128 ಗ್ರಾಮ ಪಂಚಾಯಿತಿ ಸಾಧನೆ ಶೂನ್ಯ

7
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ

128 ಗ್ರಾಮ ಪಂಚಾಯಿತಿ ಸಾಧನೆ ಶೂನ್ಯ

Published:
Updated:

ತುಮಕೂರು: ಜಿಲ್ಲೆಯ 128 ಗ್ರಾಮ ಪಂಚಾಯಿತಿ­ಗಳು ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೂನ್ಯ ಸಾಧನೆ ಮಾಡಿವೆ. ನರೇಗಾ ಯೋಜನೆ ವ್ಯಾಪ್ತಿಯಲ್ಲಿ ಬರುವ ಕೆರೆ ಅಭಿವೃದ್ಧಿ, ಒಕ್ಕಣೆ ಕಣ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಕಾಮಗಾರಿಯಲ್ಲಿ ಯಾವುದೇ ಸಾಧನೆ ಕಂಡುಬಂದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದ 20 ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಕಾಯದರ್ಶಿಗಳಿಗೆ ತಲಾ ರೂ.1000 ದಂಡ ವಿಧಿಸಲಾಗಿದೆ. ಆದರೆ ಅಮಾನತು ಮಾಡುವ ಅಧಿಕಾರ ಜಿಲ್ಲಾ ಪಂಚಾಯಿತಿಗೆ ಇಲ್ಲ ಎಂದು ಹೇಳಿದರುಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರ ಶಿರಾ ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯ ಸಾಧನೆ ಶೂನ್ಯವಾಗಿದ್ದು, ಪಿಡಿಓ ಹಾಗೂ ಕಾರ್ಯದರ್ಶಿಗಳಿಗೆ ದಂಡ ಹಾಕಲಾಗಿದೆ.ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಕೆರೆ­ಗಳನ್ನು ಪುನರುಜ್ಜೀವನಗೊಳಿಸಲು ಯೋಜನೆ ರೂಪಿಸ­ಲಾಗಿದೆ. 10 ದಿನಗಳಲ್ಲಿ ಮಾಹಿತಿ ನೀಡು­ವಂತೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಗೆ 2013–14 ನೇ ಸಾಲಿನಲ್ಲಿ ರೂ. 40.23 ಕೋಟಿ ಅನುದಾನ ಬಂದಿದೆ. ಈ ಅನುದಾನದಲ್ಲಿ 35.80 ಕೋಟಿ ಖರ್ಚಾಗಿದೆ. ಇಷ್ಟಾದರೂ 128 ಗ್ರಾಮ ಪಂಚಾಯಿಗಳಲ್ಲಿ ನರೇಗಾ ಯೋಜನೆಯ ಪ್ರಗತಿ ಶೂನ್ಯವಾಗಿ­ರುವುದು ಅಚ್ಚರಿಯಾಗಿದೆ ಎಂದರು.ತಾಲ್ಲೂಕುವಾರು ವ್ಯಯಿಸಲಾದ ಅನುದಾನ ಗಮನಿಸಿದರೆ ಚಿಕ್ಕನಾಯಕನಹಳ್ಳಿ 3.40 ಕೋಟಿ, ಗುಬ್ಬಿಯಲ್ಲಿ 1,82 ಕೋಟಿ, ಕೊರಟಗೆರೆ 4.86 ಕೋಟಿ, ಕುಣಿಗಲ್‌ 3.11ಕೋಟಿ,  ಮಧುಗಿರಿ 8.51 ಕೋಟಿ, ಪಾವಗಡ 62 ಲಕ್ಷ, ಶಿರಾ 7.18 ಕೋಟಿ, ತಿಪಟೂರು 2.54 ಕೋಟಿ, ತುಮಕೂರು ಹಾಗೂ ತುರುವೇಕೆರೆಯಲ್ಲಿ ತಲಾ ರೂ. 1.85 ಕೋಟಿ ಅನುದಾನ ಖಚಾರ್ಗಿದೆ. ಶಿರಾ ಒಂದರಲ್ಲೇ ರೂ. 7.18 ಕೋಟಿ ವೆಚ್ಚ ಮಾಡಿದ್ದರೂ 16 ಗ್ರಾಮ ಪಂಚಾಯಿತಿಗಳಲ್ಲಿ ಸಾಧನೆ ಶೂನ್ಯವಾಗಿರುವುದು ಕಂಡುಬಂದಿದೆ.ತೆಂಗಿಗೆ ಇನ್ನೂ ಸಿಗದ ಪ್ಯಾಕೇಜ್‌: ಜಿಲ್ಲೆಯಾದ್ಯಂತ ನಾಶವಾದ ತೆಂಗಿಗೆ ವಿಶೇಷ ಪ್ಯಾಕೇಜ್‌ ಘೋಷಿ­ಸುವ ಪ್ರಸ್ತಾವ ಕೇಂದ್ರದ ಅಂಗಳದಲ್ಲಿದೆ. ಕೇಂದ್ರ ಅಧ್ಯಯನ ತಂಡ ಸಮೀಕ್ಷೆ ನಡೆಸಿದ ಬಳಿಕ ನಾಶ­ವಾದ ಪ್ರತಿ ತೆಂಗಿನ ಮರಕ್ಕೆ ರೂ. 12 ಸಾವಿರ ಪರಿ­ಹಾರ ನೀಡುವ ಬಗ್ಗೆ ಇಲಾಖೆ ಮಟ್ಟದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ  ಒಣಗಿದ ತೆಂಗಿಗೆ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೃಷಿ ಮತ್ತು ತೋಟಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಉಗ್ರಯ್ಯ ಪ್ರಸ್ತಾಪಕ್ಕೆ ಅವರು ಉತ್ತರಿಸಿದರು.ಅಧಿಕಾರಿಗಳಿಗೆ ತರಾಟೆ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿಶೇಷ ಘಟಕ ಯೋಜನೆಯಲ್ಲಿ ವಾರ್ಷಿಕ ಗುರಿ ನಿಗದಿಪಡಿಸದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ­ಧಿಕಾ­ರಿಗಳನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು.ಆಗಸ್ಟ್‌ ತಿಂಗಳು ಮುಗಿದರೂ ವಾರ್ಷಿಕ ಗುರಿ ಸಿದ್ಧಪಡಿಸಲು ಆಗಿಲ್ಲ ಎಂದರೆ ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎಚ್‌.ಹುಚ್ಚಯ್ಯ ಕಿಡಿಕಾರಿದರು.ಜಿಲ್ಲಾ ಪಂಚಾಯಿತಿ ಸದಸ್ಯ, ಜೆಡಿ, ಇಓ, ಡಿಡಿ ಎಂಬ ತರಾತಮ್ಯ ಬಿಟ್ಟುಕೆಲಸ ಮಾಡಬೇಕು. ಮುಂದಿನ ಒಂದು ವಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್‌ ನೀಡಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry