ಮಂಗಳವಾರ, ಏಪ್ರಿಲ್ 20, 2021
24 °C

13ರವರೆಗೆ ಗಡುವು: ಬಿಬಿಎಂಪಿ ಮುಷ್ಕರ ತಾತ್ಕಾಲಿಕ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

13ರವರೆಗೆ ಗಡುವು: ಬಿಬಿಎಂಪಿ ಮುಷ್ಕರ ತಾತ್ಕಾಲಿಕ ಅಂತ್ಯ

ಬೆಂಗಳೂರು: ಬೆಂಗಳೂರು ಮಹಾನಗರ ಕಾರ್ಯಪಡೆಯು (ಬಿಎಂಟಿಎಫ್) ಪಾಲಿಕೆ ನೌಕರರ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸು ತೆಗೆದುಕೊಳ್ಳಬೇಕೆಂಬುದೂ ಸೇರಿದಂತೆ ಐದು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರು ಮೂರು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಶುಕ್ರವಾರ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.`ಸೋಮವಾರ ಸಂಜೆಯೊಳಗೆ ಸಿಹಿ ಸುದ್ದಿ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮುಷ್ಕರವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗುತ್ತಿದೆ. ಒಂದು ವೇಳೆ ಸೋಮವಾರ ಸಂಜೆ ವೇಳೆಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಮಂಗಳವಾರದಿಂದ ಮತ್ತೆ ಮುಷ್ಕರ ಮುಂದುವರಿಸಲಾಗುವುದು~ ಎಂದು ಬಿಬಿಎಂಪಿ ಅಧಿಕಾರಿ/ ನೌಕರರ ಸಂಘದ ಅಧ್ಯಕ್ಷ ಆರ್. ಸುಬ್ರಮಣ್ಯಂ ಹಾಗೂ ಉಪಾಧ್ಯಕ್ಷ ಕೆ.ಟಿ. ನಾಗರಾಜ್ ಸುದ್ದಿಗಾರರಿಗೆ ತಿಳಿಸಿದರು.`ಕೆಎಂಸಿ ಅಧಿನಿಯಮ 1976ರ ಕಲಂ 492 (3) ಪ್ರಕಾರ, ಪಾಲಿಕೆ ಆಯುಕ್ತರ ನಿಯಂತ್ರಣ ಹಾಗೂ ಮೇಲ್ವಿಚಾರಣೆ ಮೇರೆಗೆ ಬಿಎಂಟಿಎಫ್ ಕಾರ್ಯನಿರ್ವಹಿಸಬೇಕು. ಆದರೆ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇರ ನಿಯಂತ್ರಣ ಹಾಗೂ ಮೇಲ್ವಿಚಾರಣೆಯಲ್ಲಿ ಕಾರ್ಯಪಡೆ ಕಾರ್ಯನಿರ್ವಹಿಸಬೇಕೆಂಬುದು ಕೆಎಂಸಿ ಕಾಯ್ದೆಗೆ ವ್ಯತಿರಿಕ್ತವಾಗಿದೆ~ ಎಂದು ಅವರು ಹೇಳಿದರು.`ಈ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಆದರೂ, ಉಪ ಮುಖ್ಯಮಂತ್ರಿ ಆರ್. ಅಶೋಕ ಅವರ ಭರವಸೆ ಮೇರೆಗೆ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳುತ್ತಿದ್ದೇವೆ~ ಎಂದು ಅವರು ತಿಳಿಸಿದರು.`ಬಿಎಂಟಿಎಫ್, ಪಾಲಿಕೆಯ 55 ಎಂಜಿನಿಯರ್‌ಗಳ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ನೇರವಾಗಿ ವಾಪಸು ಪಡೆಯಲು ಕಾನೂನು ತೊಡಕು ಎದುರಾಗಿದೆ. ಈ ವಿಚಾರದ ಬಗ್ಗೆ ಪರಾಮರ್ಶಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಕಾನೂನು ಸಚಿವ ಎಸ್. ಸುರೇಶ್‌ಕುಮಾರ್ ಕೂಡ ಹೇಳಿದ್ದಾರೆ.ಹೀಗಾಗಿ, ಈ ಸೂಕ್ಷ್ಮ ವಿಚಾರದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ನೀಡುತ್ತಿದ್ದೇವೆ. ಒಟ್ಟಾರೆ ನಮ್ಮ ಐದು ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ~ ಎಂದು ಸುಬ್ರಮಣ್ಯಂ ತಿಳಿಸಿದರು.`ಕೆಎಂಸಿ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರದ ಹೊರತು ಸಮಸ್ಯೆಗೆ ಪರಿಹಾರ ಸಿಗದು. ಮೊದಲು ಕಾಯ್ದೆಗೆ ತಿದ್ದುಪಡಿ ತಂದು ಬೇಕಾದಲ್ಲಿ ಬಿಎಂಟಿಎಫ್‌ಗೆ ಅಧಿಕಾರ ನೀಡಲಿ ಎಂಬುದು ನಮ್ಮ ಬೇಡಿಕೆಯಾಗಿದೆ~ ಎಂದು ಸಂಘದ ಉಪಾಧ್ಯಕ್ಷ ಕೆ.ಟಿ. ನಾಗರಾಜ್ ತಿಳಿಸಿದರು.ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಆರ್. ಅಶೋಕ ಅವರು ಮೇಯರ್ ಡಿ. ವೆಂಕಟೇಶಮೂರ್ತಿ, ಉಪ ಮೇಯರ್ ಎಲ್. ಶ್ರೀನಿವಾಸ್, ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಹಾಗೂ ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿದರು. ಸಭೆಯಲ್ಲಿ ಸಂಘದ ಬೇಡಿಕೆಗಳನ್ನು ಈಡೇರಿಸುವ ಕುರಿತು ಉಪ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಭರವಸೆ ನೀಡಿದರು.ಆನಂತರ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತಾತ್ಕಾಲಿಕವಾಗಿ ಮುಷ್ಕರ ಅಂತ್ಯಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು.ಕಸ ವಿಲೇವಾರಿ: ಬಿಬಿಎಂಪಿ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿರುವ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಶುಕ್ರವಾರ ಕಸ ವಿಲೇವಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕೆಲವು ವಾರ್ಡ್‌ಗಳಲ್ಲಿ ಬೆಳಿಗ್ಗೆಯಿಂದಲೇ ಕಸ ತೆಗೆಯುವ ಮೂಲಕ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.ಮೂರು ದಿನಗಳಿಂದ ಕಸ ಸಂಗ್ರಹಿಸದೆ ಇರುವುದರಿಂದ ನಗರದಲ್ಲಿ ಎಲ್ಲೆಲ್ಲೂ ತ್ಯಾಜ್ಯದ ರಾಶಿಯೇ ಕಂಡು ಬರುತ್ತಿತ್ತು. ಪ್ರತಿ ದಿನ ಮೂರು ಸಾವಿರ ಟನ್‌ಗಳಂತೆ, ಮೂರು ದಿನಗಳಿಗೆ ಸುಮಾರು ಒಂಬತ್ತು ಸಾವಿರ ಟನ್‌ಗಳಷ್ಟು ಕಸ ಎಲ್ಲೆಂದರಲ್ಲಿ ಬಿದ್ದಿತ್ತು.`ಶನಿವಾರದಿಂದ ಎಲ್ಲ ಪೌರ ಕಾರ್ಮಿಕರು ಕಸ ವಿಲೇವಾರಿ ಕಾರ್ಯದಲ್ಲಿ ತೊಡಗುವುದರಿಂದ ಒಂದು ದಿನದಲ್ಲಿ ನಗರ ಸ್ವಚ್ಛ ನಗರವಾಗಿ ಮಾರ್ಪಡಲಿದೆ~ ಎಂದು ಮೇಯರ್ ಡಿ. ವೆಂಕಟೇಶಮೂರ್ತಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.