ಶುಕ್ರವಾರ, ನವೆಂಬರ್ 22, 2019
22 °C

13 ನಾಮಪತ್ರ ತಿರಸ್ಕೃತ, 153 ಕ್ರಮಬದ್ಧ

Published:
Updated:

ಹಾವೇರಿ: ಜಿಲ್ಲೆಯಲ್ಲಿ ನಾಮಪತ್ರಗಳ ಪರಿಶೀಲನಾ ಕಾರ್ಯ ಗುರುವಾರ ನಡೆದಿದ್ದು, ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಗೆ 103 ಅಭ್ಯರ್ಥಿಗಳು ಸಲ್ಲಿಸಿದ 166 ನಾಮಪತ್ರಗಳಲ್ಲಿ 13 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 153 ನಾಮಪತ್ರಗಳು ಕ್ರಮಬದ್ಧವಾಗಿವೆ.ಹಾವೇರಿ ಕ್ಷೇತ್ರದಲ್ಲಿ ಒಂದು, ಶಿಗ್ಗಾವಿ ಕ್ಷೇತ್ರದಲ್ಲಿ ನಾಲ್ಕು, ಬ್ಯಾಡಗಿ ಕ್ಷೇತ್ರದಲ್ಲಿ ಎರಡು, ಹಾನಗಲ್ ಕ್ಷೇತ್ರದಲ್ಲಿ ಒಂದು, ಹಿರೇಕೆರೂರ ಕ್ಷೇತ್ರದಲ್ಲಿ ಒಂದು ಹಾಗೂ ರಾಣೆಬೆನ್ನೂರ ಕ್ಷೇತ್ರದಲ್ಲಿ ನಾಲ್ಕು ನಾಮಪತ್ರಗಳು ಸೇರಿ ಒಟ್ಟು 13 ನಾಮಪತ್ರಗಳು ತಿರಸ್ಕೃತಗೊಂಡಿದ್ದು, ನಾಮಪತ್ರದಲ್ಲಿ ಸಮರ್ಪಕ ಸೂಚಕರು ಇಲ್ಲದ ಕಾರಣ ಸೇರಿದಂತೆ ಸಣ್ಣಪುಟ್ಟ ಲೋಪ ಹಾಗೂ ಅಸಮರ್ಪಕ ಮಾಹಿತಿ ಇರುವ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಹೇಳಲಾಗಿದೆ.ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಕೆಯಾದ 15 ಅಭ್ಯರ್ಥಿಗಳ 23 ನಾಮಪತ್ರದಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ಡಾ.ಸಂಜಯ ಡಾಂಗೆ ಸಲ್ಲಿಸಿದ ಎರಡು ನಾಮಪತ್ರಗಳಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದ್ದು, ಇನ್ನೊಂದು ನಾಮಪತ್ರ ಕ್ರಮಬದ್ಧವಾಗಿದೆ.ಶಿಗ್ಗಾವಿ ವಿಧಾನಸಭಾ ಕ್ಷೇತ್ರದ 17 ಅಭ್ಯರ್ಥಿಗಳು ಸಲ್ಲಿಸಿದ 28 ನಾಮಪತ್ರಗಳಲ್ಲಿ ನಾಲ್ಕು ನಾಮಪತ್ರಗಳು ತಿರಸ್ಕೃತಗೊಂವೆ. ಉಳಿದ 15 ಅಭ್ಯರ್ಥಿಗಳ 24 ನಾಮಪತ್ರಗಳ ಕ್ರಮಬದ್ಧವಾಗಿವೆ.ಕೆಜೆಪಿ ಅಭ್ಯರ್ಥಿ ಬಾಪುಗೌಡ ಪಾಟೀಲ ಸಲ್ಲಿಸಿದ ಮೂರು ನಾಮಪತ್ರಗಳಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡರೆ, ಮೆಹಬೂಬಸಾಬ್ ಖಾಲೆಬಾಗ್ ಅವರು ಸಲ್ಲಿಸಿದ ಎರಡು ನಾಮಪತ್ರದಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ಜೆಡಿಎಸ್‌ನ ಯಲ್ಲಪ್ಪ ವಿರುಪಾಕ್ಷ ಯಲಂಕಣ್ಣವರ, ಪಕ್ಷೆತರ ಅಭ್ಯರ್ಥಿ ಶಿವಪ್ಪ ರಾಮಪ್ಪ ಖರಾಡೆ ಅವರು ಸಲ್ಲಿಸಿದ ನಾಮಪತ್ರಗಳು ತಿರಸ್ಕೃತಗೊಂಡು ಅವರು ಕಣದಿಂದ ಹೊರ ಬಿದ್ದಿದ್ದಾರೆ. ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳ 32 ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ಸಂದರ್ಭದಲ್ಲಿ ಎರಡು ನಾಮಪತ್ರಗಳು ತಿರಸ್ಕೃತಗೊಂಡು 17 ಅಭ್ಯರ್ಥಿಗಳ 30 ನಾಮಪತ್ರಗಳು ಕ್ರಮಬದ್ಧವಾಗಿವೆ.ಪಕ್ಷೇತರ ಅಭ್ಯರ್ಥಿ ಮಹಾದೇವಪ್ಪ ಪಂಚಾನನ ಅವರ ನಾಮಪತ್ರ ತಿರಸ್ಕೃತಗೊಂಡು ಅವರು ಸ್ಪರ್ಧಾ ಕಣದಿಂದ ಹೊರಗೆ ಹೋಗಿದ್ದಾರೆ.ರಾಣೆಬೆನ್ನೂ ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು 39 ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ನಾಲ್ಕು ನಾಮಪತ್ರಗಳು ತಿರಸ್ಕೃತಗೊಂಡಿವೆ. 14 ಅಭ್ಯರ್ಥಿಗಳ 35 ನಾಮಪತ್ರಗಳು ಕ್ರಮಬದ್ಧವಾಗಿವೆ. ಜೆಡಿಎಸ್ ಹಾಗೂ ಪಕ್ಷೇತರನಾಗಿ ಎರಡು ನಾಮಪತ್ರ ಸಲ್ಲಿಸಿದ್ದ ಮೋಹನ ಹಂಡೆ ಅವರ ಜೆಡಿಎಸ್ ಪಕ್ಷದಿಂದ ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಮುಂದುವರೆಯಲಿದ್ದಾರೆ. ಇನ್ನಿಬ್ಬರು ಪಕ್ಷೇತರರಾದ ನೀಲಕಂಠಪ್ಪ ಗುಡಗೂರು, ಶಿವಯೋಗಿ ಮಹಾನುಭಾವಿಮಠಯವರ ನಾಮಪತ್ರ ತಿರಸ್ಕೃತಗೊಂಡು ಅವರು ಕಣದಿಂದ ಹೊರಹೋಗಿದ್ದಾರೆ. ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು 22 ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡು 21 ನಾಮಪತ್ರಗಳು ಕ್ರಮಬದ್ಧವಾಗಿವೆ.ಬಿಎಸ್‌ಆರ್ ಕಾಂಗ್ರೆಸ್‌ನ ಅಭ್ಯರ್ಥಿ ಎಚ್. ಎಂ.ಅಶೋಕ ಅವರು ಸಲ್ಲಿಸಿದ ಎರಡು ನಾಮಪತ್ರಗಳಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ಅವರ ಇನ್ನೊಂದು ನಾಮಪತ್ರ ಕ್ರಮಬದ್ಧವಾಗಿರುವುದರಿಂದ ಅವರು ಕಣದಲ್ಲಿ ಉಳಿಯಲಿದ್ದಾರೆ. ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳು 22 ಸಲ್ಲಿಕೆಯಾಗಿದ್ದವು. ಒಂದು ನಾಮಪತ್ರ ತಿರಸ್ಕೃತಗೊಂಡಿದೆ. 18 ಅಭ್ಯರ್ಥಿಗಳಿಂದ 21 ನಾಮಪತ್ರಗಳು ಕ್ರಮಬದ್ಧವಾಗಿವೆ.ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಖಾಜಾಮುದ್ದಿನ್ ಅಣ್ಣಿಗೇರಿ ಅವರು ಜೆಡಿಎಸ್‌ನಿಂದ `ಬಿ' ಫಾರ್ಮ್ ನೀಡಲು ಸಾಧ್ಯವಾಗದ ಕಾರಣ, ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಪಕ್ಷೇತರ ಅಭ್ಯರ್ಥಿಯಾಗಿ ಅವರು ಕಣದಲ್ಲಿ ಉಳಿದಿದ್ದಾರೆ.

ಜಿಲ್ಲಾಡಳಿದಿಂದ ಅಸಮರ್ಪಕ ಮಾಹಿತಿ

ಹಾವೇರಿ: ಅಧಿಕಾರಿಗಳನ್ನು ನೇಮಕ ಮಾಡಿರುವ ಮಾಹಿತಿ ಮಾಧ್ಯಮಗಳಿಗೆ ಸರಿಯಾಗಿ ನೀಡಿದ್ದು ಬಿಟ್ಟರೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ತಿರಸ್ಕೃತಗೊಂಡ ನಾಮಪತ್ರಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ಜಿಲ್ಲಾ ಚುನಾವಣಾ ಇಲಾಖೆ ಸಂಪೂರ್ಣ ವಿಫಲವಾಗಿದೆ.ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಪ್ರತಿಯೊಂದು ವಿಭಾಗಕ್ಕೂ ಹತ್ತಾರು ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ನೇಮಕ ಮಾಡಿಕೊಂಡಿರುವ ಜಿಲ್ಲಾಡಳಿತ, ಯಾವುದೇ ಒಂದು ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಾಗೂ ಸಮರ್ಪಕವಾಗಿ ನೀಡುತ್ತಿಲ್ಲ. ಗುರುವಾರ ನಾಮಪತ್ರ ಪರಿಶೀಲನಾ ಕಾರ್ಯವನ್ನು ಅಧಿಕಾರಿಗಳು ಮಧ್ಯಾಹ್ನ 3 ಗಂಟೆಗೆ ಮುಗಿಸಿದ್ದರೂ, ಅದರ ಮಾಹಿತಿಯನ್ನು ಮಾಧ್ಯಮದವರಿಗೆ ರಾತ್ರಿ 8.40 ರವರೆಗೆ ನೀಡಿರಲಿಲ್ಲ.ಈ ಕುರಿತ ಮಾಧ್ಯಮದವರು ವಾರ್ತಾಧಿಕಾರಿಗಳನ್ನು, ಚುನಾವಣಾ ವಿಭಾಗದ ಅಧಿಕಾರಿಗಳನ್ನು ಹಾಗೂ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದರೂ, ಇನ್ನೈದು ನಿಮಿಷದಲ್ಲಿ ಬರಲಿದೆ ಎಂಬ ಸಿದ್ಧ ಉತ್ತರ ದೊರೆಯಿತೆ ವಿನಃ, ಯಾವುದೇ ಮಾಹಿತಿ ಸಿಗಲಿಲ್ಲ.

ಪ್ರತಿಕ್ರಿಯಿಸಿ (+)