ಗುರುವಾರ , ನವೆಂಬರ್ 21, 2019
20 °C

139 ಅಕ್ರಮ ಗ್ಯಾಸ್ ಸಿಲಿಂಡರ್ ವಶ!

Published:
Updated:

ಕೊಪ್ಪ: ಇಲ್ಲಿನ ರಾಘವೇಂದ್ರ ನಗರ ಬಡಾವಣೆಯ ವಾಸದ ಮನೆ ಯೊಂದರಲ್ಲಿ ಆಕ್ರಮವಾಗಿ ಸಂಗ್ರಹಿ ಸಿಟ್ಟಿದ್ದ 139 ಅಡುಗೆ ಅನಿಲ ಸಿಲಿಂಡರ್‌ಗಳನ್ನು ಡಿವೈಎಸ್‌ಪಿ ಜಗದೀಶ್ ನೇತೃತ್ವದಲ್ಲಿ ಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ಎಸ್.ಪಿ. ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ.ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ರಿಂದ ಪಳನಿಸ್ವಾಮಿ ಎಂಬವರು 2 ತುಂಬಿದ ಅನಿಲ ಸಿಲಿಂಡರ್‌ಗಳನ್ನು ಪಡೆದುಕೊಂಡಿದ್ದು, ಇದನ್ನು ಮನೆಗೆ ತೆಗೆದುಕೊಂಡು ಹೋಗು ವುದಕ್ಕಾಗಿ ಪಟ್ಟಣದ ಅಂಗಡಿಯೊಂದರ ಎದುರು ಗಡೆ ಇಟ್ಟಿದ್ದರು. ರಾತ್ರಿಯಾದರೂ ಸಿಲಿಂಡರ್ ತೆಗೆದುಕೊಂಡು ಹೋಗದ ಕಾರಣ ಅಂಗಡಿ ಮಾಲೀಕರು ಸಿಲಿಂಡರ್‌ಗಳನ್ನು ಅಂಗಡಿಯ ಹೊರಗೆಯೇ ಬಿಟ್ಟು ಬಾಗಿಲು ಹಾಕಿ ಮನೆಗೆ ಹೋಗಿದ್ದರು. ರಾತ್ರಿ ಹೊತ್ತಿನಲ್ಲಿ ಸಿಲಿಂಡರ್‌ಗಳನ್ನು ಯಾರೋ ಹೊತ್ತೊಯ್ದಿದ್ದು ಸಿಲಿಂಡರ್ ಕಾಣೆಯಾಗಿರುವ ಬಗ್ಗೆ ಪಳನಿಸ್ವಾಮಿ ಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಪಳನಿ ಸ್ವಾಮಿ ಮನೆಯನ್ನು ಶೋಧಿಸಲು ತೆರಳಿದಾಗ ಅಲ್ಲಿ ಅಚ್ಚರಿ ಕಾದಿತ್ತು.

ಗ್ಯಾಸ್ ಏಜೆನ್ಸಿ ಗೋಡೌನ್‌ನ್ನೂ ಮೀರಿಸುವಂತೆ ಮನೆ ಯೊಳಗೆ ಅಕ್ರಮವಾಗಿ 139 ಸಿಲಿಂಡರ್ ಸಂಗ್ರಹಿಸಿಡಲಾಗಿತ್ತು. ತಕ್ಷಣ ಎಲ್ಲಾ ಸಿಲಿಂಡರ್‌ಗಳನ್ನು ವಶ ಪಡಿಸಿ ಕೊಳ್ಳಲಾಗಿದೆ. ಇದೇ ಸ್ಥಳದಲ್ಲಿ ವಾಹನಗಳಿಗೆ ಗ್ಯಾಸ್ ತುಂಬಿಸಲು ಬಳಸುತ್ತಿದ್ದ ಗ್ಯಾಸ್ ಫಿಲ್ಲರ್ ಒಂದನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಅಕ್ರಮ ಅನಿಲ ಸಿಲಿಂಡರ್ ಸಂಗ್ರಹ ಮತ್ತು ಗ್ಯಾಸ್ ಫಿಲ್ಲರ್ ಹೊಂದಿದ್ದ ಆರೋಪದ ಮನೆ ಮಾಲೀಕ ಪಳನಿ ಸ್ವಾಮಿ (ಮಣಿ) ಎಂಬವರ ಮೇಲೆ ಪ್ರಕ ರಣ ದಾಖಲಿಸಲಾಗಿದೆ. ಕೊಪ್ಪ ತಹಶೀ ಲ್ದಾರ್ ಡಿ. ಲಿಂಗಪ್ಪಗೌಡ, ಆಹಾರ ನಿರೀಕ್ಷಕ ಶ್ರಿಕಾಂತ್ ಸ್ಥಳ ಪರಿಶೀಲನೆ ನಡೆಸಿದರು. ಕಾರ್ಯಾಚರಣೆಯಲ್ಲಿ ಪಿಎಸ್ಸೈ ಗವಿರಾಜ್, ಸಿಬ್ಬಂದಿ ಶಿವಶಂಕರ್, ಜೋನಿ, ಡಿ.ವಿ. ಗಂಗಾಧರಪ್ಪ, ನಾಗರಾಜ್, ಶಿವಾನಂದ್, ಮಂಜುನಾಥ್ ಗೌಡ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)