ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಗ್ರಾಮಗಳಲ್ಲಿ ಹೋರಾಟದ ಕಿಡಿ

Last Updated 26 ಆಗಸ್ಟ್ 2011, 9:20 IST
ಅಕ್ಷರ ಗಾತ್ರ

ಮಂಗಳೂರು: ಕೊಚ್ಚಿ-ಕುಟ್ಟನಾಡು-ಮಂಗಳೂರು-ಬೆಂಗಳೂರು ನಡುವೆ ನೈಸರ್ಗಿಕ ಅನಿಲ ಸಾಗಿಸುವ ಪೈಪ್‌ಲೈನ್ ಯೋಜನೆ ವಿರುದ್ಧ ಪ್ರತಿಭಟನೆಯ ಕಿಡಿ ಹೊತ್ತಿಕೊಂಡಿದ್ದು, ಮುಂದಿನ ಹಂತದಲ್ಲಿ ತೀವ್ರ ತರವಾದ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.

ಗುರುಪುರದ ವೈದ್ಯನಾಥ ಸಭಾಂಗಣದಲ್ಲಿ ಗುರುವಾರ 13 ಗ್ರಾಮಗಳ ಗ್ರಾಮಸ್ಥರ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ನೂರಕ್ಕೂ ಅಧಿಕ ಮಂದಿ ಯಾವುದೇ ಕಾರಣಕ್ಕೂ ಪೈಪ್‌ಲೈನ್‌ಗೆ ಅವಕಾಶ ನೀಡಬಾರದು,  ಸಂಘಟಿತ ಹೋರಾಟ ನಡೆಸಬೇಕು ಎಂದು ತೀರ್ಮಾನಿಸಿದರು.

ಮುಂಬರುವ ದಿನಗಳಲ್ಲಿ ಪ್ರತಿ ಊರಿನಲ್ಲಿ ಸಭೆ, ಜಿಲ್ಲಾಧಿಕಾರಿ ಅವರಿಗೆ ಮನವಿ, ಧಾರ್ಮಿಕ ನಾಯಕರ ಸಲಹೆ-ಸೂಚನೆ ಪಡೆದು ಉಗ್ರ ಹೋರಾಟ ನಡೆಸಬೇಕು. ಜನಪ್ರತಿನಿಧಿಗಳು ಹಾಗೂ ಹೋರಾಟಗಾರರನ್ನು ಚಳವಳಿಯಲ್ಲಿ ಸೇರಿಸಿಕೊಳ್ಳಬೇಕು. ಯೋಜನೆ ವಿರುದ್ಧ ಕಾನೂನು ಹೋರಾಟ ನಡೆಸಬೇಕು ಎಂದೂ ಸಭೆ ನಿರ್ಧರಿಸಿತು.

ಸರ್ಕಾರೇತರ ಸೇವಾ ಸಂಸ್ಥೆ `ಆಮ್ನೆಸ್ಟಿ ಇಂಟರ್‌ನ್ಯಾಷನಲ್~ ಮಹಾ ಪ್ರಧಾನ ಕಾರ್ಯದರ್ಶಿ ಸಲೀಲ್ ಶೆಟ್ಟಿ ಇದೇ 30ರಂದು ಮಂಗಳೂರಿಗೆ ಆಗಮಿಸಲಿದ್ದು, 13 ಗ್ರಾಮಗಳ ಗ್ರಾಮಸ್ಥರು ಸೇರಿ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಕೇಂದ್ರ ಸರ್ಕಾರ ಸ್ವಾಮ್ಯದ ಗ್ಯಾಸ್ ಅಥಾರಿಟಿ ಆಫ್ ಇಂಡಿಯ(ಗೇಲ್) ಕಂಪೆನಿ ಕೊಚ್ಚಿನ್‌ನಿಂದ ಬೆಂಗಳೂರಿಗೆ ನೈಸರ್ಗಿಕ ಅನಿಲ ಸಾಗಿಸುವ ಸಲುವಾಗಿ ನೆಲದಡಿ ಬೃಹತ್ ಕೊಳವೆ ಅಳವಡಿಕೆ ಸಂಬಂಧ ಭೂಸ್ವಾಧೀನಕ್ಕೆ ಸಂಬಂಧಿಸಿ ಸರ್ಕಾರದ ಸಕ್ಷಮ ಪ್ರಾಧಿಕಾರದಿಂದ ರೈತರಿಗೆ ನೋಟಿಸ್ ಜಾರಿಯಾಗಿದ್ದು, 21 ದಿನಗಳಲ್ಲಿ ಪ್ರತಿಕ್ರಿಸಲು ಸೂಚಿಸಲಾಗಿದೆ.
 
ಮಂಗಳೂರು, ಬೆಂಗಳೂರು, ರಾಮನಗರ ಜಿಲ್ಲೆಗಳ ಐದು ತಾಲ್ಲೂಕಿನ ವ್ಯಾಪ್ತಿಯ 55 ಗ್ರಾಮಗಳಲ್ಲಿ ಪೈಪ್‌ಲೈನ್ ಹಾದು ಹೋಗಲಿದೆ. ಬಂಟ್ವಾಳ, ಮಂಗಳೂರು ತಾಲ್ಲೂಕಿನ 13 ಗ್ರಾಮಗಳಲ್ಲಿ ಪೈಪ್‌ಲೈನ್ ಹಾದು ಹೋಗಲಿದೆ. ತೋಕೂರಿನಲ್ಲಿ 2.6 ಹೆಕ್ಟೇರ್, ಕೆಂಜಾರು- 5.1, ಮಳವೂರು- 3.6, ಅದ್ಯಪಾಡಿ- 5.7, ಕಂದಾವರ- 1.5, ಅಡ್ಡೂರು- 5.6, ಮಲ್ಲೂರು- 3,3, ಪಾವೂರು- 5.5, ಮೇರಮಜಲು- 6.2, ಕೈರಂಗಳ- 4, ಅರ್ಕುಳ- 3.8, ಅಮ್ಮುಂಜೆ- 1.7, ಬಾಳೆಪುಣಿಯಲ್ಲಿ 0.03 ಹೆಕ್ಟೇರ್ ಭೂಮಿ ಪೈಪ್‌ಲೈನ್‌ಗೆ ಬಳಕೆಯಾಗಲಿದೆ ಎಂದು ಸಭೆಯಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.

ನೋಟಿಸ್‌ನಲ್ಲಿ: 5 ಅಡಿ ಆಳದಲ್ಲಿ ಉಕ್ಕಿನ 30 ಅಂಗುಲ ವ್ಯಾಸದ ಪೈಪ್ ಅಳವಡಿಸಲಾಗುತ್ತದೆ. ಪ್ರತಿ ಹಿಡುವಳಿದಾರರ ಜಮೀನಿನಲ್ಲಿ 66 ಅಡಿ ಅಗಲ ಭೂಮಿ ಉಪಯೋಗಿಸಲಾಗುತ್ತದೆ. ಪೈಪ್ ಅಳವಡಿಸಲು ಬಳಸಿದ ಭೂಮಿಗೆ ಮಾರುಕಟ್ಟೆ ಬೆಲೆಯ ಶೇ. 10ರಷ್ಟು ಪರಿಹಾರವಾಗಿ ನೀಡಲಾಗುತ್ತದೆ. ಬೆಳೆ ಹಾನಿಗೂ ಸೂಕ್ತ ಪರಿಹಾರ ನೀಡಲಾಗುವುದು. ಬಳಿಕ ಭೂಮಿ ಮಟ್ಟ ಮಾಡಿ ರೈತರಿಗೆ ವಾಪಸ್ ನೀಡಲಾಗುತ್ತದೆ.

ಪೈಪ್ ಹಾದು ಹೋಗುವಲ್ಲಿ ರಸ್ತೆ ನಿರ್ಮಿಸುವುದಿಲ್ಲ. ಪೈಪ್‌ಲೈನ್ ಜಾಗದಲ್ಲಿ ಮನೆ ನಿರ್ಮಾಣ, ಬಾವಿ ತೆಗೆಯುವುದು, ಆಳಕ್ಕೆ ಬೇರಿಳಿಸುವವಂತ ಗಿಡ ನೆಡುವುದು, ಬಡಾವಣೆ ನಿರ್ಮಾಣ ಕಾರ್ಯ ಕೈ ಬಿಡಬೇಕು. ಸಾಮಾನ್ಯ ಕೃಷಿಗೆ, ನೀರಾವರಿ ಪೈಪ್ ಹಾಕಲು ತೊಂದರೆ ಇಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ನೋಟಿಸ್‌ನ ಅಂಶಗಳನ್ನು ಗ್ರಾಮಸ್ಥರು ನಂಬಲು ಸಿದ್ಧರಿಲ್ಲ. 2000ರಲ್ಲಿ ಎಂಆರ್‌ಪಿಎಲ್ ಪೈಪ್‌ಲೈನ್ ಅಳವಡಿಸುವ ವೇಳೆಗೆ ಇದೇ ರೀತಿ ಭರವಸೆ ನೀಡಲಾಗಿತ್ತು. ಆದರೆ, ನಂತರದಲ್ಲಿ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಯಿತು ಎಂಬುದು ಸ್ಥಳೀಯರ ವಾದ.

ಪೈಪ್‌ಲೈನ್ ವಿರುದ್ಧ ಹೋರಾಟ ಸಮಿತಿ ರಚಿಸಿಕೊಂಡ ಗ್ರಾಮಸ್ಥರು ಅದ್ಯಪಾಡಿ ಆದಿನಾಥೇಶ್ವರ ದೇವಸ್ಥಾನದಲ್ಲಿ ಆ. 19ರಂದು 3 ಗ್ರಾಮಗಳವರು ಮೊದಲ ಸಭೆ ನಡೆಸಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿದ್ದರು. ಯೋಜನೆ ವಿರುದ್ಧ ಸಾಮೂಹಿಕ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಆಕ್ಷೇಪ ತಿಳಿಸಲು ನಿರ್ಧರಿಸಲಾಗಿತ್ತು ಎಂದು ಹೋರಾಟ ಸಮಿತಿಯ ಕೃಷ್ಣಪ್ರಸಾದ್ ರೈ ಮಾಹಿತಿ ನೀಡಿದರು.
ಉಪಾಧ್ಯಕ್ಷ ಫ್ರಾನ್ಸಿಸ್ ಪಿಂಟೋ, ಪ್ರಮುಖರಾದ ಸುಜೀರ್ ಕುಮಾರ್ ಶೆಟ್ಟಿ ಮತ್ತಿತರರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT