13ರಿಂದ ಆಸ್ಕಿಹಾಳ ಗೋವಿಂದದಾಸರ ಸ್ಮರಣೋತ್ಸವ

7

13ರಿಂದ ಆಸ್ಕಿಹಾಳ ಗೋವಿಂದದಾಸರ ಸ್ಮರಣೋತ್ಸವ

Published:
Updated:

ರಾಯಚೂರು: ಆಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವ ಅಂಗವಾಗಿ `ಗೋವಿಂದ ಗಾನ~ ಕಾರ್ಯಕ್ರಮ ಇದೇ 13 ಮತ್ತು 14ರಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಹರಿದಾಸ ಸೇವಾ ಇಂಟರ್‌ನ್ಯಾಶನಲ್ ಟ್ರಸ್ಟ್‌ನ ಅಧ್ಯಕ್ಷ ರಾಯಚೂರು ಶೇಷಗಿರಿದಾಸ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಸ ಪರಂಪರೆಯ ವಿವಿಧ ದಾಸರ ಕುರಿತು ರಾಜ್ಯ, ಹೊರ ರಾಜ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಲವಾರು ಕಾರ್ಯಕ್ರಮ ಆಯೋಜಿಸುತ್ತ ಬಂದಿವೆ. ಹರಿದಾಸ ಸೇವಾ ಇಂಟರ್‌ನ್ಯಾಶನಲ್ ಟ್ರಸ್ಟ್  ಸಂಸ್ಥೆಯ ಆ ರೀತಿ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ. ಈಗ ಹರಿದಾಸ ತೊಟ್ಟಿಲು ಎಂದೇ ಕರೆಯಲ್ಪಡುವ ರಾಯಚೂರು ಸಮೀಪದ ಆಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವ ಕಾರ್ಯಕ್ರಮವನ್ನು ವಿಶಿಷ್ಟ ರೀತಿ ಆಚರಿಸುವ ಉದ್ದೇಶದಿಂದ ಗೋವಿಂದ ಗಾನ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.ಆಸ್ಕಿಹಾಳ ಗ್ರಾಮದ ಗೋವಿಂದ ದಾಸರು  ಈ ಭಾಗದ ಜನರ ಮನದಾಳದಲ್ಲಿ ಹರಿ ಭಜನೆಯನ್ನು ಬಿತ್ತುವ ದೊಡ್ಡ ಕ್ರಾಂತಿಯನ್ನೇ ಮಾಡಿ ಗುಡಿಯಿಂದ ಗುಡಿಸಲಿಗೆ ಹರಿನಾಮ ಸ್ಮರಣೆಯನ್ನು ಕೊಂಡೊಯ್ದು ಹರಿಕಾರರು.  ಅವರನ್ನು ಸ್ಮರಣೆ ಮಾಡುವುದೇ ತಮ್ಮ ಭಾಗ್ಯ. ಈ ಹಿನ್ನೆಲೆಯಲ್ಲಿ ಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.13ರಂದು ಸಂಜೆ 5.30ಕ್ಕೆ ಭಜನಾ ಮಂಡಳಿಗಳಿಂದ ಭಜನೆ, 6.30ಕ್ಕೆ ಗಾಯನ- ಪ್ರವಚನ ಖ್ಯಾತಿಯ ಮೈಸೂರಿನ ದೀಪಿಕಾ ಪಾಂಡುರಂಗಿ ಅವರಿಂದ ದಾಸ ಗೋವಿಂದ ನಮನ ನಡೆಯುವುದು. ಸಂಜೆ 7.30ಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠದ ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ ಅವರು ಉದ್ಘಾಟನೆ ಮಾಡುವರು.ಖ್ಯಾತ ಚಲನಚಿತ್ರ ನಟ ಎಸ್ ಶಿವರಾಮ್ ಮುಖ್ಯ ಅತಿಥಿಯಾಗಿ ಆಗಮಿಸುವರು. ಹರಿದಾಸರ ವಿಶೇಷ ಸೇವೆಗೈದ ಟಿ ಪರಮೇಶರಾವ್ ಮತ್ತು ಟಿ ರಂಗರಾವ್, ಟಿ ನರಸಿಂಗರಾವ್ ಅವರನ್ನು ಸತ್ಕರಿಸಲಾಗುವುದು. 8.30ಕ್ಕೆ ಪುತ್ತೂರು ನರಸಿಂಹ ನಾಯಕ ಅವರಿಂದ ಹರಿದಾಸ ನಾದ ಝೇಂಕಾರ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.ಕಾರ್ಯಕ್ರಮದ ಎರಡನೇ ದಿನವಾದ 14ರಂದು ಸಂಜೆ 5.30ಕ್ಕೆ  ಭಜನಾ ಮಂಡಳಿಗಳಿಂದ ಭಜನೆ ನಂತರ 6.30ಕ್ಕೆ ನೂರು ಮಕ್ಕಳಿಂದ ಗೋವಿಂದ ದಾಸರ ಕೀರ್ತನೆಗಳ ಸಮೂಹಗಾನ ನಡೆಯಲಿದೆ.  7.30ಕ್ಕೆ ಡಾ. ಜಯಲಕ್ಷ್ಮೀ ಮಂಗಳಮೂರ್ತಿ ಅವರಿಂದ ಅಸಿಗ್ಯಾಳು ಗೋವಿಂದದಾಸರು ಎಂಬ ವಿಷಯ ಕುರಿತು ಪ್ರವಚನ ನಡೆಯಲಿದೆ. ನಂತರ ಶಾಂತಾಬಾಯಿ ಎಸ್ ಕೌತಾಳ್ ಅವರಿಗೆ ಸಿರಿಗೋವಿಂದ ವಿಠಲ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.ಆ ದಿನ ರಾತ್ರಿ 8 ಗಂಟೆಗೆ `ಹರಿದಾಸ ಗಾನಲಹರಿ~ ಕಾರ್ಯಕ್ರಮವನ್ನು ಬಾಗಲಕೋಟೆಯ ಅನಂತ ಕುಲಕರ್ಣಿ ಹಾಗೂ ತಾವು ನಡೆಸಿಕೊಡುವುದಾಗಿ ತಿಳಿಸಿದರು.ಆಸ್ಕಿಹಾಳ ಗೋವಿಂದದಾಸರು ಸಮಾಜ ಚಿಂತಕರು, ಸಮಾಜದ ವೈದ್ಯರೇ ಆಗಿದ್ದಾರೆ. ಅವರ ಒಂದೊಂದು ರಚನೆಯಲ್ಲೂ ಮಾನವನ ಬದುಕಿಗೆ ಏನೇನು ಬೇಕು ಅದನ್ನು ಕೊಟ್ಟಿದ್ದಾರೆ. 125 ವರ್ಷಗಳ ಹಿಂದೆಯೇ ಈಗ ನಾವು ಕಾಣುತ್ತಿರುವ ಸಮಾಜದ ಅಧೋಗತಿ ಸ್ಥಿತಿಗತಿಯ ಬಗ್ಗೆ ತಮ್ಮ ರಚನೆಗಳಲ್ಲಿ ಸೂಚ್ಯವಾಗಿ ಎಚ್ಚರಿಸಿದ್ದರು.ಅವರು ಕೆಲವೇ ಕೆಲ ರಚನೆ ದೊರಕಿದ್ದರೂ ಅವರ ಶಿಷ್ಯ ಪಟ್ಟಿ ಸುಮಾರು 40ಕ್ಕೂ ಹೆಚ್ಚು. ಗೋವಿಂದದಾಸರು ಸರ್ವ ವರ್ಗದ ಪ್ರಿಯರು, ಜನಬಂಧು ಆಗಿದ್ದರು. ಪಠ್ಯಗಳಲ್ಲಿ ಈ ದಾಸರ ಪಾಠ ಅಳವಡಿಸಬೇಕು ಎಂದು ಆಸಿಗ್ಯಾಳು ಗೋವಿಂದದಾಸರ ಕುರಿತು ಸಂಶೋಧನಾ ಪ್ರಬಂಧ ಬರೆದ ಹಿರಿಯ ಲೇಖಕಿ ಡಾ. ಜಯಲಕ್ಷ್ಮೀ ಮಂಗಳಮೂರ್ತಿ ಅವರು ವಿವರಿಸಿದರು.ಸಂಚಾಲಕ ಮುರುಳೀಧರ ಕುಲಕರ್ಣಿ, ವೆಂಕಟೇಶ ನವಲಿ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry