13 ಸಾವಿರ ಮನೆಗಳು ರದ್ದು

7
ಬಸವ ವಸತಿ ಯೋಜನೆ: ಅನುಷ್ಠಾನದಲ್ಲಿ ನಿರ್ಲಕ್ಷ್ಯ

13 ಸಾವಿರ ಮನೆಗಳು ರದ್ದು

Published:
Updated:

ಕೋಲಾರ: ಬಸವ ವಸತಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದ ಪರಿಣಾಮವಾಗಿ ಜಿಲ್ಲೆಯಲ್ಲಿ 13 ಸಾವಿರ ಮನೆಗಳ ಅನುದಾನವನ್ನು  ಸರ್ಕಾರ ವಾಪಸ್ ಪಡೆದಿದೆ. ಹೀಗಿ­ದ್ದರೂ ಯೋಜನೆಯ ಅನುಷ್ಠಾನದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗಂಭೀರವಾಗಿ ತೊಡಗಿಸಿಕೊಂಡಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.­ಜುಲ್ಫಿಕಾರ್ ಉಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ಕುರಿತು ಏರ್ಪ­ಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯಲ್ಲಿ ಜಿಲ್ಲೆಗೆ 40 ಸಾವಿರ ಮನೆಗಳು ಮಂಜೂರಾಗಿದ್ದವು. ಅವುಗಳ ಪೈಕಿ 34 ಸಾವಿರ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ­ಯಾಗಿತ್ತು. ನಂತರದ 3 ತಿಂಗಳಲ್ಲಿ ಮನೆ ಕಟ್ಟುವ ಪ್ರಕ್ರಿಯೆ ಶುರುವಾಗಲಿಲ್ಲ. ಗಡುವನ್ನು ನಂತರ 6 ತಿಂಗಳು ವಿಸ್ತರಿಸಿದರೂ ನಿರ್ಮಾಣ ಕಾರ್ಯ ಶುರುವಾಗದ ಹಿನ್ನೆಲೆಯಲ್ಲಿ ಸರ್ಕಾರ 13 ಸಾವಿರ ಮನೆಗಳ ಅನುದಾನವನ್ನು ವಾಪಸು ಪಡೆಯಿತು ಎಂದು ವಿವರಿಸಿದರು.ಇದೀಗ ಇಂದಿರಾ ಆವಾಸ್ ಯೋಜನೆಯ ಅಡಿ ಮನೆಗಳನ್ನು ನಿರ್ಮಿ­ಸುವ ಕಾರ್ಯದಲ್ಲೂ ಅಭಿವೃದ್ಧಿ ಅಧಿಕಾರಿಗಳು  ಬೇಜವಾಬ್ದಾರಿ ತೋರು­ತ್ತಿದ್ದಾರೆ. ಯೋಜನೆಯಡಿ ಚೆಕ್‌ಗಳನ್ನು ವಿತರಿಸಲಾಗಿದ್ದರೂ, ಆ ಬಗ್ಗೆ ಆನ್‌­ಲೈನ್ ನಲ್ಲಿ ಮಾಹಿತಿಯನ್ನು ಸಮ­ರ್ಪಕ­ವಾಗಿ ದಾಖಲಿಸುತ್ತಿಲ್ಲ. ಮನೆ ನಿರ್ಮಾಣ­ವಾಗದಿದ್ದರೂ ಹಣ ಮಂಜೂರು ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.ವಸತಿ ಯೋಜನೆಗಳ ಅನುಷ್ಠಾನ­ದಲ್ಲಿ ಜಿಲ್ಲೆಯ ಇತರೆ ತಾಲ್ಲೂಕು­ಗಳಿಗಿಂತಲೂ ಶ್ರೀನಿವಾಸಪುರ ಬಹಳ ಹಿಂದೆ ಉಳಿದಿದೆ. ಇಂದಿರಾ ಆವಾಸ್ ಯೋಜನೆಯಲ್ಲಿ ಶೇ 70 ಮತ್ತು ಬಸವ ವಸತಿ ಯೋಜನೆಯಲ್ಲಿ ಶೇ 35ರಷ್ಟು ಮಾತ್ರ ಪ್ರಗತಿಯಾಗಿದೆ. ಆದರೂ ಗ್ರಾಮ ಸಭೆಯನ್ನು ಸರಿಯಾದ ರೀತಿ­ಯಲ್ಲಿ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರೆ ತಮ್ಮ ಆಕ್ಷೇಪವಿರು­ವುದಿಲ್ಲ ಎಂದು ಶಾಸಕ ಕೆ.ಆರ್.­ರಮೇಶ್‌ಕುಮಾರ್ ಹೇಳಿದ್ದಾರೆ. ಫಲಾ­ನು­ಭವಿಗಳ ಪಟ್ಟಿಯನ್ನು ಅಂತಿಮವಾಗಿ ಸಿದ್ಧಪಡಿಸಲು ಜ,10ರವರೆಗೆ ಗಡುವು ನೀಡಲಾಗಿದೆ. ಅಂದು ನಡೆಯುವ ಸಭೆಗೆ ಗ್ರಾಮ ಸಭೆಗಳನ್ನು ನಡೆಸಿದ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಅವರು ಸೂಚಿಸಿದರು.ವಸತಿ ಯೋಜನೆಗಳ ಪ್ರಗತಿ ಕಡಿಮೆ ಇದ್ದರೂ ಹೆಚ್ಚಾಗಿದೆ ಎಂದು ಆನ್‌ಲೈನ್ ನಲ್ಲಿ ನಮೂದಿಸುವುದರಿಂದ ಫಲಾನು­ಭವಿಗಳಿಗೆ ತೊಂದರೆಯಾಗು­ತ್ತದೆ. ಅನುದಾನ ವಾಪಸು ಹೋಗುತ್ತದೆ ಎಂಬ ಕಾರಣದಿಂದ ಇಲ್ಲದ ಪ್ರಗತಿ­ಯನ್ನು ದಾಖಲಿಸುವುದು ಬೇಡ. ಹಾಗೆ ಮಾಡಿದರೆ ಅಭಿವೃದ್ಧಿ ಅಧಿಕಾರಿ ಮತ್ತು ತಾಲ್ಲೂಕು ಪಂಚಾಯತಿ ಕಾರ್ಯ­ನಿರ್ವಹಣಾಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.1.70 ಕೋಟಿ ವ್ಯತ್ಯಾಸ: ಮಾಲೂರು ತಾಲ್ಲೂಕಿನಲ್ಲಿ ಪಡೆದ ಅನುದಾನಕ್ಕೂ ಮತ್ತು ಖರ್ಚಾಗಿರುವುದಕ್ಕೂ ₨ 1.70 ಕೋಟಿ ವ್ಯತ್ಯಾಸ ಕಂಡುಬಂದಿದೆ. ರಾಜ­ಕಾರಣಿಗಳು ಒತ್ತಡ ಹೇರುತ್ತಾರೆ ಎಂಬ ಕಾರಣಕ್ಕೆ ನಿಂತಿದ್ದ ಸ್ಥಳದಲ್ಲೇ ಚೆಕ್‌ಗಳಿಗೆ ಸಹಿ ಮಾಡಿ ನೀಡುವ ಪ್ರವೃತ್ತಿಯನ್ನು ಕೈ ಬಿಡಬೇಕು. ಒತ್ತಡವನ್ನು ನಿರ್ವಹಣೆ ಮಾಡಿ ಸರಿಯಾದ ರೀತಿ ಕೆಲಸ ಮಾಡ­ಬೇಕು. ಇಲ್ಲವಾದರೆ ವ್ಯತ್ಯಾಸದ ಮೊತ್ತ­ವನ್ನು ದಾಖಲೀಕರಣ ಮಾಡಲು ತೊಂದರೆ ಉಂಟಾಗುತ್ತದೆ ಎಂದು ಹೇಳಿದರು.ತರಾಟೆ: ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯ ಕರಡುಪಟ್ಟಿ ಪ್ರಕ­ಟಣೆಯ ಬಳಿಕ ಕೈಗೊಳ್ಳಬೇಕಾದ ಕ್ರಮ­ಗಳ ಕುರಿತು ಮಾಹಿತಿ ನೀಡಲು ಏರ್ಪ­ಡಿಸಿದ್ದ ಸಭೆಯಲ್ಲಿ ಹಾಜರಿದ್ದವರಿಗೆ ಪೂರಕ ಸಾಮಗ್ರಿ ನೀಡದಿರುವ ಹಿನ್ನೆಲೆ­ಯಲ್ಲಿ ಮುಖ್ಯ ಯೋಜನಾಧಿಕಾರಿ ಆರೋಕ್ಯ ಸ್ವಾಮಿಯವರನ್ನು ಜುಲ್ಫಿಕಾರ್ ಉಲ್ಲಾ ತೀವ್ರ ತರಾಟೆಗೆ ತೆಗೆದುಕೊಂಡರು.ಮಾಹಿತಿ ನೀಡಲು ದ್ವಿತೀಯ ದರ್ಜೆಯ ಗುಮಾಸ್ತರನ್ನು ನಿಯೋಜಿಸಿ ತಾವು ಸುಮ್ಮನಿದ್ದರೆ ಹೇಗೆ ಎಂದು ಅವರು ಆರೋಕ್ಯಸ್ವಾಮಿಯವರನ್ನು ಪ್ರಶ್ನಿಸಿ­ದರು. ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ವಿವರಣೆ ನೀಡುವ ಬದಲಿಗೆ ಮಾಹಿತಿ ಪತ್ರ­ಗಳನ್ನೂ ನೀಡದೆ ಹಳೆಯ ಕಾಲದ ಪದ್ಧತಿಯಂತೆ ಸುಮ್ಮನೆ ನಿಂತು ಭಾಷಣ ಮಾಡಿದರೆ ಏನೂ ಪ್ರಯೋಜನ­ವಾಗು­ವುದಿಲ್ಲ ಎಂದು ಮುಖ್ಯ ತರಬೇತುದಾರ ನಾರಾಯಣಾಚಾರ್ ಅವರನ್ನೂ ತರಾಟೆಗೆ ತೆಗೆದುಕೊಂಡರು. ಪೂರಕ ಸಾಮಗ್ರಿಗಳನ್ನು ಜೆರಾಕ್ಸ್ ಮಾಡಿ ತರಲು ಈ ಸಿಬ್ಬಂದಿ ಹೊರ­ನಡೆದಾಗ ಸಮಯ ವ್ಯರ್ಥವಾಗ­ಬಾರದು ಎಂಬ ಕಾರಣಕ್ಕೆ ವಸತಿ ಯೋಜನೆ ಮತ್ತು ಉದ್ಯೋಗಖಾತ್ರಿ ಯೋಜನೆ ಜಾರಿ ಪ್ರಗತಿ ಕುರಿತು ಸಭೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry