13ರಂದು ಗಿಲಾನಿ ಹಾಜರಿಗೆ ಆದೇಶ

7

13ರಂದು ಗಿಲಾನಿ ಹಾಜರಿಗೆ ಆದೇಶ

Published:
Updated:

ಇಸ್ಲಾಮಾಬಾದ್ (ಪಿಟಿಐ): ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಪಾಕಿಸ್ತಾನ ಸುಪ್ರೀಂಕೋರ್ಟ್ ಪ್ರಧಾನಿ ಯೂಸುಫ್ ರಜಾ ಗಿಲಾನಿಯವರಿಗೆ  ಗುರುವಾರ  ಸಮನ್ಸ್ ಜಾರಿ ಮಾಡಿದ್ದು, ಈ ತಿಂಗಳ 13ರಂದು ನ್ಯಾಯಪೀಠದ ಮುಂದೆ ಖುದ್ದು ಹಾಜರಾಗುವಂತೆ ಆದೇಶಿಸಿದೆ. ಅಧ್ಯಕ್ಷ ಆಸೀಫ್ ಅಲಿ ಜರ್ದಾರಿಯವರ ಮೇಲಿರುವ ಭ್ರಷ್ಟಾಚಾರ ಆರೋಪ ಪ್ರಕರಣಗಳ ಮರುತನಿಖೆಗೆ ಕ್ರಮ ಕೈಗೊಳ್ಳಲು ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಪಾಲಿಸದೆ ನ್ಯಾಯಾಂಗ ನಿಂದನೆ ಮಾಡಿರುವ ಕಾರಣಕ್ಕಾಗಿ ಅಂದು ಪ್ರಧಾನಿ ವಿರುದ್ಧ ನ್ಯಾಯಪೀಠ ಔಪಚಾರಿಕವಾಗಿ ದೋಷಾರೋಪ ನಿಗದಿ ಮಾಡಲಿದೆ.`ಸಂವಿಧಾನವು (2009ರ ಕ್ಷಮಾದಾನ ತಿದ್ದುಪಡಿ ಅನ್ವಯ) ಅಧ್ಯಕ್ಷರಿಗೆ ಪಾಕಿಸ್ತಾನದೊಳಗೆ ಮತ್ತು ವಿದೇಶದಲ್ಲಿ ಶಿಕ್ಷೆಯಿಂದ ಸಂಪೂರ್ಣ ವಿನಾಯಿತಿ ನೀಡಿರುವುದರಿಂದ, ಪ್ರಧಾನಿ ನ್ಯಾಯಾಲಯದ ಆದೇಶದಂತೆಯೇ ನಡೆದುಕೊಂಡಿದ್ದು, ಯಾವುದೇ ನ್ಯಾಯಾಂಗ ನಿಂದನೆ ಮಾಡಿಲ್ಲ~ ಎಂದು ಗಿಲಾನಿಯವರ ವಕೀಲ ಐತ್ಜಾಜ್ ಅಹ್ಸಾನ್ ಅವರು ವಾದಿಸಿದ ನಂತರ ನ್ಯಾಯಮೂರ್ತಿ ನಾಸೀರ್-ಉಲ್-ಮುಲ್ಕ್ ನೇತೃತ್ವದ ಏಳು ನ್ಯಾಯಾಧೀಶರ ಪೀಠ ಸಮನ್ಸ್ ಆದೇಶ ಹೊರಡಿಸಿದೆ.ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಗಿಲಾನಿಯವರಿಗೆ ಶಿಕ್ಷೆ ವಿಧಿಸಿದಲ್ಲಿ, ಅವರು ಮುಂದಿನ ಐದು ವರ್ಷಗಳವರೆಗೆ ಯಾವುದೇ ಸರ್ಕಾರಿ ಹುದ್ದೆ ಅಲಂಕರಿಸಲು ಅನರ್ಹವಾಗಲಿದ್ದಾರೆ. ಜೊತೆಗೆ ತಮ್ಮ ವಿರುದ್ಧ ಯಾವುದೇ ನ್ಯಾಯಾಂಗ ನಿಂದನೆ ಆದೇಶ ಹೊರಬಿದ್ದರೂ, ಅದನ್ನು ಪ್ರಶ್ನಿಸಿ 30 ದಿನಗಳ ಒಳಗೆ ಉನ್ನತ ನ್ಯಾಯಪೀಠದ ಮೊರೆ ಹೋಗುವ ಹಕ್ಕನ್ನೂ ಅವರು ಹೊಂದಿದ್ದಾರೆ.ಈ ಮಧ್ಯೆ, ಸುಪ್ರೀಂಕೋರ್ಟ್‌ನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಹ್ಸಾನ್, `ಪ್ರಧಾನಿ ವಿರುದ್ಧ ಈ ತಿಂಗಳ 13ರಂದು ನ್ಯಾಯಾಂಗ ನಿಂದನೆ ದೊಷಾರೋಪ ನಿಗದಿ ಪಡಿಸಲು ನ್ಯಾಯಪೀಠ ನಿರ್ಧರಿಸಿದೆ. ಆ ದಿನ ಗಿಲಾನಿ ನ್ಯಾಯಾಲಯದಲ್ಲಿ ಹಾಜರಿರಲಿದ್ದಾರೆ~ ಎಂದು ತಿಳಿಸಿದರು.`ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ತಮ್ಮ ಕಕ್ಷಿದಾರ ಗಿಲಾನಿಯವರಿಗೆ ಸಲಹೆ ನೀಡಲಿದ್ದು, ಮುಂದಿನ ನಿರ್ಧಾರ ಅವರಿಗೆ ಬಿಟ್ಟದ್ದು. ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ನಾವು ಹೊಂದಿದ್ದೇವೆ~ ಎಂದು ಅವರು ಉತ್ತರಿಸಿದರು.ಸುಪ್ರೀಂಕೋರ್ಟ್ ಜನವರಿ 16ರಂದು ನ್ಯಾಯಾಂಗ ನಿಂದನೆ ಆರೋಪಕ್ಕಾಗಿ ಗಿಲಾನಿಯವರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗಿಲಾನಿ ಅವರು ಜ. 19ರಂದು ನ್ಯಾಯಪೀಠದ ಮುಂದೆ ಹಾಜರಾಗಿದ್ದರು.

ಹೀಗಾಗಿ ಮುಂದಿನ ವಿಚಾರಣೆಯಿಂದ ಅವರಿಗೆ ವಿನಾಯಿತಿ ನೀಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry