಿ ನೌಕರಿಯಲ್ಲಿ ಶೇಕಡ 75ರಷ್ಟು ಮೀಸಲಾತಿಯನ್ನು ದಲಿತರಿಗೆ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.1915-16ರ ಅವಧಿಯಲ್ಲಿ ಹೆಣ್ಣು ಮಕ್ಕಳಿಗಾಗಿ 525 ಶಾಲಾ ಕಾಲೇಜುಗಳನ್ನು ತೆರೆದು 50,000 ವಿದ್ಯಾವಂತೆಯರನ್ನು ಹೊರತಂದು ಸಾಧನೆ ಮಾಡಿದರು. ಅಸ್ಪಶ್ಯರಿಗೆ 800 ಶಾಲೆಗಳನ್ನು ತೆರೆದು ಅವರಿಗಾಗಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಅವರಿಗೆ ವಿದ್ಯಾರ್ಥಿ ವೇತನವನ್ನು ಮೊದಲ ಬಾರಿಗೆ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.ದಲಿತರಿಗೆ ಸಮಾನತೆಯನ್ನು ಒದಗಿಸಿ ಕೊಟ್ಟವರು ಹಾಗೂ ಮೈಸೂರು ದಸರಾ ಮಹೋತ್ಸವದಲ್ಲಿ ಯುರೋಪಿಯನ್ನರ ಪ್ರಾಬಲ್ಯವನ್ನು ಬದಿಗೊತ್ತಿ ದೀನದಲಿತರಿಗೆ, ಸ್ಥಳೀಯರಿಗೆ ಅವಕಾಶ ಕಲ್ಪಿಸಿಕೊಟ್ಟ ಮೊದಲ ದೊರೆ ಒಡೆಯರ್ ಆಗಿದ್ದಾರೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಕರುನಾಡ ಸೇನೆಯ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಶ್ರೀಧರ್, ವೈದ್ಯಾಧಿಕಾರಿ ಡಾ.ವಿಜಯನಾರಸಿಂಹ, ಜೆಡಿಎಸ್ ಮುಖಂಡ ಶೇಷಪ್ಪ, ಪದಾಧಿಕಾರಿಗಳಾದ ಎಸ್.ಕೆ.ಸುರೇಶ್, ಎಚ್.ಸಿ.ಶೇಖರ್, ಕೋಟೆಕುಮಾರ್, ರುದ್ರೇಶ್, ಅಂಜನ್‌ಮೂರ್ತಿ, ಕೋಟೆ ಪ್ರಕಾಶ್, ಗಂಗಾಧರ್, ನಾಗರಾಜು, ಕಾಳರಾಜು ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry